Channapatna Constituency: ಜೆಡಿಎಸ್‌ನ ಭದ್ರಕೋಟೆ ವಶಕ್ಕೆ ಬಿಜೆಪಿ-ಕಾಂಗ್ರೆಸ್ ತಂತ್ರವೇನು.? ಇಲ್ಲಿದೆ ವರದಿ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಪ್ರಾದೇಶಿಕ ಪಕ್ಷ ಜೆಡಿಎಸ್ ನ ಭದ್ರಕೋಟೆಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಸಿ ಪಿ ಯೋಗೇಶ್ವರ್ ಗೆಲ್ಲುವ ನಿಟ್ಟಿನಲ್ಲಿ ಸಾಕಷ್ಡು ಚುನಾವಣಾ ತಂತ್ರಗಾರಿಕೆಯನ್ನ ನಡೆಸಿದ್ದಾರೆ.

ರಾಮನಗರ,ಫೆಬ್ರವರಿ23: ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸವಿದೆ. ಚನ್ನಪಟ್ಟಣದ ಮರದ ಬೊಂಬೆಗಳು, ಕರಕುಶಲ ವಸ್ತುಗಳು ವಿಶ್ವದೆಲ್ಲೆಡೆ ಹೆಸರುವಾಸಿ. ಬೆಂಗಳೂರು-ಮೈಸೂರಿನ ನಡುವೆ ಸಮಾನ ಅಂತರದಲ್ಲಿರುವ ಚನ್ನಪಟ್ಟಣವು ರೇಷ್ಮೆ ಸೀರೆಗಳಿಗೂ ಸಹ ಖ್ಯಾತಿ ಪಡೆದಿದೆ.

ರಾಮನಗರದಲ್ಲಿದದ ಕುಮಾರಸ್ವಾಮಿ, ಚುನಾವಣಾ ತಂತ್ರಗಾರಿಕೆ ಭಾಗವಾಗಿ ಚನ್ನಪಟ್ಟಣಕ್ಕೆ ಕಾಲಿಟ್ಟಿದ್ದು ಮಾತ್ರವಲ್ಲ, ಬಿಜೆಪಿಯ ಸಿ ಪಿ ಯೋಗೇಶ್ವರ್ ಅವರನ್ನ ಮಣಿಸಿದ್ದಾರೆ. 2018ರಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಈ ಎರಡೂ ಕ್ಷೇತ್ರಗಳಿಂದ ಕುಮಾರಸ್ವಾಮಿ ಗೆಲುವು ಸಾಧಿಸಿದ್ದರು. ಕಡೆಗೆ ರಾಮನಗರವನ್ನೇ ಬಿಟ್ಟು ಕೊಟ್ಟು ಚನ್ನಪಟ್ಟಣ ಉಳಿಸಿಕೊಂಡರು.

ಚನ್ನಪಟ್ಟಣ ಕ್ಷೇತ್ರ ವಿಚಾರವಾಗಿ ಕಳೆದ ನಾಲ್ಕೂವರೆ ವರ್ಷದಲ್ಲಿ ಕುಮಾರಸ್ವಾಮಿ ಹಾಗೂ ಸಿಪಿವೈ ನಡುವೆ ಸಾಕಷ್ಟು ಟೀಕೆ ಟಿಪ್ಪಣಿಗಳು ನಡೆಯುತ್ತಿವೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಸಾಕಷ್ಟು ಪ್ರಮುಖ್ಯತೆಯನ್ನ ಪಡೆದುಕೊಂಡಿದೆ.

 ಹೆಚ್ ಡಿ ಕುಮಾರಸ್ವಾಮಿಗೆ ಕೈ ಸಿಕ್ಕ ಕ್ಷೇತ್ರ

ಹೆಚ್ ಡಿ ಕುಮಾರಸ್ವಾಮಿಗೆ ಕೈ ಸಿಕ್ಕ ಕ್ಷೇತ್ರ

2004ರಿಂದ ಜೆಡಿಎಸ್ ಈ ಕ್ಷೇತ್ರವನ್ನು ಪಡೆಯಲು ಸಾಕಷ್ಡು ಪ್ರಯತ್ನ ಪಡುತ್ತಿತ್ತು. ಆದರೆ, ಆಗ ಕಾಂಗ್ರೆಸ್‌ನಲ್ಲಿದ್ದ ಸಿ.ಪಿ ಯೋಗೇಶ್ವರ್ ಅದಕ್ಕೆ ಅವಕಾಶ ನೀಡಿರಲಿಲ್ಲ. ಆದರೆ 2009ರಲ್ಲಿ ಯೋಗೇಶ್ವರ್ ಬಿಜೆಪಿಗೆ ಪಕ್ಷಾಂತರ ಮಾಡಿದಾಗ ಜೆಡಿಎಸ್‌ನ ಅಶ್ವಥ್‌ಗೆ ಶಾಸಕ ಸ್ಥಾನ ದಕ್ಕಿತು. ಆದರೆ ನಂತರ ಎರಡೇ ವರ್ಷದಲ್ಲಿ ಅವರು ಸಹ ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಪಕ್ಷವನ್ನ ಸೇರಿದರು. ನಂತರದ ಉಪಚುನಾವಣೆಯಲ್ಲಿ ಜೆಡಿಎಸ್‌ನ ಎಸ್.ಎಲ್ ನಾಗರಾಜು ಸೋಲು ಅನುಭವಿಸಿದರು.

2013ರಲ್ಲಿ ಜೆಡಿಎಸ್‌ನಿಂದ ಅನಿತಾ ಕುಮಾರಸ್ವಾಮಿಯವರೆ ಸ್ಪರ್ಧಿಸಿದರೂ ಸಹ ಗೆಲುವು ಕಾಣಲಿಲ್ಲ. ಅವರ ಎದುರು ಸಿ.ಪಿ ಯೋಗೇಶ್ವರ್ ಗೆಲುವು ಸಾಧಿಸಿದರು. ಈ ಕ್ಷೇತ್ರವನ್ನು ಹೇಗಾದರೂ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದ ಕುಮಾರಸ್ವಾಮಿ 2018ರ ಚುನಾವಣೆಯಲ್ಲಿ ರಾಮನಗರದ ಜೊತೆಗೆ ಚನ್ನಪಟ್ಟಣದಿಂದಲೂ ಸಹ ಕಣಕ್ಕಿಳಿದರು ಮತ್ತು ಎರಡೂ ಕಡೆ ಗೆಲುವು ಸಾಧಿಸಿದರು.

ಕೊನೆಗೂ ಚನ್ನಪಟ್ಟಣ ಜೆಡಿಎಸ್ ಕೈ ಸೇರಿತ್ತು. ಮುಂಬರುವ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಇಲ್ಲಿಂದ ಸ್ಪರ್ಧಿಸಲು ಸಿದ್ದತೆ ನಡೆಸಿದ್ದಾರೆ. ಇನ್ನೂ ಈ ಬಾರಿ ಕುಮಾರಸ್ವಾಮಿ ಅವರನ್ನ ಸೋಲಿಸಲು ಬಿಜೆಪಿ ಹಾಗೂ ಕಾಂಗ್ರೆಸ್ ನಿರ್ಧರಿಸಿದ್ದು, ಕುಮಾರಸ್ವಾಮಿ ಮತ್ತೆ ಈ ಭಾಗದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಲಾಗಿದೆ.

 ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧಾರ, ಕಾರ್ಯತಂತ್ರವೇನು?

ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧಾರ, ಕಾರ್ಯತಂತ್ರವೇನು?

ಈ ಹಿಂದೆ ಚನ್ನಪಟ್ಟಣ ಕಾಂಗ್ರೆಸ್ ಹಿಡಿತದಲ್ಲಿದ್ದ ಕ್ಷೇತ್ರ. 1952ರಿಂದ ಇಲ್ಲಿ 7 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಆದರೆ ಯಾವಾಗ 2008ರಲ್ಲಿ ಯೋಗಿಶ್ವರ್ ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿದರೋ ಆಗಿನಿಂದ ಇಲ್ಲಿ ಕಾಂಗ್ರೆಸ್ ಗೆ ಸೋಲು ಅನಿವಾರ್ಯವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ಕಾಂಗ್ರೆಸ್ ನ ಸೂಕ್ತ ಅಭ್ಯರ್ಥಿ ಇಲ್ಲ.ಕನಕಪುರದಲ್ಲಿ ಹಿಡಿತ ಸಾಧಿಸಿರುವ ಡಿ.ಕೆ ಸಹೋದರರು, ರಾಮನಗರ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವಂತೆ ಮಾಡುವುದಕ್ಕೋಸ್ಕರ, ಚನ್ನಪಟ್ಟಣವನ್ನು ತೆಕ್ಕೆಗೆ ತೆಗೆದುಕೊಳ್ಳಲು ಕಾರ್ಯತಂತ್ರ ಹೆಣೆಯುತ್ತಿದ್ದಾರೆ.

ಇನ್ನೂ ಕಾಂಗ್ರೆಸ್ ನಿಂದ ಚನ್ನಪಟ್ಟಣ ವಿಧಾನಸಭಾ ಚುನಾವಣಾ ಸ್ಪರ್ಧೆಗಾಗಿ 8 ಜನ ಅರ್ಜಿಯನ್ನ ಸಲ್ಲಿಸಿದ್ದಾರೆ. ಪ್ರಸನ್ನಗೌಡ, ಬೋರ್‌ವೆಲ್ ರಂಗನಾಥ್, ಡಿ.ಕೆ ಕಾಂತರಾಜು, ಭಗತ್ ರಾಮ್, ಕರುಣಾಕರ್, ಚಂದ್ರ ಸಾಗರ್ ಅರ್ಜಿ ಸಲ್ಲಿಸಿದ ಪ್ರಮುಖರಾಗಿದ್ದಾರೆ.

 ರಾಜಕೀಯಕ್ಕೆ ನಟಿ ರಮ್ಯ ರೀ ಎಂಟ್ರಿ.?

ರಾಜಕೀಯಕ್ಕೆ ನಟಿ ರಮ್ಯ ರೀ ಎಂಟ್ರಿ.?

ಚುನಾವಣೆ ಹತ್ತಿರವಾಗುತ್ತಿದ್ದಂತೆ ನಟಿ ರಮ್ಯ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಕೋಲಾರದಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸಲು ನಿರ್ಧರಿಸಿರುವ ಎಚ್.ಡಿ ಕುಮಾರಸ್ವಾಮಿಯವರಿಗೆ ಟಕ್ಕರ್ ಕೊಡಲು ಇಲ್ಲಿ ರಮ್ಯಾರನ್ನು ಕಣಕ್ಕಿಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

 ಹೆಚ್ಡಿಕೆ ವಿರುದ್ದ ಸಿಪಿವೈ ಸ್ಪರ್ಧೆ, ಬಿಜೆಪಿಯ ತಂತ್ರವೇನು?

ಹೆಚ್ಡಿಕೆ ವಿರುದ್ದ ಸಿಪಿವೈ ಸ್ಪರ್ಧೆ, ಬಿಜೆಪಿಯ ತಂತ್ರವೇನು?

ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ಇದುವರೆಗೂ ಒಂದು ಬಾರಿ ಜಯ ಗಳಿಸಿದೆ. ಪಕ್ಷಾಂತರ ಪರ್ವ ನಡೆಸಿದ್ದ ಸಿ ಪಿ ಯೋಗೇಶ್ವರ್ 2017ರಲ್ಲಿ ಅವರು ಮತ್ತೆ ಬಿಜೆಪಿಗೆ ಬಂದರಾದರೂ 2018ರಲ್ಲಿ ಸೋಲು ಕಂಡಿದ್ದಾರೆ. ಹಾಗಾಗಿ ಇಲ್ಲಿ ಒಂದು ಪಕ್ಷವಾಗಿ ಬಿಜೆಪಿ ಗೆದ್ದಿದೆ ಎನ್ನುವುದಕ್ಕಿಂತ ಸಿ.ಪಿ ಯೋಗೇಶ್ವರ್‌ರವರ ವರ್ಚಿಸ್ಸಿನಿಂದ ಗೆಲ್ಲಲಾಗಿತ್ತು ಎಂದರೆ ತಪ್ಪಾಗಲಾರದು.

ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿಗೆ ಯೋಗಿಶ್ವರ್ ಹೊರತುಪಡಿಸಿ ಮತ್ತೆ ಯಾರೂ ಸಮರ್ಥ ನಾಯಕರೂ ಕಾಣುತ್ತಿಲ್ಲ. ಈ ಹಿಂದೆ ಬಿ ಎಸ್ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಸಿ ಪಿ ಯೋಗೇಶ್ವರ್ ಕ್ಷೇತ್ರದಲ್ಲಿ ವರ್ಚಸ್ಸನ್ನ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನವನ್ನ ನಡೆಸಿದ್ದಾರೆ. ಇನ್ನೂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದರು. ಇಡೀ ರಾಮನಗರ ಜಿಲ್ಲೆಯಲ್ಲಿಯೇ ಬಿಜೆಪಿ ಫೈಟ್ ಮಾಡಬಹುದಾದ ಕ್ಷೇತ್ರ ಚನ್ನಪಟ್ಟಣವಾಗಿದೆ.

ಈ ಬಾರಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಯನ್ನ ಕಟ್ಟಿ ಹಾಕಲು ಈಗಾಗಲೇ ಹಳೆ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ಬಿಜೆಪಿ. ಹೈಕಮಾಂಡ್ ನಾಯಕರನ್ನ ರಾಜ್ಯಕ್ಕೆ ಪದೇ ಪದೇ ಕರೆಸುವ ಮೂಲಕ ಹೊಸ ಹೊಸ ಚುನಾವಣಾ ಕಾರ್ಯತಂತ್ರವನ್ನ ರೂಪಿಸುತ್ತಿದೆ ಎನ್ನಲಾಗಿದೆ.

ಅಂದಾಜು ಮತಗಳು

ಒಟ್ಟು ಮತದಾರರು: 2,30,000

ಒಕ್ಕಲಿಗ: 1,05,000

ಎಸ್‌ಸಿ: 40,000

ಮುಸ್ಲಿಂ; 35,000

ಲಿಂಗಾಯಿತ: 11,000

ಕುರುಬರು: 8,000

ಇತರೆ: 31,000

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+