Channapatna; ಮಂಡ್ಯದಲ್ಲಿ ಎಚ್‌ಡಿ ಕುಮಾರಸ್ವಾಮಿ ಗೆದ್ದರೇ, ಚನ್ನಪಟ್ಟಣಕ್ಕೆ ಯಾರು..?
ರಾಮನಗರ, ಮಾರ್ಚ್ 31: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಸೀಟು ಹಂಚಿಕೆ ಮಾಡಿಕೊಂಡಿವೆ. ಇರುವ 28 ಕ್ಷೇತ್ರಗಳಲ್ಲಿ ಬಿಜೆಪಿಗೆ 25 ಮತ್ತು ಜೆಡಿಎಸ್‌ಗೆ 3 ಕ್ಷೇತ್ರಗಳಾಗಿ ಹಂಚಿಕೊಂಡಿವೆ. ಕಾಂಗ್ರೆಸ್ ಅನ್ನು ಸೋಲಿಸುವ ಗುರಿಯಲ್ಲಿವೆ.
ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರಗಳು ಜೆಡಿಎಸ್ ಪಾಲಾಗಿವೆ. ಮಂಡ್ಯದಿಂದ ಚನ್ನಪಟ್ಟಣದ ಹಾಲಿ ಶಾಸಕ ಎಚ್ ಡಿ ಕುಮಾರಸ್ವಾಮಿ ಕಣಕ್ಕಿಳಿದ್ದಾರೆ. ಹಾಸನದಿಂದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದರೇ, ಕೋಲಾರದಿಂದ ಮಲ್ಲೇಶ್ ಬಾಬು ಕಣಕ್ಕೆ ಇಳಿಯುತ್ತಿದ್ದಾರೆ. ಇದರ ಜೊತೆಗೆ ಬೆಂಗಳೂರು ಗ್ರಾಮಾಂತರದಿಂದ ಡಿಕೆ ಸುರೇಶ್ ಎದುರಿಗೆ ಎಚ್ ಡಿ ದೇವೇಗೌಡರ ಅಳಿಯ ಡಾ. ಮಂಜುನಾಥ್ ಕಣಕ್ಕಿಳಿಯುತ್ತಿದ್ದಾರೆ.

ಮುಂದೆ ಚನ್ನಪಟ್ಟಣದ ಕಥೆಯೇನು?
ಭಾರಿ ಕುತೂಹಲದ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ. ಮಂಡ್ಯ ಜೆಡಿಎಸ್ ಭದ್ರಕೋಟೆ ಎನ್ನಲಾಗಿತ್ತು. ಆದರೆ, ಕಳೆದ ಚುನಾವಣೆಯಲ್ಲಿ ಇದು ಕಾಂಗ್ರೆಸ್ ಕೋಟೆಯಾಗಿಯೂ ಪರಿಣಮಿಸಿದೆ. ಆದರೆ, ಅಕಸ್ಮಾತ್ ಮಂಡ್ಯದ ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ, ಚನ್ನಪಟ್ಟಣದಲ್ಲಿ ಉಪಚುನಾವಣೆ ನಡೆಯಲಿದೆ.
ಮಂಡ್ಯದಿಂದ ಕುಮಾರಸ್ವಾಮಿ ಗೆದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಸತ್ ಸದಸ್ಯರಾಗಿ ಮುಂದುವರಿಯುತ್ತಾರೆಯೇ ಅಥವಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕರಾಗಿ ಉಳಿಯುತ್ತಾರೆಯೇ? ಎಂಬ ಚರ್ಚೆ ಆರಂಭವಾಗಿದೆ. ಇದರ ಜೊತೆಗೆ ಅವರು ಸಂಸದರಾದರೇ ಚನ್ನಪಟ್ಟಣದಿಂದ ಯಾರು ಶಾಸಕರಾಗುತ್ತಾರೆ..? ಅವರ ಜಾಗಕ್ಕೆ ಯಾರು ನಿಲ್ಲುತ್ತಾರೆ ಎಂಬುದೇ ಈಗ ಪ್ರಶ್ನೆಯಾಗಿದೆ.
ಈ ಹಿಂದೆ ರಾಮನಗರ ಪ್ರತಿನಿಧಿಸುತ್ತಿದ್ದ ಕುಮಾರಸ್ವಾಮಿ, ಚನ್ನಪಟ್ಟಣಕ್ಕೆ ಬಂದಿರುವ ಅವರು ಈಗ ಅಲ್ಲಿಯೇ ಶಾಸಕರು. ಎರಡು ಬಾರಿಯೂ ಅವರು ಎದುರಿಸಿದ್ದು, ವಿಧಾನ ಪರಿಷತ್ ಸದಸ್ಯ ಬಿಜೆಪಿಯ ಸಿ.ಪಿ. ಯೋಗೇಶ್ವರ. ಈಗ ಎರಡು ಪಕ್ಷಗಳ ಮೈತ್ರಿಯಿಂದಾಗಿ ಇಬ್ಬರು ಒಂದಾಗಿರುವಂತಿದೆ. ಅದಕ್ಕೆ ಮತ್ತೊಂದು ಕಾರಣವು ಇದೆ ಅದೇ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ.
ಚನ್ನಪಟ್ಟಣದ ಮೇಲೆ ಸಿ.ಪಿ. ಯೋಗೇಶ್ವರ ಕಣ್ಣು
ಹೌದು... ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಗೆದ್ದರೆ ಇಲ್ಲಿ ಮಾಜಿ ಶಾಸಕ ಸಿಪಿ ಯೋಗೇಶ್ವರ್ ಅವರು ಮತ್ತೆ ಚುನಾವಣೆಗೆ ನಿಲ್ಲಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ, ನಿಖಿಲ್ ಕುಮಾರಸ್ವಾಮಿ ಅವರನ್ನು ನಿಲ್ಲಿಸಬೇಕು ಎಂದು ಎಚ್ ಡಿ ಕುಮಾರಸ್ವಾಮಿ ಬಯಸುತ್ತಿದ್ದಾರೆ ಎನ್ನಲಾಗಿದೆ.

ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲುವು ಪಕ್ಕ ಎಂದು ನಂಬಿರುವ ಸಿ.ಪಿ. ಯೋಗೇಶ್ವರ ಅವರ ಬೆಂಬಲಿಗರು ಈಗಾಗಲೇ ಚುನಾವಣಾ ಕೆಲಸಗಳಲ್ಲಿ ಸಕತ್ ಬ್ಯುಸಿಯಾಗಿದ್ದಾರೆ. ಚನ್ನಪಟ್ಟಣದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಸಿ.ಪಿ. ಯೋಗೇಶ್ವರ ಅಭ್ಯರ್ಥಿಯಾಗುತ್ತಾರೆ. ಮತ್ತೆ ಚನ್ನಪಟ್ಟಣಕ್ಕೆ ಶಾಸಕರಾಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಮತ್ತು ಚನ್ನಪಟ್ಟಣ
ಇತ್ತ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧೆಗೆ ಇಳಿಸಿದ್ದ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಭದ್ರಕೋಟೆಯಲ್ಲಿಯೇ ಹೀನಾಯ ಸೋಲು ಕಂಡಿದ್ದರು. ಕಾಂಗ್ರೆಸ್‌ನ ಇಕ್ಬಾಲ್ ಹುಸೇನ್ ವಿರುದ್ಧ 10,715 ಮತಗಳ ಅಂತರದಿಂದ ಸೋಲು ಕಂಡಿದ್ದರು.
ಈಗ ಚನ್ನಪಟ್ಟಣದಲ್ಲಿ ಉಪಚುನಾವಣೆ ನಡೆದರೇ ಅವರನ್ನೇ ಕಣಕ್ಕಿಳಿಸಲು ಜೆಡಿಎಸ್ ಪಾಳಯ ಮುಂದಾಗಿದೆ. ಮಗನನ್ನು ಒಮ್ಮೆಯಾದರೂ ಶಾಸಕನನ್ನಾಗಿ ಮಾಡಬೇಕು ಎಂದು ಪಣ ತೊಟ್ಟಿರುವ ಎಚ್.ಡಿ. ಕುಮಾರಸ್ವಾಮಿ ಮಗನ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಗೆಲುವು ಕಾಣಬೇಕು. ಬಳಿಕ ಈ ಎಲ್ಲಾ ಚರ್ಚೆಗಳಿಗೆ ಹೊಸ ರೂಪ ದೊರೆಯಲಿವೆ.












Click it and Unblock the Notifications