ಚನ್ನಪಟ್ಟಣದಿಂದ ಅನಿತಾರನ್ನೇ ಕಣಕ್ಕಿಳಿಸಿ: ಜೆಡಿಎಸ್ ಕಾರ್ಯಕರ್ತರಿಂದ ಒತ್ತಡ

By: ರಾಮನಗರ ಪ್ರತಿನಿಧಿ
Subscribe to Oneindia Kannada

ರಾಮನಗರ, ಅಕ್ಟೋಬರ್ 23: ಚನ್ನಪಟ್ಟಣದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವುದಿಲ್ಲ ಎಂದು ಶನಿವಾರದಂದು ಬಿಡದಿಯ ಮ್ಯಾಗ್ನೋಲಿಯದಲ್ಲಿ ನಡೆದ ರಾಜ್ಯ ಜೆಡಿಎಸ್ ಯುವ ಕಾರ್ಯಕಾರಣಿಯಲ್ಲಿ ಹೆಚ್.ಡಿ.ದೇವೇಗೌಡರು ಘೋಷಿಸಿದ ಹಿನ್ನಲೆಯಲ್ಲಿ ಚನ್ನಪಟ್ಟಣದ ಜೆಡಿಎಸ್ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಅನಿತಾ ಕುಮಾರಸ್ವಾಮಿಯವರನ್ನು ಕಣಕ್ಕಿಳಸಬೇಕೆಂದು ಒತ್ತಾಯಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕಾಲನ್ನಾದರೂ ಸಹ ಹಿಡಿದು ಅನಿತಾಕುಮಾರಸ್ವಾಮಿ ಅವರು ಇಲ್ಲಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆ ಕ್ಷೇತ್ರದ ಕಾರ್ಯಕರ್ತರೆಲ್ಲರೂ ಮನವಿ ಮಾಡುತ್ತೇವೆ ಎಂದರು.

JDS workers request Anita Kumaraswamy to contest from Channapattana

ಪಟ್ಟಣದ 6ನೇ ಅಡ್ಡರಸ್ತೆಯ ಅಶ್ವಥ್ ನಿವಾಸದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು ಅನಿತಾ ಕುಮಾರಸ್ವಾಮಿ ಅವರು ಈಗಾಗಲೇ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದಾರೆ, ಹಲವಾರು ಸಭೆ ಸಮಾರಂಭಗಳಲ್ಲಿ, ಕ್ಷೇತ್ರದ ಕಾರ್ಯಕರ್ತರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದಾರೆ, ಅವರ ಗೆಲುವು ಈ ಬಾರಿ ನಿರಾಯಾಸವಾಗಿ ಸಾಧ್ಯವಾಗಲಿದೆ. ಕಾರ್ಯಕರ್ತರು, ಮುಖಂಡರೆಲ್ಲರೂ ಕುಮಾರಸ್ವಾಮಿ ಅವರ ಜನಪರ ಕಾರ್ಯಗಳನ್ನು ಮನೆ ಮನೆಗೆ ತಲುಪಿಸಿ ಅವರ ಗೆಲುವಿಗೆ ದುಡಿಯುತ್ತೇವೆ ಎಂದರು.

ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಅನಿತಾ ಅವರು ಸೋಲನ್ನು ಅನುಭವಿಸಿದ್ದಾರೆ ಆದರೆ ಈ ಬಾರಿ ಹಾಗೆ ಆಗಲು ಬಿಡುವುದಿಲ್ಲ, ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಒಗ್ಗೂಡಿ ಅನಿತಾಕುಮಾರಸ್ವಾಮಿ ಅವರೇ ಸ್ಪರ್ಧಿಸಬೇಕೆಂದು ಒತ್ತಡ ಹಾಕುತ್ತಿದ್ದೇವೆ, ಪಕ್ಷದ ವರಿಷ್ಟರಾದ ದೇವೇಗೌಡ ಅವರು ಅನಿತಾ ಕುಮಾರಸ್ವಾಮಿ ಅವರು ಸ್ಪರ್ಧಿಸುವುದಿಲ್ಲ ಎಂದು ಹೇಳಿರುವುದು ಕಾರ್ಯಕರ್ತರಲ್ಲಿ ಗೊಂದಲ ಉಂಟುಮಾಡಿದೆ.

ಮುಂದಿನ ದಿನಗಳಲ್ಲಿ ಅವರ ಮನವೊಲಿಸಿ ಅನಿತಾ ಅವರು ಈ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಒತ್ತಡ ಹೇರುತ್ತೇವೆ ಎಂದರು. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಿಂದ ಮಾಜಿ ಶಾಸಕಿ ಅನಿತಾಕುಮಾರಸ್ವಾಮಿ ಅವರು ಸ್ಪರ್ಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ, ಜೆಡಿಎಸ್ ಕಾರ್ಯಕರ್ತರೆಲ್ಲ ಈ ಬಾರಿ ಅನಿತಾ ಅವರ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದು ಜೆಡಿಎಸ್ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ಪಕ್ಷ ಒಗ್ಗಟ್ಟಾಗಿರುವುದನ್ನು ಒಡೆಯಲು ಕೆಲವರು ಸಂಚು ಮಾಡುತ್ತಿದ್ದು, ದೇವೇಗೌಡರ ಹೇಳಿಕೆ ನೀಡಿರುವುದನ್ನೇ ತಿರುಚಿ ಕಾರ್ಯಕರ್ತರನ್ನು ಚದುರಿಸುವ ಕೆಲಸ ಮಾಡುತ್ತಿದ್ದಾರೆ, ಇದನ್ನು ಕಾರ್ಯಕರ್ತರು ನಂಬಬಾರದು ಎಂದು ಮುಖಂಡರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ನಗರ ಜೆಡಿಎಸ್ ಅಧ್ಯಕ್ಷ ರಾಂಪುರ ರಾಜಣ್ಣ, ಮಾಜಿ ಶಾಸಕ ಎಂ.ಸಿ.ಅಶ್ವಥ್, ಬಮುಲ್ ಲಿಂಗೇಶ್ ಕುಮಾರ್, ನಗರಸಭೆ ಸದಸ್ಯರಾದ ಜಬೀವುಲ್ಲಾಖಾನ್ ಘೋರಿ, ಹಮೀದ್, ಟಿಎಪಿಸಿಎಂಎಸ್ ಅಧ್ಯಕ್ಷ ಸೀನಪ್ಪ, ಮುಖಂಡರಾದ ಹನುಮಂತೇಗೌಡ, ವಡ್ಡರಹಳ್ಳಿ ರಾಜಣ್ಣ, ಎಂ.ಸಿ.ಕರಿಯಪ್ಪ ಮತ್ತಿತರರು ಹಾಜರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
JDS workers decided to request JDS chief H D Deve Gowda to give Channapattana assembly constituency ticket to H D Kumaraswamy's wife Anita Kumaraswamy in 2018 Karnataka assembly elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ