ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಸ್ಲಿಂ ಪ್ರತಿಭಟನೆ ಹಿನ್ನಲೆ ಚನ್ನಪಟ್ಟಣ ರೇಷ್ಮೆ ಮಾರುಕಟ್ಟೆ‌ಯಲ್ಲಿ ಗೊಂದಲ; ತಡವಾಗಿ ಆರಂಭ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮಾರ್ಚ್ 17: ರಾಜ್ಯಾದ್ಯಂತ ಇಂದು ಕರ್ನಾಟಕ ಹೈಕೋರ್ಟ್ ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂ ಸಂಘಟನೆಗಳ ಪ್ರತಿಭಟನೆಗೆ ರೇಷ್ಮೆ ನಗರಿ ರಾಮನಗರದಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಅಂಗಡಿ- ಮುಂಗಟ್ಟುಗಳು ಮಾತ್ರ ಬಂದ್ ಮಾಡಿದ್ದು ಬಿಟ್ಟರೆ, ಎಂದಿನಂತೆ ವ್ಯಾಪಾರ ವಹಿವಾಟಿನಲ್ಲಿ ಮುಸ್ಲಿಂ ವರ್ತಕರು ಭಾಗವಹಿಸಿದ್ದರು.

ಇನ್ನು ರಾಮನಗರ ಜಿಲ್ಲೆ ಚನ್ನಪಟ್ಟಣ ರೇಷ್ಮೆ ಮಾರುಕಟ್ಟೆ ವಹಿವಾಟಿನಲ್ಲಿ ಮುಸ್ಲಿಂ ರೀಲರ್ಸ್‌ಗಳು ಭಾಗವಹಿಸದ ಹಿನ್ನಲೆಯಲ್ಲಿ ಗೊಂದಲ ಏರ್ಪಟ್ಟಿತ್ತು. ಇದರಿಂದ ರೊಚ್ಚಿಗೆದ್ದ ರೈತರು ಕೆಲಕಾಲ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಮಧ್ಯ ಪ್ರವೇಶ ಮಾಡಿದ ಕೇತ್ರದ ಶಾಸಕ ಎಚ್.ಡಿ. ಕುಮಾರಸ್ವಾಮಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ರೇಷ್ಮೆ ವಹಿವಾಟು ಸುಸೂತ್ರವಾಗಿ ನಡೆಸಲು ಯಶಸ್ವಿಯಾದರು. ಎಚ್‌ಡಿಕೆ ಮನವಿ ಮೇರೆಗೆ ರೇಷ್ಮೆ ಇಲಾಖೆಯ ಹಿರಿಯ ಅಧಿಕಾರಿಗಳು ರೀಲರ್ಸ್‌ಗಳ ಮನವೊಲಿಸಿ ರೇಷ್ಮೆ ವಹಿವಾಟು ನಡೆಸಲು ಯಶಸ್ವಿಯಾದರು.

Karnataka Bandh From Muslim Organisations: The Late-opening Channapatna Silk Market

ರೇಷ್ಮೆ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೇಷ್ಮೆ ಬೆಳೆಗಾರರು
ಇನ್ನು ರೇಷ್ಮೆ ಮಾರುಕಟ್ಟೆಯ ಅಧಿಕಾರಿ ನಿರ್ಲಕ್ಷ್ಯದ ವಿರುದ್ಧ ರೇಷ್ಮೆ ಬೆಳೆಗಾರರು ಮತ್ತು ರಿಲರ್ಸ್ ಕಿಡಿಕಾರಿದರು. ಮುಸ್ಲಿಂ ರೀಲರ್ಸ್‌ಗಳು ರೇಷ್ಮೆ ವಹಿವಾಟಿನಲ್ಲಿ ಭಾಗವಹಿಸದೆ ಪ್ರತಿಭಟನೆ ನಡೆಸುತ್ತಿರುವುದು ಗೊತ್ತಿದ್ದರೂ ರೈತರಿಗೆ ಮಾಹಿತಿ ನೀಡದೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದರು.

ಬೆಳಗಿನ ಜಾವ 5 ಗಂಟೆಗೆ ರೈತರು ತಾವು ಬೆಳೆದ ರೇಷ್ಮೆಯನ್ನು ಮಾರಲು ಮಾರುಕಟ್ಟೆಗೆ ಬಂದಾಗ‌ ರೈತರಿಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ, ಸುಮಾರು 10 ಗಂಟೆ ಕಳೆದರೂ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಮಾರುಕಟ್ಟೆಯ ಅಧಿಕಾರಿಗಳು ವಿಫರಾಗಿದ್ದಾರೆ ಎಂದು ರೇಷ್ಮೆ ಬೆಳೆಗಾರರು ಅಧಿಕಾರಿಗಳ ವಿರುದ್ಧ ಆರೋಪಿಸಿದರು.

ರೀಲರ್ಸ್ ಪ್ರತಿಕ್ರಿಯೆ
ಇನ್ನು ಈ ಸಂಬಂಧ ಪ್ರತಿಕ್ರಿಯೆ ನೀಡಿದ ರಾಜ್ಯ ರೀಲರ್ಸ್ ಸಂಘದ ಅಧ್ಯಕ್ಷ ಜಬೀಹುಲ್ಲಾ ಖಾನ್ ಘೋರಿ, "ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿದ ತೀರ್ಪಿನಿಂದ ನಮ್ಮ ಮನಸ್ಸಿಗೆ ನೋವಾಗಿದೆ. ನಮ್ಮ ನೋವನ್ನು ವ್ಯಕ್ತಪಡಿಸುವ ನಿಟ್ಟಿನಲ್ಲಿ ಎಲ್ಲಾ ಮುಸ್ಲಿಂ ಮುಖಂಡರು ಸಭೆ ನಡೆಸಿ, ಯಾರಿಗೂ ತೊಂದರೆಯಾಗದಂತೆ ಮುಸ್ಲಿಂ ವರ್ತಕರು ತಮ್ಮ ವಹಿವಾಟು ಸ್ಥಗಿತಗೊಳಿಸಿ ನಮ್ಮ ಅಸಮಾಧಾನ ವ್ಯಕ್ತಪಡಿಸಿದ್ದೇವೆ,'' ಎಂದರು.

Karnataka Bandh From Muslim Organisations: The Late-opening Channapatna Silk Market

"ರೇಷ್ಮೆ ಮಾರುಕಟ್ಟೆಯ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿ, ರೈತರಿಗೆ ತೊಂದರೆಯಾಗದಂತೆ ಬದಲಿ ವ್ಯವಸ್ಥೆ ಮಾಡಬೇಕಿತ್ತು, ಆದರೆ ಅಧಿಕಾರಿಗಳು ವಿಫಲರಾಗಿದ್ದಾರೆ. ಇನ್ನು ರೇಷ್ಮೆ ಇಲಾಖೆಯ ಹಿರಿಯ ಅಧಿಕಾರಿಗಳು ರೇಷ್ಮೆ ವಹಿವಾಟಿನಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದರು. ಅಲ್ಲದೇ ಅಧಿಕಾರಿಗಳ ತಪ್ಪಿನಿಂದ ರೈತರು ಸಂಕಷ್ಟ ಪಡುತ್ತಿರುವುದನ್ನು ಮನಗಂಡು ರೇಷ್ಮೆ ವಹಿವಾಟಿನಲ್ಲಿ ಭಾಗವಹಿಸಿ ರೇಷ್ಮೆ ಖರೀದಿ ಮಾಡಿದ್ದೇವೆ," ಎಂದು ಹೇಳಿದರು.

"ನಮ್ಮ ಪ್ರತಿಭಟನೆಯಿಂದ ರಾಜ್ಯದ ಜನರಿಗೆ ತೊಂದರೆಯಾಗಿದ್ದರೆ ನಾವು ಕ್ಷಮೆ ಕೋರುತ್ತೇವೆ. ನಂತರದಲ್ಲಿ ರಾಜ್ಯದ ಇತರೆ ರೇಷ್ಮೆ ಮಾರುಕಟ್ಟೆಯ ರೀಲರ್ಸ್‌ಗಳಿಗೂ ಸಂದೇಶ ನೀಡಿ ನಮ್ಮ ಪ್ರತಿಭಟನೆಯಿಂದ ರೈತರಿಗೆ ತೊಂದರೆಯಾಗಿದೆ. ಹಾಗಾಗಿ ಎಲ್ಲರೂ ರೇಷ್ಮೆ ವಹಿವಾಟಿನಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದೇವೆ. ಎಲ್ಲಾ ರೇಷ್ಮೆ ಮಾರುಕಟ್ಟೆಯಲ್ಲಿ ತೊಂದರೆ ಇಲ್ಲದೇ ವಹಿವಾಟು ನಡೆದಿದೆ," ಎಂದು ಜಬೀಹುಲ್ಲಾ ತಿಳಿಸಿದರು.

Karnataka Bandh From Muslim Organisations: The Late-opening Channapatna Silk Market

ಮಾರುಕಟ್ಟೆ ಅಧಿಕಾರಿ ಪುಟ್ಟಮಾದಯ್ಯ ಪ್ರತಿಕ್ರಿಯೆ
ಚನ್ನಪಟ್ಟಣ ರೇಷ್ಮೆ ಮಾರುಕಟ್ಟೆಯ ಅಧಿಕಾರಿ ಪುಟ್ಟಮಾದಯ್ಯ ಮಾತನಾಡಿ, "ರೇಷ್ಮೆ ಮಾರುಕಟ್ಟೆಯಲ್ಲಿ ರೀಲರ್ಸ್ ತಮ್ಮ ಸಮುದಾಯದ ಪ್ರತಿಭಟನೆಯ ಹಿನ್ನಲೆಯಲ್ಲಿ ಯಾವುದೇ ಮಾಹಿತಿ ನೀಡದೆ ಏಕಾಏಕಿ ರೇಷ್ಮೆ ವಹಿವಾಟಿನಲ್ಲಿ ಪಾಲ್ಗೊಳ್ಳದ ಕಾರಣ ಗೊಂದಲವಾಗಿ, ರೈತರು ಪ್ರತಿಭಟನೆಗೆ ಮುಂದಾಗಿದ್ದರು," ಎಂದು ತಿಳಿಸಿದರು.

ಕ್ಷೇತ್ರ ಶಾಸಕ‌ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ ನಂತರ ಹಿರಿಯ ಅಧಿಕಾರಿಗಳು ರೀಲರ್ಸ್‌ಗಳೊಂದಿಗೆ ಮಾತನಾಡಿ, ರೇಷ್ಮೆ ವಹಿವಾಟು ಎಂದಿನಂತೆ ನಡೆಯಿತು. ರೇಷ್ಮೆ ಮಾರುಕಟ್ಟೆಯಲ್ಲಿ 142 ಮಂದಿ ರೀಲರ್ಸ್ ಇದ್ದು, ಪ್ರತಿದಿನ ಸುಮಾರು 1.5 ಟನ್ ರೇಷ್ಮೆ ವಹಿವಾಟು ನಡೆಯುತ್ತದೆ. ಪ್ರತಿದಿನ ಸರಾಸರಿ 8 ರಿಂದ 10 ಲಕ್ಷ ರೂ. ಮೌಲ್ಯದ ರೇಷ್ಮೆ ಮಾರಾಟವಾಗುತ್ತದೆ ಎಂದು ಮಾಹಿತಿ ನೀಡಿದರು.

Recommended Video

Pakistan ಹಾರಿಸಿದ Missile ಅಲ್ಲೇ ಪಕ್ಕದಲ್ಲಿ ಠುಸ್ | Oneindia Kannada

English summary
The Mixed Response to Karnataka bandh in the silk city of Ramanagara for protest by Muslim organizations against the Karnataka High Court's Hijab verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X