Karanataka elections 2023: ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ರಾಮನಗರ ಜಿಲ್ಲಾಡಳಿತ, 5 ಜನ ರೌಡಿ ಶೀಟರ್‌ಗಳ ಗಡಿಪಾರು
ರಾಮನಗರ, ಮಾರ್ಚ್, 31: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗಧಿಯಾದ ಹಿನ್ನೆಲೆ ರೇಷ್ಮೆನಾಡು ರಾಮನಗರ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಸರ್ವಸನ್ನದವಾಗಿದೆ. ಅಲ್ಲದೆ ಜನರು ಮುಕ್ತವಾಗಿ ತಮ್ಮ ಹಕ್ಕು ಚಲಾಯಿಸಲು ಹಾಗೂ ಚುನಾವಣಾ ಸಮಯದಲ್ಲಿ ಯಾವುದೇ ಅಹಿತರ ಘಟನೆ ನಡೆಯದಂತೆ ಈಗಾಗಲೇ ಜಿಲ್ಲೆಯಲ್ಲಿ 5 ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ ಮಾಹಿತಿ ನೀಡಿದರು.
ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ರಾಮನಗರ ಜಿಲ್ಲೆಯಲ್ಲಿ 4,35,572 ಪುರಷ ಮತದಾರರು, 4,50,573 ಮಹಿಳಾ ಮತದಾರರಿದ್ದು, ಒಟ್ಟಾರೆ 8,84,044 ಮತದಾರರಿದ್ದಾರೆ. 186 ಸೇವಾ ಮತದಾರರಿದ್ದು, 1,0058 ಅಂಗವಿಕಲ ಮತದಾರರು ಹಾಗೂ 80 ವರ್ಷ ಮೇಲ್ಪಟ್ಟ 2,0813 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿನ ಕ್ಷೇತ್ರವಾರು ಮತಗಟ್ಟೆಗಳ ವಿವರ
ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ 1,139 ಮತಗಟ್ಟೆಗಳಿದ್ದು, ಅದರಲ್ಲಿ 182-ಮಾಗಡಿ ವಿಧಾನಸಭಾ
ಕ್ಷೇತ್ರದಲ್ಲಿ 300 ಮತಗಟ್ಟೆಗಳು, 183-ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 276 ಮತಗಟ್ಟೆಗಳು, 184-ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ 297 ಮತಗಟ್ಟೆಗಳು, ಹಾಗೂ 185-ಚನ್ನಪಟ್ಟಣ ವಿಧಾನಸಭಾ
ಕ್ಷೇತ್ರದಲ್ಲಿ 266 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 4 ವಿಧಾನಸಭಾ ಕ್ಷೇತ್ರಗಳ ಮತಕ್ಷೇತ್ರಗಳಿಗೆ ಒಟ್ಟು 16 ಚೆಕ್‍ಪೋಸ್ಟ್‌ಗಳನ್ನು ಸ್ಥಾಪಿಸಲಾಗುತ್ತದೆ. ಅಲ್ಲದೇ ಮತದಾನ ಪ್ರಕ್ರಿಯೆಯನ್ನು ಸುಗಮವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲು ಒಟ್ಟು 5775 ಪಿಆರ್‍ಒ, ಎಪಿಆರ್‍ಒ ಮತ್ತು ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅಗತ್ಯ ಸಿಬ್ಬಂದಿ ಜಿಲ್ಲೆಯಲ್ಲಿ ಲಭ್ಯವಿರಲಿದ್ದಾರೆ ಎಂದರು.

ಒಟ್ಟು 1139 ಮತಗಟ್ಟೆಗಳಲ್ಲಿ ನಾಗರೀಕರಿಗೆ ಮೂಲಭೂತ ಸೌಲಭ್ಯಗಳಾದ ರ್‍ಯಾಂಪ್, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ (ಪುರುಷ/ಮಹಿಳೆ), ವಿದ್ಯುತ್ ಸಂಪರ್ಕ, ಪೀಠೋಪಕರಣಗಳು ಇತರೆ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ
ಪ್ರತಿ ಚೆಕ್‍ಪೋಸ್ಟ್‍ಗಳಲ್ಲಿ ಎಸ್‍ಎಸ್‍ಟಿ ಅಧಿಕಾರಿಗಳ ತಂಡ ಹಾಗೂ ಪೋಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿರುತ್ತದೆ. ಅದರಂತೆ ಪ್ರತಿ ಮತಕ್ಷೇತ್ರಕ್ಕೆ ಪ್ಲೈಯಿಂಗ್ ಸ್ಕ್ಯಾಡ್ ಮತ್ತು ವಿಡಿಯೋ ಸರ್ವೆಲೆನ್ಸ್ ತಂಡಗಳನ್ನು ಸ್ಥಾಪಿಸಲಾಗಿರುತ್ತದೆ. ಅದರಂತೆಯೇ ಮೂರು ತಂಡಗಳು ಈಗಾಗಲೆ ಕಾರ್ಯನಿರತವಾಗಿವೆ ಎಂದು
ಹೇಳಿದರು.
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಕುರಿತ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದೂ.ಸಂಖ್ಯೆ: 27275946 ಹಾಗೂ (1950) ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ಇಲ್ಲಿ ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರು ಹಾಗೂ ಚುನಾವಣಾ ಆಕ್ರಮಗಳ ಬಗ್ಗೆ ಮಾಹಿತಿ ನೀಡಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿನ ಭಿತ್ತಿ ಪತ್ರಗಳು, ಕಟೌಟ್‌ಗಳು ಹಾಗೂ ಬ್ಯಾನರ್‌ಗಳನ್ನು ತೆರವುಗೊಳಿಸಲು ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ದಿನಕರ್ ಶೆಟ್ಟಿ ಹಾಗೂ ಅಪರ ಜಿಲ್ಲಾಧಿಕಾರಿ ಶಿವಾನಂದ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಹೀಗೆ ರಾಜ್ಯ ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರಿತ್ತಿದ್ದು, ಆಯಾ ಜಿಲ್ಲೆಗಳಲ್ಲಿ ಜಿಲ್ಲಾಡಳಿತಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿವೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಆಯಾ ಜಿಲ್ಲೆಗಳ ಜಿಲ್ಲಾಧಿಗಳು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಅದರಂತೆಯೇ ರೇಷ್ಮೆನಗರ ಅಂತಲೇ ಪ್ರಸಿದ್ಧಿಯಾಗಿರುವ ರಾಮನಗರ ಜಿಲ್ಲೆಯಲ್ಲೂ ಕೂಡ ಜಿಲ್ಲಾಡಳಿತ ಸೂಕ್ತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.












Click it and Unblock the Notifications