Ramanagara Constituency : ಜೆಡಿಎಸ್‌ನ ಭದ್ರಕೋಟೆ ವಶಕ್ಕೆ ಕಾಂಗ್ರೆಸ್ ಸದ್ದಿಲ್ಲದೇ ಸಿದ್ಧತೆ.ಇಲ್ಲಿದೆ ವರದಿ
ರಾಮನಗರ ವಿಧಾನಸಭಾ ಕ್ಷೇತ್ರ ಕಳೆದ ಎರಡು ದಶಕಗಳಿಂದ ಪ್ರಾದೇಶಿಕ ಪಕ್ಷ ಜೆಡಿಎಸ್ ನ ಭದ್ರಕೋಟೆ. ಈ ಬಾರಿಯ ಚುನಾವಣೆಯು ತ್ರಿಕೋಣ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.
ರಾಮನಗರ, ರೇಷ್ಮೆ, ನಾಡಪ್ರಭು ಕೆಂಪೇಗೌಡರು ಹಾಗೂ ನಾಗೇಗೌಡರ ಜಾನಪದ ಲೋಕ ಸೇರಿದಂತೆ ಹಲವು ವಿಶೇಷತೆಗಳನ್ನ ಒಳಗೊಂಡಿರುವ ಕ್ಷೇತ್ರ. ಇನ್ನು, ರಾಮನಗರ ವಿಧಾನಸಭಾ ಕ್ಷೇತ್ರ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳನ್ನು ಕೊಟ್ಟ ಅದೃಷ್ಟದ ಕ್ಷೇತ್ರ ಎಂದರೇ ತಪ್ಪಿಲ್ಲ.
ರಾಮನಗರ ವಿಧಾನಸಭಾ ಕ್ಷೇತ್ರ ಕಳೆದ ಎರಡು ದಶಕಗಳಿಂದ ಪ್ರಾದೇಶಿಕ ಪಕ್ಷ ಜೆಡಿಎಸ್ ನ ಭದ್ರಕೋಟೆಯಾಗಿ ಉಳಿದುಕೊಂಡಿದೆ. ಕೆಂಗಲ್ ಹನುಮಂತಯ್ಯ, ಹೆಚ್ ಡಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಈ ಕ್ಷೇತ್ರದಿಂದಲೇ ಗೆದ್ದು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.

ಮಗನಿಗಾಗಿ ಕ್ಷೇತ್ರ ತ್ಯಾಗ ಮಾಡಿದ ಅನಿತಾ ಕುಮಾರಸ್ವಾಮಿ
ಈ ಹಿಂದೆ 2018ರ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರದಿಂದ ಗೆದ್ದಿದ್ದ ಎಚ್.ಡಿ. ಕುಮಾರಸ್ವಾಮಿಯವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಸ್ಪರ್ಧಿಸಿ ಬರೋಬ್ಬರಿ 1 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು.
ಬಿಜೆಪಿ ಅಭ್ಯರ್ಥಿಯನ್ನೇ ಹೈಜಾಕ್ ಮಾಡುವಲ್ಲಿ ಡಿಕೆಶಿ ಸಹೋದರರು ಯಶಸ್ವಿಯಾಗಿದ್ದರು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕೂಡಾ ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ.
ಇನ್ನೂ ಜೆಡಿಎಸ್ ಮಿಷನ್ 123 ಮೂಲಕ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಪಂಚರತ್ನ ರಥಯಾತ್ರೆಯನ್ನ ನಡೆಸುತ್ತಿದೆ. ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತಮ್ಮ ಬದಲಿಗೆ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನ ಕಣಕ್ಕೆ ಇಳಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಮಗನ ರಾಜಕೀಯ ಭವಿಷ್ಯಕ್ಕಾಗಿ ಕ್ಷೇತ್ರವನ್ನ ಅನಿತಾ ಕುಮಾರಸ್ವಾಮಿ ಬಿಟ್ಟು ಕೊಟ್ಟಿದ್ದಾರೆ.

ರಾಮನಗರದಲ್ಲಿ ಫುಲ್ ಆಕ್ಟಿವ್ ಆದ ನಿಖಿಲ್ ಕುಮಾರಸ್ವಾಮಿ
2019ರಲ್ಲಿ ಮಂಡ್ಯ ಲೋಕಾಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಸೋಲನ್ನು ಅನುಭವಿಸಿದ್ದರು. ಇದಾದ ಬಳಿಕ ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮಂಡ್ಯದಿಂದಲೇ ಕಣಕ್ಕಿಳಿಯುತ್ತಾರೆ ಎಂದು ಹೇಳಲಾಗಿತ್ತು. ಆದರೆ ಮಗನ ರಾಜಕೀಯ ಭವಿಷ್ಯವನ್ನ ರೂಪಿಸುವ ಸಲುವಾಗಿ ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರವನ್ನ ಬಿಟ್ಟುಕೊಟ್ಟಿದ್ದಾರೆ.
ಇತ್ತ ಕ್ಷೇತ್ರ ಘೋಷಣೆಯಾಗುತ್ತಿದ್ದಂತೆಯೇ ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸಕ್ರಿಯರಾಗಿದ್ದು, ಕ್ಷೇತ್ರದ ಜನರ ಕುಂದು ಕೊರತೆಯನ್ನ ಸರಿಪಡಿಸುವ ನಿಟ್ಟಿನಲ್ಲಿ ಕ್ಷೇತ್ರ ಸಂಚಾರವನ್ನ ನಡೆಸಿದ್ದಾರೆ.
ನನ್ನ ರಾಜಕೀಯ ಜೀವನ ಇಲ್ಲಿಂದಲೇ ಪ್ರಾರಂಭ ಹಾಗೂ ಇಲ್ಲೇ ಅಂತ್ಯ, ಯಾವುದೇ ಕಾರಣಕ್ಕೂ ಯಾರೊಬ್ಬರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನ ಕೊನೆ ಉಸಿರು ಇರುವ ತನಕ ನಿಮ್ಮ ಜೊತೆಗೆ ನಿಲ್ಲುತ್ತೇನೆ ಎಂದು ಕ್ಷೇತ್ರದ ಜನತೆಗೆ ನಿಖಿಲ್ ಕುಮಾರಸ್ವಾಮಿ ಭರವಸೆಯನ್ನ ನೀಡಿದ್ದಾರೆ.

ಜೆಡಿಎಸ್ ಗೆಲುವಿನ ಓಟಕ್ಕೆ ಲಗಾಮು ಹಾಕಲು ಕೈ ಪಾಳಯ ಸಜ್ಜು
ಎರಡು ದಶಕಗಳಿಂದ ಜೆಡಿಎಸ್ ಭದ್ರಕೋಟೆಯಾಗಿರುವ ರಾಮನಗರದಲ್ಲಿ ಈ ಬಾರಿ ಕ್ಷೇತ್ರವನ್ನು ಕಾಂಗ್ರೆಸ್ ವಶಕ್ಕೆ ಪಡೆಯಲು ಕೈ ಪಾಳಯ ಸಾಕಷ್ಟು ಸಿದ್ದತೆ ನಡೆಸಿದೆ.
2018 ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಇಕ್ಬಾಲ್ ಹುಸೇನ್ ಅವರಿಗೆ ಈ ಬಾರಿಯೂ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಇತ್ತ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್ ಗೆ ಇದು ತವರು ಜಿಲ್ಲೆಯಾಗಿದ್ದು, ತವರು ಜಿಲ್ಲೆಯ ಕ್ಷೇತ್ರವನ್ನು ಕೈ ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಡಿ.ಕೆ.ಸಹೋದರರು ಸಾಕಷ್ಟು ತಯಾರಿಯನ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಟಿಕೆಟ್ ಗಾಗಿ ಹೆಚ್ಚಾಯ್ತು ಪೈಪೋಟಿ
ಇನ್ನೊಂದು ಕಡೆ, ರಾಮನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ರೇಷ್ಮೆ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೌತಮ್ ಗೌಡ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಇನ್ನೂ ಬಿಡದಿ ಸ್ಮಾರ್ಟ್ ಸಿಟಿ ಪ್ರಾಧಿಕಾರದ ಅಧ್ಯಕ್ಷ ವರದರಾಜು ಗೌಡ ಮತ್ತೆ ಚುನಾವಣ ಕಣವನ್ನು ಪ್ರವೇಶ ಮಾಡಲಿದ್ದಾರೆ.
ಅಲ್ಲದೇ ಇತ್ತೀಚೆಗೆ ಬಿಜೆಪಿ ಸೇರಿರುವ ಪುಣ್ಯವತಿ ಅವರು ಸಹ ಟಿಕೆಟ್ ಗಾಗಿ ಹಿರಿಯ ನಾಯಕ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಾರಿ ಮೂಲ ಬಿಜೆಪಿಗರಿಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿಯ ಸ್ಥಳೀಯ ನಾಯಕರು ಒತ್ತಾಯಿಸುತ್ತಿದ್ದಾರೆ.
ಈ ಬಾರಿ ರಾಮನಗರ ವಿಧಾನಸಭಾ ಕ್ಷೇತ್ರ ಜೆಡಿಎಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ. ಏಕೆಂದರೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಅಶ್ವತ್ಥ ನಾರಾಯಣ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಬಂದ ಮೇಲೆ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣಕ್ಕೆ ತಯಾರಿ ಶ್ರೀನಿವಾಸ ಕಲ್ಯಾಣೋತ್ಸವ ಮೊದಲಾದ ಕಾರ್ಯಕ್ರಮಗಳ ಮೂಲಕ ಈ ಬಾರಿಯ ಚುನಾವಣೆ ಮತ್ತೊಂದು ಮಟ್ಟಕ್ಕೆ ಹೋಗುವ ಲಕ್ಷಣಗಳು ಕಾಣಿಸುತ್ತಿವೆ. ಇದರೆ ಜೊತೆಗೆ ಗೋಬ್ಯಾಕ್ ಅಭಿಯಾನದ ಬಿಸಿಯನ್ನೂ ಅಶ್ವಥ್ ನಾರಾಯಣ ಎದುರಿಸುತ್ತಿದ್ದಾರೆ.
ಇತ್ತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೂ ಮಗನ ರಾಜಕೀಯ ಭವಿಷ್ಯದ ಚಿಂತೆ, ಇನ್ನೊಂದು ಕಡೆ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ತವರು ಜಿಲ್ಲೆಯ ಪ್ರತಿಷ್ಠೆ. ಒಕ್ಕಲಿಗರು ಹಾಗೂ ಮುಸ್ಲಿಮರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಮೂರು ಪಕ್ಷಗಳು ಈ ಸಮುದಾಯದವರಿಗೇ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ.
ಕ್ಷೇತ್ರದ ಮತದಾರ ವಿವರ (2018ರ ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ)
ಕ್ಷೇತ್ರದ ಕೋಡ್: 183
ಪುರುಷರು: 1,02,954
ಮಹಿಳೆಯರು: 1,04,020
ಇತರರು: 25
ಒಟ್ಟು: 2,06,999












Click it and Unblock the Notifications