ಒಂದು ತಿಂಗಳು ತಡವಾಗಿ ಮಾರುಕಟ್ಟೆಗೆ ಬಂದ ರಾಮನಗರ ಮಾವು
ರಾಮನಗರ, ಮಾ.3: ಹಣ್ಣುಗಳ ರಾಜ ಎಂಬ ಖ್ಯಾತಿಯನ್ನು ಪಡೆದಿರುವ ಮಾವಿನ ಬೆಳೆ ರೇಷ್ಮೆ ನಗರಿ ರಾಮನಗರ ಜಿಲ್ಲೆಯ ಪ್ರಮುಖ ಬೆಳೆಯಾಗಿದೆ. ರಾಜ್ಯದಲೇ ಅವಧಿಗೆ ಮೊದಲು ಮಾರುಕಟ್ಟೆ ಪ್ರವೇಶ ಮಾಡುವ ಮಾವು ಎಂದು ಹೆಗ್ಗಳಿಕೆ ಪಡೆದಿರುವ ರಾಮನಗರ ಜಿಲ್ಲೆಯ ಮಾವು ಈ ಬಾರಿ ಒಂದು ತಿಂಗಳು ತಡವಾಗಿ ಮಾರುಕಟ್ಟೆ ಪ್ರವೇಶ ಮಾಡುತ್ತಿದೆ.
ಜಿಲ್ಲೆಯಲ್ಲಿ ಸುಮಾರು 33 ರಿಂದ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೇಸಾಯ ಮಾಡುತ್ತಿದ್ದು, ಪ್ರತಿ ವರ್ಷ ಜಿಲ್ಲೆಯಲ್ಲಿ ಸುಮಾರ 1.5 ರಿಂದ 1.8 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆ ಯಾಗುತ್ತಿದೆ. ಮಾವು ಬೇಸಾಯವನ್ನೇ ನಂಬಿಕೊಂಡು ಸುಮಾರು 30 ಸಾವಿರಕ್ಕೂ ಹೆಚ್ಚು ರೈತ ಕುಟುಂಬ ಜೀವನ ನಡೆಸುತ್ತಿದ್ದಾರೆ.
ಈ ಬಾರಿ ರಾಮನಗರ ಜಿಲ್ಲೆಯ ಮಾವು ಹಾಗೂ ಕೋಲಾರ ಜಿಲ್ಲೆಯ ಮಾವು ಒಂದೇ ಸಮಯದಲ್ಲಿ ಮಾರುಕಟ್ಟೆ ಪ್ರವೇಶ ಮಾಡುತ್ತಿರುವ ಹಿನ್ನಲೆಯಲ್ಲಿ ಮಾವಿನ ಪಸಲು ಹೆಚ್ಚಾಗಿ, ಮಾವಿನ ಧಾರಣೆ ಕುಸಿಯುವ ಆತಂಕ ರೈತರಲ್ಲಿ ಮನೆ ಮಾಡಿದೆ.

ಪ್ರತಿ ವರ್ಷ ಏಪ್ರಿಲ್ ಹೊತ್ತಿಗೆ ರಾಮನಗರ ಮಾವು
ಮಾರುಕಟ್ಟೆ ಪ್ರವೇಶಿಸುತ್ತಿತ್ತು. ಆದರೆ, ಡಿಸೆಂಬರ್ 2ನೇ ವಾರದವರೆಗೂ ಸುರಿದ ಮಳೆಯಿಂದಾಗಿ ಹೂ ಬಿಡುವುದು ತಡವಾಗಿದೆ. ಈ ಬಾರಿ ಉತ್ತಮ ಫಸಲು ನಿರೀಕ್ಷೆ ಇದ್ದು, ಮೇ ಅಂತ್ಯದ ವೇಳೆಗೆ ಜಿಲ್ಲೆಯ ಮಾವು ಮಾರುಕಟ್ಟೆ ಪ್ರವೇಶ ಮಾಡಲಿದೆ.
ಇದೇ ವೇಳೆಗೆ ಕೋಲಾರ ಜಿಲ್ಲೆಯಿಂದಲೂ ಮಾವು ಮಾರುಕಟ್ಟೆ ಪ್ರವೇಶಿಸುವುದರಿಂದ ಬೆಲೆ ಕುಸಿತಗೊಳ್ಳುವ ಭೀತಿ ರೈತರಲ್ಲಿ ಮೂಡಿದೆ.ಕಳೆದ ವರ್ಷ ಪ್ರತಿ ಕೆಜಿ ಮಾವು 200 ರೂ.ಗಳವರೆಗೂ ಮಾರಾಟಗೊಂಡಿತ್ತು. ಅಲ್ಲದೇ ಕಳೆದ ಎರಡು ವರ್ಷಗಳ ಕೊರೋನಾ ಆರ್ಭಟದಿಂದ ಸಾಕಷ್ಟು ನಷ್ಟ ಅನುಭವಿಸಿದ್ದ ರೈತನಿಗೆ ಈ ಬಾರಿಯು ನಷ್ಟ ತಪ್ಪಿದಲ್ಲ.
ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಉದ್ದೇಶಿತ ಮಾವು ಸಂಸ್ಕರಣ ಘಟಕ ಅನುಷ್ಠಾನಗೊಂಡಿದ್ದರೆ ಜಿಲ್ಲೆಯ ಮಾವು ಬೆಳೆಯನ್ನು ಸಂಸ್ಕರಣೆ ಮಾಡಿ ಉತ್ತಮ ಧಾರಣೆ ಬಂದ ನಂತರ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದಾಗಿತ್ತು ಎಂಬುದು ಮಾವು ಬೆಳೆಗಾರರ ಅಳಲು.












Click it and Unblock the Notifications