ಮಾಗಡಿ: ಅಪಘಾತದಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ತಲಾ 1 ಲಕ್ಷ ರೂ. ವೈಯಕ್ತಿಕ ಪರಿಹಾರ ನೀಡಿದ ಶಾಸಕ
ರಾಮನಗರ, ಆಗಸ್ಟ್, 10: ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಚೇತ್ರ ವ್ಯಾಪ್ತಿಯ ಗೊಲ್ಲರದೊಡ್ಡಿ ಗ್ರಾಮದ ಬಳಿ ಕಳೆದ ರಾತ್ರಿ ನಡೆದ ಅಪಘಾತದಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಪೋಷಕರಿಗೆ ಕ್ಷೇತ್ರದ ಶಾಸಕ ಹೆಚ್.ಸಿಬಾಲಕೃಷ್ಣ ವೈಯಕ್ತಿಕ ತಲಾ ಒಂದು ಲಕ್ಷ ರೂಪಾಯಿ ನೆರವು ನೀಡಿ, ಸಾಂತ್ವನ ಹೇಳಿದರು.
ಕಳೆದ ರಾತ್ರಿ ರಾಮನಗರ ತಾಲೂಕಿನ ಲಕ್ಷ್ಮಿಪುರ ಸಮೀಪದ ಗೊಲ್ಲರದೊಡ್ಡಿ ಗ್ರಾಮದ ಬಳಿ ಟ್ಯೂಷನ್ ಮುಗಿಸಿ ಮನೆಗೆ ತೆರಳುತ್ತಿದ್ದ 9 ಮಕ್ಕಳ ಮೇಲೆ ಅತಿವೇಗದಿಂದ ಬಂದ ಮಹಿಂದ್ರ ಪಿಕಪ್ ವಾಹನ ಹರಿದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮಕ್ಕಳು ಮೃತಪಟ್ಟು 7 ಮಕ್ಕಳಿಗೆ ಗಂಭೀರ ಗಾಯಗಳಾದ ದುರ್ಘಟನೆ ನಡೆದಿತ್ತು.

ಭೀಕರ ಅಪಘಾತದಲ್ಲಿ ರೋಹಿತ್ (5) ಹಾಗೂ ಶಾಲಿನಿ (8) ಎಂಬ ಇಬ್ಬರು ಮಕ್ಕಳು ಬಲಿಯಾಗಿದ್ದರು. ಇನ್ನು ಸುಚಿತ್, ಗೌತಮಿ, ಲೇಖನ ಎಂಬ ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು, ಗಾಯಗೊಂಡ ಮಕ್ಕಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಗ್ರಾಮಕ್ಕೆ ಇಂದು ಬೇಟಿ ನೀಡಿದ ಶಾಸಕ ಹೆಚ್.ಸಿ.ಬಾಲಕೃಷ್ಣ ಅಪಘಾತದಲ್ಲಿ ಅಸುನೀಗಿದ ಮಕ್ಕಳ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಅಲ್ಲದೆ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಇಬ್ಬರು ಮಕ್ಕಳ ಕುಟುಂಬಕ್ಕೆ ತಲಾ ಒಂದೊಂದು ಲಕ್ಷ ರೂ. ಆರ್ಥಿಕ ನೆರವು ನೀಡಿದರು.

ಅಲ್ಲದೇ ದುರ್ಘಟನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಸರ್ಕಾರದ ವತಿಯಿಂದ ಹೆಚ್ಚಿನ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ ಶಾಸಕ ಹೆಚ್.ಸಿ.ಬಾಲಕೃಷ್ಣ, ಅಪಘಾತಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಂಡು ಮುಂದೆ ಇಂತಹ ದುರ್ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲು ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಎಸ್‌ಪಿ ಸುರೇಶ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಅಪಘಾತ ಮಾಡಿ ವಾಹನದೊಂದಿಗೆ ಪರಾರಿಯಾಗಿದ್ದ ಚಾಲಕನನ್ನು ಪತ್ತೆ ಮಾಡಿ ಪೋಲಿಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

10 ಲಕ್ಷ ರೂ. ಪರಿಹಾರಕ್ಕೆ ಆಗ್ರಹ
ಅತಿವೇಗದ ಚಾಲನೆಗೆ ಇಬ್ಬರು ಮಕ್ಕಳು ಬಲಿಯಾಗಿರು ಘಟನೆಗೆ ದಿಗ್ಭ್ರಮೆ ವ್ಯಕ್ತಪಡಿಸಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎಲ್.ಬೈರೇಗೌಡ, ಗೊಲ್ಲರ ದೊಡ್ಡಿಯಲ್ಲಿ ನಡೆದಿರುವ ಘಟನೆ ಅಮಾನವೀಯ ಹಾಗೂ ದುರದೃಷ್ಟಕರವಾಗಿದೆ. ದೇವರು ಮಕ್ಕಳ ಪೋಷಕರಿಗೆ ದುಃಖ ತಡೆಯುವ ಶಕ್ತಿ ನೀಡಲಿ. ಇನ್ನೂ ಘಟನೆಯ ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಾಗೂ ಸರ್ಕಾರ ಮೃತ ಮಕ್ಕಳ ಪೋಷಕರಿಗೆ ಕನಿಷ್ಠ 10 ಲಕ್ಷ ತುರ್ತು ಪರಿಹಾರ ಕೊಡಬೇಕು ಮತ್ತು ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳ ಸಂಪೂರ್ಣ ವೆಚ್ಚ ಭರಿಸಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications