JDS ಸಭೆ ಕರೆದ ಎಚ್‌ಡಿ.ದೇವೇಗೌಡ: ಇಂದು ನಿಖಿಲ್ ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಸ್ಥಾನ ಫಿಕ್ಸ್? ವಿವಿಧ ಚರ್ಚೆ
ಚನ್ನಪಟ್ಟಣ, ಜನವರಿ 12: ಚನ್ನಪಟ್ಟಣ ಪರಾಭವ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲಿನ ಬಳಿಕ ಮೊದಲ ಬಾರಿಗೆ ಜೆಡಿಎಸ್ ಪಕ್ಷದ ಶಾಸಕರು, ಮುಖಂಡರ ಸಭೆ ನಡೆಸಲು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ನಿರ್ಧರಿಸಿದ್ದಾರೆ. ಇಂದು ಭಾನುವಾರ ಚನ್ನಪಟ್ಟಣದಲ್ಲಿ ಸಭೆ ಕರೆದಿದ್ದು, ಪ್ರಮುಖ ವಿಷಯಗಳು, ಶಾಸಕರ ಕುಂದು ಕೊರತೆ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡುವ ಕುರಿತು ಚರ್ಚೆ ಆಗಲಿದೆ. ಈ ಸಭೆ ಮೂಲಕ ಜೆಡಿಎಸ್ ಶಾಸಕರ ಸೆಳೆಯಲು ಮುಂದಾಗಿರುವ 'ಕೈ' ಪಡೆಗೆ ಟಕ್ಕರ್ ನೀಡಲು ಮುಂದಾಗಿದ್ದಾರೆ.
ಚನ್ನಪಟ್ಟಣದಲ್ಲಿ ಕಳೆದ ವರ್ಷ ನಡೆದ ವಿಧಾನಸಭಾ ಉಪ ಚುನಾವಣೆ ವೇಳೆ ಜೆಡಿಎಸ್ ಅಭ್ಯರ್ಥಿ, ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದರು. ಇದು ಅವರ ಹ್ಯಾಟ್ರಿಕ್ ಸೋಲಾಗಿದೆ. ಇದರ ಬೆನ್ನಲ್ಲೆ ಚನ್ನಪಟ್ಟಣದಲ್ಲಿ ಇಂದು ಎಚ್‌ಡಿ ದೇವೇಗೌಡ ಅವರು ಸಭೆ ಆಹ್ವಾನಿಸಿದ್ದಾರೆ.

ಇವತ್ತೆ ನಿಖಿಲ್‌ಗೆ ಹೊಸ ಜವಾಬ್ದಾರಿ ನಿರ್ಧಾರ ಅಂತಿಮ
ಈಗಾಗಲೇ ನಿಖಿಲ್ ಕುಮಾರಸ್ವಾಮಿ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಬೇಕು ಕೆಲವರು ಆಗ್ರಹಿಸಿದ್ದಾರೆ. ಇದರ ಕುರಿತು ಶಾಸಕರು, ಮುಖಂಡರ ಅಭಿಪ್ರಾಯ ಪಡೆಯಲು ಸಭೆ ಆಹ್ವಾನಿಸಿದ್ದಾರೆ. ನಿಖಿಲ್ ಗೆ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಬೇಕೋ? ಬೇಡವೋ? ಎಂಬುದು ಇಂದು ನಿರ್ಧಾರವಾಗಲಿದೆ.
ನಿಖಿಲ್ ಕುಮಾರಸ್ವಾಮಿ ಅವರಿಗೆ ಹೊಸ ಜವಾಬ್ದಾರಿ ನೀಡಿದರೆ ಹೇಗೆ ನೀಡಬೇಕು? ಎಂಬುದು ಚರ್ಚೆಗೆ ಬರಲಿದೆ. ಶಾಸಕರು ಮುಖಂಡರ ಬಗ್ಗೆ ಅಭಿಪ್ರಾಯ ಕೇಳಲಿದ್ದಾರೆ. ಒಂದು ವೇಳೆ ಇಲ್ಲಿ ಎಲ್ಲವು ಒಮ್ಮತಕ್ಕೆ ಬಂದಲ್ಲಿ ಇಂದೇ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಫೈನಲ್ ಆಗಲಿದೆ. ಅಧಿಕೃತ ಘೋಷಣೆಯು ಆಗುವ ಸಾಧ್ಯತೆ ಇದೆ.
ಸಭೆಯಲ್ಲಿ ಖುದ್ದು ದೇವೇಗೌಡರೇ ಶಾಸಕರು, ಮುಖಂಡರ ಅಸಮಾಧಾನ, ಕುಂದು ಕೊರತೆ ಆಲಿಸಲಿದ್ದಾರೆ. ಪಕ್ಷ ಸಂಘಟನೆಗೆ ಒತ್ತು ಕೊಡುವಂತೆ ಸೂಚನೆ ನೀಡಲಿದ್ದಾರೆ. ಪಕ್ಷದೊಳಗಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಶಮನ ಮಾಡುವ ಭರವಸೆ ನೀಡಲಿದ್ದಾರೆ. ಈ ವೇಳೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಹ ಸಭೆಯಲ್ಲಿರಲಿದ್ದಾರೆ. ಅವರಿಗೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಹೊಸ ಜವಾಬ್ದಾರಿ ಕೊಡುವ ಮನಸ್ಸಿದೆ.

ಜೆಡಿಎಸ್‌ನಲ್ಲಿ ಒಗ್ಗಟ್ಟಿನ ಮಂತ್ರ ಜಪ..
ಎಚ್‌ಡಿಕೆ ಹಾಗೂ ದೇವೇಗೌಡರು ಎಲ್ಲ ಶಾಸಕರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿದ್ದಾರೆ. ಎಲ್ಲರ ಸಲಹೆ, ಸೂಚನೆ ಪರಿಗಣಿಸಲಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷವು ಜೆಡಿಎಸ್ ಶಾಸಕರನ್ನು ಪಕ್ಷಕ್ಕೆ ಸೆಳೆಯಲು ತಯಾರಿ ನಡೆಸಿದೆ. ಪಕ್ಷದಲ್ಲೇ ಉಳಿಸಿಕೊಳ್ಳಲು ಎಲ್ಲ ಕಸರತ್ತು ನಡೆಸಲಾಗುತ್ತದೆ. ಜೊತೆಗೆ ಒಗ್ಗಟ್ಟಿನ ಮಂತ್ರ ಪಠಿಸಲಾಗುತ್ತದೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಒಗ್ಗಟ್ಟಾಗಿದ್ದೇವೆ ಎಂಬ ರವಾನಿಸಿದಂತಾಗುತ್ತದೆ ಎಂಬುದು ಎಚ್.ಡಿ.ದೇವೇಗೌಡರ ಪ್ಲಾನ್ ಆಗಿದೆ.
ನಿಖಿಲ್ ಕುಮಾರಸ್ವಾಮಿ ಅವರು ಒಂದು ಲೋಕಸಭಾ ಚುನಾವಣೆ, ಎರಡು ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿದ್ದಾರೆ. ರಾಜಕಾರಣದಲ್ಲಿ ಆರಂಭದಲ್ಲಿಯೇ ಸೋಲಿನ ಕಹಿ ಅನುಭವ ಅವರಿಗಾಗಿದೆ. ಹೀಗಿದ್ದರೂ ಅವರಿಗೇ ಜಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂಬುದಕ್ಕೆ ಕೆಲವು ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications