ಬಂಡೆಮಠ ಶ್ರೀ ಆತ್ಮಹತ್ಯೆ ಪ್ರಕರಣ: ಆರೋಪಿಗಳಿಗೆ ನ. 15ರ ವರೆಗೆ ನ್ಯಾಯಾಂಗ ಬಂಧನ
ರಾಮನಗರ, ನವೆಂಬರ್ 4: ಕಂಚುಗಲ್ ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮೂರು ಆರೋಪಿಗಳನ್ನು ಮಾಗಡಿಯ ಒಂದನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾದೀಶರು ನವೆಂಬರ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.
ಅಕ್ಟೋಬರ್ 30ರಂದು ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಸಂಬಂಧಿಸಿದಂತೆ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಸೇರಿ ಮೂವರನ್ನು ಬಂಧಿಸಲಾಗಿತ್ತು. ಎರಡನೇ ಆರೋಪಿಯಾಗಿರುವ ನೀಲಾಂಬಿಕೆ ಬಂಡೆಮಠದ ಸ್ವಾಮೀಜಿಯ ಜೊತೆಗೆ ಮಾತನಾಡಿರುವ ವಿಡಿಯೋ ಕರೆಯ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಕಣ್ಣೂರು ಶ್ರೀಗಳಿಗೆ ನೀಡಿ ಬ್ಲಾಕ್‌ಮೇಲ್ ಮಾಡುತ್ತಿದ್ದರು ಎನ್ನಲಾಗಿದ್ದು, ಇದರಿಂದ ನೊಂದ ಬಸವಲಿಂಗ ಶ್ರೀ ಮಠದಲ್ಲೇ ನೇಣಿಗೆ ಶರಣಾಗಿದ್ದರು.
ಶನಿವಾರ ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ಎ1 ಆರೋಪಿ ಕಣ್ಣೂರು ಮಠದ ಡಾ. ಮೃತ್ಯುಂಜಯ ಸ್ವಾಮೀಜಿ, ಎ2 ಆರೋಪಿ ನೀಲಾಂಬಿಕೆ ಹಾಗೂ ಎ3 ಆರೋಪಿ ಮಹದೇವಯ್ಯರ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನಲೆ ಪೊಲೀಸರು ಮೂವರು ಆರೋಪಿಗಳನ್ನು ನ್ಯಾಯಲಯದ ಮುಂದೆ ಹಾಜರು ಪಡಿಸಿದ್ದರು.
ವಿಚಾರಣೆ ನಡೆಸಿದ ಮಾಗಡಿಯ ಒಂದನೇ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಧೀಶರಾದ ಎಂ. ಧನಲಕ್ಷ್ಮಿ ಆದೇಶ ನವೆಂಬರ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ. ಮೃತ್ಯುಂಜಯ ಶ್ರೀ ಮತ್ತು ಮಹದೇವಯ್ಯರನ್ನು ರಾಮನಗರ ಜೈಲಿಗೆ ಹಾಗೂ ಎ2 ಆರೋಪಿ ನೀಲಾಂಬಿಕೆಯನ್ನು ಪರಪ್ಪನ ಅಗ್ರಹಾರದ ಜೈಲಿನಲ್ಲಿಡಲಾಗಿದೆ.

ಭಾನುವಾರ ಬಂಧಿತರಾಗಿದ್ದ ಆರೋಪಿಗಳನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಪೊಲೀಸರ ಮನವಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ ನವೆಂಬರ್ 4 ರವರೆಗೆ ಕಸ್ಟಡಿಗೆ ನೀಡಿತ್ತು.
ಯುವತಿ ಬಳಸಿಕೊಂಡು ಹನಿಟ್ರ್ಯಾಪ್
ಆತ್ಮಹತ್ಯೆ ಮಾಡಿಕೊಂಡ ಬಸವಲಿಂಗ ಸ್ವಾಮೀಜಿ ಹಾಗೂ ಎ1 ಆರೋಪಿಯಾಗಿರುವ ಮೃತ್ಯುಂಜಯ ಸ್ವಾಮೀಜಿ ಪೂರ್ವಾಶ್ರಮದಲ್ಲಿ ದಯಾದಿಗಳು ಎಂದು ತಿಳಿದುಬಂದಿದ್ದು, ಮಠದ ಆಸ್ತಿ ವಿಷಯವಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಹಾಗಾಗಿ ಬಸವಲಿಂಗ ಸ್ವಾಮೀಜಿಯ ಮಾನ ಹಾನಿ ಹಾಗೂ ಬ್ಲ್ಯಾಕ್ ಮೇಲ್ ಮಾಡುವುದಕ್ಕಾಗಿ ದೊಡ್ಡಬಳ್ಳಾಪುರದ ಇಂಜಿನಿಯರ್ ವಿದ್ಯಾರ್ಥಿನಿಯನ್ನು ದಾಳವಾಗಿ ಬಳಸಿಕೊಂಡಿದ್ದಾರೆ. ಈ ಕೃತ್ಯಕ್ಕೆ ಎ3 ಆರೋಪಿಯಾಗಿರುವ ವಕೀಲ ಮಹದೇವಯ್ಯ ಹಾಗೂ ಈ ಮೂವರ ಜೊತೆಗೆ ಮಠದ ಒಳಗಿರುವ ಇನ್ನೂ ಕೆಲವರು ಸಹಕಾರ ನೀಡಿರುವ ಶಂಕೆ ಇದೆ ಎನ್ನಲಾಗುತ್ತಿದೆ.
ಇನ್ನು ವಿಚಾರಣೆ ವೇಳೆ ಆರೋಪಿಗಳು ಬಸವಲಿಂಗ ಸ್ವಾಮೀಜಿಯ ವಿಡಿಯೋ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಆದರೆ ಅದನ್ನು ಅವರ ಮಾನ ಕಳೆಯುವ ಸಲುವಾಗಿ ಮಾಡಿದ್ದೆವು, ಬ್ಲಾಕ್‌ಮೇಲ್ ಮಾಡಲು ಅಲ್ಲ ಎಂದು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications