Kanakapura: ಭದ್ರಕೋಟೆ ಛಿದ್ರವಾಗದಂತೆ ತಡೆಯಲು ಕಳೆದ ಬಾರಿಯ ಎದುರಾಳಿಯನ್ನೇ ಸೆಳೆದುಕೊಂಡ ಡಿಕೆ ಬ್ರದರ್ಸ್!
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಗೆಲುವಿಗಾಗಿ ಎಲ್ಲ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಿಕೊಳ್ಳುವುದು ಒಂದು ಕಡೆಯಾದರೆ, ಆಯಾ ಕ್ಷೇತ್ರದ ಸ್ಥಳೀಯ ಮುಖಂಡರನ್ನು ಸೆಳೆಯುವುದು ರಣತಂತ್ರದ ಮತ್ತೊಂದು ಭಾಗವಾಗಿದೆ.
ಮೇ 10ರಂದು ನಡೆಯುವ ಮತದಾನಕ್ಕೆ ಮುನ್ನ ಪಕ್ಷಾಂತರ ಸಾಮಾನ್ಯವಾಗಿದ್ದು, ಕೆಲವು ಅಸಮಾಧಾನಿತರು ರಾಜಕೀಯ ಭವಿಷ್ಯದ ದೃಷ್ಟಿಯಿಂದ ಆ ಪಕ್ಷದಿಂದ ಈ ಪಕ್ಷಕ್ಕೆ, ಈ ಪಕ್ಷದಿಂದ ಆ ಪಕ್ಷಕ್ಕೆ ಜಂಪಿಂಗ್ ಮಾಡುತ್ತಾರೆ.

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಹಾಗೂ ಕನಕಪುರ ಡಿ.ಕೆ. ಶಿವಕುಮಾರ್ ಮತ್ತೊಂದು ಆಪರೇಷನ್‌ಗೆ ಕೈ ಹಾಕಿದ್ದಾರೆ. ಕನಕಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಆರ್. ಅಶೋಕ್ ನಾಮಪತ್ರ ಸಲ್ಲಿಸುತ್ತಿದ್ದಂತೆಯೇ ತಮ್ಮ ಭದ್ರಕೋಟೆ ಬಿಗಿಮಾಡಿಕೊಳ್ಳಲು ಮುಂದಾಗಿದ್ದಾರೆ.
ಇನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷಕ್ಕೆ ಠಕ್ಕರ್ ಕೊಟ್ಟಿರುವ ಡಿಕೆ ಬ್ರದರ್ಸ್, 2018ರ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಡಿ.ಕೆ. ಶಿವಕುಮಾರ್ ವಿರುದ್ಧ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ನಾರಾಯಣಗೌಡ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಭಾಕರ ರೆಡ್ಡಿ ಗುರುವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಾರಾಯಣಗೌಡ 47,643 ಮತಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಶಿವಕುಮಾರ್ 1,27,552 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ ನಂದಿನಿ ಗೌಡ ಕೇವಲ 6,273 ಮತಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಕಳೆದ ಬಾರಿ ತಮ್ಮ ವಿರುದ್ಧ ಸ್ಪರ್ಧಿಸಿದ್ದ ಎದುರಾಳಿಯನ್ನೇ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಯಶಸ್ವಿಯಾಗಿದ್ದು, 123 ಸ್ಥಾನ ಗೆದ್ದು ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎನ್ನುತ್ತಿರುವ ಎಚ್.ಡಿ. ಕುಮಾರಸ್ವಾಮಿಗೆ ಇದು ಭಾರೀ ಹಿನ್ನಡೆ ಎನ್ನಬಹುದು.

ಇನ್ನು ಪ್ರಭಾಕರ ರೆಡ್ಡಿ ಅವರು ಈ ಬಾರಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಬಯಸಿದ್ದರು. ಆದರೆ ಜೆಡಿಎಸ್‌ನಿಂದ ಡಿ.ಕೆ. ಶಿವಕುಮಾರ್ ಆಪ್ತೆಯಾಗಿದ್ದ ಸುಷ್ಮಾ ರಾಜಗೋಪಾಲ್‌ಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಪ್ರಭಾಕರ್ ರೆಡ್ಡಿ ಕಾಂಗ್ರೆಸ್‌ಗೆ ಜಿಗಿದಿದ್ದಾರೆ.
ಇನ್ನು ಈ ಬಾರಿ ಕನಕಪುರ ಕ್ಷೇತ್ರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ, ಡಿ.ಕೆ. ಶಿವಕುಮಾರ್ ವಿರುದ್ಧ ಬಲಿಷ್ಠ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ. ಡಿಕೆ ಸಹೋದರರನ್ನು ಒಂದೇ ಕ್ಷೇತ್ರದಲ್ಲಿ ಕಟ್ಟಿಹಾಕಲು ಸಚಿವ ಆರ್. ಅಶೋಕ್ ತಮ್ಮ ಪದ್ಮನಾಭನಗರ ಕ್ಷೇತ್ರದ ಜೊತೆಗೆ ಕನಕಪುರದಲ್ಲಿಯೂ ಸ್ಪರ್ಧಿಸುತ್ತಿದ್ದಾರೆ.
ಇದರ ನಡುವೆಯೇ ಬಿಜೆಪಿ ಮತ್ತು ಜೆಡಿಎಸ್‌ಗೆ ಟಾಂಗ್ ನೀಡಲು ಡಿ.ಕೆ. ಸುರೇಶ್ ಮತ್ತು ಡಿ.ಕೆ. ಶಿವಕುಮಾರ್ ಸೋದರರು ಸೈಲೆಂಟ್ ಆಗಿ ಅತೃಪ್ತ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆದುಕೊಳ್ಳುವ ಮೂಲಕ ಭದ್ರಕೋಟೆ ಛಿದ್ರವಾಗದಂತೆ ನೋಡಿಕೊಳ್ಳುತ್ತಿದ್ದಾರೆ.
ಸಂಸದ ಡಿಕೆ ಸುರೇಶ್ ನೇತೃತ್ವದಲ್ಲಿ ಆಪರೇಷನ್ ಕಾಂಗ್ರೆಸ್
ಈ ಮೂಲಕ ಬಿಜೆಪಿ ಅಭ್ಯರ್ಥಿ ಆರ್. ಅಶೋಕ್‌ಗೆ ಕನಕಪುರದಲ್ಲಿ ಠೇವಣಿ ಸಿಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ಚುನಾವಣಾ ರಣತಂತ್ರ ರೂಪಿಸಿದೆ. ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ನೇತೃತ್ವದಲ್ಲಿಯೇ ಈ ಆಪರೇಷನ್ ನಡೆದಿದೆ ಎನ್ನಲಾಗಿದೆ. ಬಿಜೆಪಿ ನಾಯಕರ ಸಂಪರ್ಕಕ್ಕೆ ಜೆಡಿಎಸ್ ಮುಖಂಡರು ಸಿಗದಂತೆ ಸೈಲೆಂಟ್ ಆಗಿ ಆಪರೇಷನ್ ಮಾಡಲಾಗುತ್ತಿದೆ.
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ಬೆಂಗಳೂರು ಗ್ರಾಮಾಂತರದಲ್ಲಿ ಬದಲಾವಣೆ ಆಗ್ತಿದೆ. ನಾರಾಯಣಗೌಡ ರೈತ ಕುಟುಂಬದಿಂದ ಬಂದ ನಾಯಕ. ಡಿ.ಕೆ ಶಿವಕುಮಾರ್‌ಗೆ ಒಳ್ಳೆಯದಾಗಬೇಕು ಅಂತಾ ತ್ಯಾಗ ಮಾಡಿದ್ದಾರೆ. ಪ್ರಭಾಕರ್ ರೆಡ್ಡಿ ಕೂಡ ಪಕ್ಷ ಸೇರಿದ್ದಾರೆ. ಇಲ್ಲಿ ಹೊಸಬರು, ಹಳಬರು ಎಂಬ ಪ್ರಶ್ನೆ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ. 78 ಲಕ್ಷ ಸದಸ್ಯರು ಕಾಂಗ್ರೆಸ್‌ನಲ್ಲಿದ್ದಾರೆ," ಎಂದು ತಿಳಿಸಿದರು.












Click it and Unblock the Notifications