ರಾಮನಗರ: ದರ್ಗಾದ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ, ಆಸ್ಪತ್ರೆಗೆ ಶಾಸಕರ ಭೇಟಿ
ರಾಮನಗರ, ನವೆಂಬರ್ 20: ದರ್ಗಾದ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ರಾಮನಗರದಲ್ಲಿ ನಡೆದಿದೆ. ಯಾರಬ್ ನಗರದಲ್ಲಿನ ಪೀರನ್ ಷಾ ವಲಿ ದರ್ಗಾದಲ್ಲಿ ಉರುಸ್ ಪ್ರಯುಕ್ತ ನೀಡಿದ್ದ ಪ್ರಸಾದ ಸೇವಿಸಿದ ಬಳಿಕ 50ಕ್ಕೂ ಹೆಚ್ಚು ಜನರು ವಾಂತಿ ಬೇದಿಯಿಂದ ಅಸ್ವಸ್ಥರಾಗಿದ್ದಾರೆ.
ದರ್ಗಾದಲ್ಲಿ ಭಾನುವಾರ ಮಧ್ಯಾಹ್ನ ಮಲಿದಾ ಎಂಬ ಸಿಹಿ ಪದಾರ್ಥವನ್ನು ನೀಡಲಾಗಿತ್ತು. ಸಿಹಿ ತಿಂಡಿಯಲ್ಲಿ ವಿಷಕಾರಿ ಅಂಶ ಇದ್ದಿರಬಹುದು ಎಂದು ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಅಸ್ವಸ್ಥಗೊಂಡ ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ರಾಮನಗರ ಪೊಲೀಸರು ಸಿಹಿ ತಿಂಡಿಯ ಮಾದರಿಯನ್ನು ಪರೀಕ್ಷೆಗಾಗಿ ಪಡೆದಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡವರ ಆರೋಗ್ಯದ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಜಿಲ್ಲಾಸ್ಪತ್ರೆಯಲ್ಲಿ ಇನ್ನಷ್ಟು ಬೆಡ್ ವ್ಯವಸ್ಥೆ ಮಾಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್, ರಾಮನಗರದ ಅರ್ಕಾವತಿ ಹೊಳೆ ದಂಡೆಯಲ್ಲಿರುವ ದರ್ಗಾದಲ್ಲಿ ಉರುಸ್ ಹಮ್ಮಿಕೊಳ್ಳಲಾಗಿತ್ತು. ಪ್ರತಿ ವರ್ಷದಂತೆ ಈ ವರ್ಷ ಪೂಜೆ ಮಾಡಿ ಪ್ರಸಾದ ಜನರಿಗೆ ಪ್ರಸಾದ ವಿತರಿಸಲಾಗಿದೆ. ಪ್ರಸಾದ ತಿಂದ ಕೆಲ ಗಂಟೆಗಳಲ್ಲಿ ಕೆಲವರಿಗೆ ಹೊಟ್ಟೆ ನೋವು ಹಾಗೂ ವಾಂತಿ ಕಾಣಿಸಿಕೊಂಡಿದೆ. ತಕ್ಷಣ ಅವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ನಾನು ವಿಚಾರ ತಿಳಿದ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಯಾಕೆ ಹೀಗಾಗಿದೆ ಎನ್ನುವುದು ಗೊತ್ತಿಲ್ಲ. ಅಸ್ವಸ್ಥರ ಆರೋಗ್ಯ ವಿಚಾರಿಸಿದ್ದೇನೆ. ಯಾವುದೇ ತೊಂದರೆ ಇಲ್ಲ ಅಂತ ವೈದ್ಯರು ಹೇಳಿದ್ದಾರೆ. ಇದಕ್ಕೆ ಕಾರಣ ಏನು ಅಂತ ಗೊತ್ತಾಗಬೇಕಿದೆ. ಪ್ರಸಾದದ ಮಾದರಿ ಸಂಗ್ರಹ ಮಾಡಿ ಪರೀಕ್ಷೆಗೆ ಲ್ಯಾಬ್‌ಗೆ ಕಳುಹಿಸಲಾಗುವುದಾಗಿ ವೈದ್ಯರು ಹೇಳಿದ್ದಾರೆ. ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದರು.

ಘಟನೆ ಬಗ್ಗೆ ಡಿಎಚ್‌ಓ ಹೇಳಿದ್ದೇನು..?
ಇನ್ನು ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್ ಮಾತನಾಡಿದ್ದು, ಪ್ರಸಾದ ಸೇವಿಸಿ ಅಸ್ವಸ್ಥಗೊಂಡಿರುವ ಎಲ್ಲರೂ ಆರೋಗ್ಯವಾಗಿದ್ದಾರೆ. ಸದ್ಯ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ. ಪ್ರಸಾದ ತಿಂದ ಬಳಿಕ ಕೆಲವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಮಕ್ಕಳು ಸೇರಿದಂತೆ ಐವತ್ತು ಮಂದಿ ವಾಂತಿ ಮಾಡಿಕೊಂಡು ಆಸ್ಪತ್ರೆಗೆ ಬಂದು ದಾಖಲಾಗಿದ್ದರು.
ಸದ್ಯ ಎಲ್ಲರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಎಲ್ಲರಿಗೂ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸಾದದ ಸ್ಯಾಂಪಲ್ ಲ್ಯಾಬ್ ಟೆಸ್ಟಿಂಗ್‌ಗೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಏನಾಗಿದೆ ಎನ್ನುವುದು ತಿಳಿಯುತ್ತದೆ. ಅಸ್ವಸ್ಥರ ಚಿಕಿತ್ಸೆಗಾಗಿ ರಾಜರಾಜೇಶ್ವರಿ ಆಸ್ಪತ್ರೆ ಹಾಗೂ ದಯಾನಂದ ಸಾಗರ್ ಆಸ್ಪತ್ರೆಗಳಿಂದ ವೈದ್ಯರನ್ನು ಹೆಚ್ಚುವರಿಯಾಗಿ ಕರೆಸಿಕೊಂಡಿದ್ದೇವೆ. ಜಿಲ್ಲಾ ಆಸ್ಪತ್ರೆಯಲ್ಲೇ ಎಲ್ಲಾ ರೀತಿಯ ಅನುಕೂಲವಿದೆ ಹಾಗಾಗಿ ಯಾರನ್ನೂ ಬೇರೆಡೆಗೆ ಚಿಕಿತ್ಸೆಗೆ ಕಳುಹಿಸಿಲ್ಲ ಎಂದು ಹೇಳಿದರು.












Click it and Unblock the Notifications