Independence Day 2023: ಮಾಗಡಿ ತಾಲೂಕಿನ ಅಮೃತ್ ಸರೋವರ ಕೆರೆ ದಂಡೆ ಮೇಲೆ ಧ್ವಜಾರೋಹಣ
ಮಾಗಡಿ, ಆಗಸ್ಟ್, 15: ಆಜಾದಿ ಕಾ ಅಮೃತ ಮಹೋತ್ಸವ ಸ್ಮರಣೆಗೆ ನಿರ್ಮಿಸಿದ "ಅಮೃತ ಸರೋವರ" ಬಳಿ 76ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನರೇಗಾ ಯೋಜನೆಯಡಿ ಮಾಗಡಿ ತಾಲೂಕಿನ ಅಮೃತ ಸರೋವರ ಜಲ ಮೂಲ ಪುನಶ್ಚೇತನ, ನರೇಗಾದಡಿ ಕೆರೆ ಕಾಮಗಾರಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ತಾಲೂಕಿಗೆ ನೀಡಿದ್ದ 58 ಕೆರೆಗಳ ನಿರ್ಮಾಣದ ಗುರಿಯಲ್ಲಿ ಈಗಾಗಲೇ ನಿರ್ಮಾಣ 48 ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದ ಕೆರೆಗಳು ಪ್ರಗತಿಯಲ್ಲಿದೆ. ಈ ಅಭಿವೃದ್ಧಿ ಹೊಂದಿರುವ ಕೆರೆಗಳ ಬಳಿ 76ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಹಾಗೂ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮಗಳು ಪಂಚಾಯಿತಿ ಮಟ್ಟದಲ್ಲಿ ನೆರವೇರಿತು.

ತಾಲೂಕಿನ ಮಾದಿಗೊಂಡನಹಳ್ಳಿ, ಬೆಳಗುಂಬ, ಶ್ರೀಗಿರಿಪುರ, ಹಂಚಿಕುಪ್ಪೆ, ಅಜ್ಜನಹಳ್ಳಿ, ನಾರಸಂದ್ರ, ಸೋಲೂರು, ಕಲ್ಯಾ, ಸಂಕೀಘಟ್ಟ, ತಿಪ್ಪಸಂದ್ರ ಸೇರಿದಂತೆ 34 ಕೆರೆಗಳ ದಂಡೆಯ ಮೇಲೆ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಈ ವೇಳೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರನ್ನು ಸ್ಮರಿಸಲಾಯಿತು.
ಗ್ರಾಮೀಣಾಭಿವೃದ್ಧಿ ಆಯುಕ್ತರ ನಿರ್ದೇಶನದಂತೆ ನಿವೃತ್ತ ಸೈನಿಕರು, ಸ್ವತಂತ್ರ ಹೋರಾಟಗಾರರು ಹಾಗೂ ಊರಿನ ಹಿರಿಯ ನಾಗರಿಕರ ಬಳಿ ಧ್ವಜಾರೋಹಣ ನೆರವೇರಿಸಿ, ಗಣ್ಯರನ್ನು ಸನ್ಮಾನಿಸಲಾಯಿತು. ಇದೇ ವೇಳೆ ನನ್ನ ಮಣ್ಣು ನನ್ನ ದೇಶ ಕಾಯಕ್ರಮದಡಿ ಪಂಚಪ್ರಾಣ ಶಪಥ, ವಸುಧಾ ವಂದನ್, ಮಾಲೀಕತ್ವದ ಪ್ರಮಾಣ ಸೇರಿ ವಿವಿಧ ಕಾರ್ಯಕ್ರಮಗಳು ನಡೆದವು.
ಅಮೃತ ಸರೋವರ ಯೋಜನೆಯಡಿ ನಿರ್ಮಿಸಿದ ಕೆರೆಗಳ ಬಳಿ ಹುತಾತ್ಮರ ಸ್ಮಾರಕ ಶಿಲಾಫಲಕ ಅಳವಡಿಕೆ ಪ್ರಮುಖ ಆಕರ್ಷಣೆಯಾಗಿತ್ತು. ಮಾಗಡಿ ತಾಲೂಕಿನಲ್ಲಿ 58 ಕೆರೆಗಳನ್ನು ನಿರ್ಮಿಸಲಾಗಿದ್ದು, ಆಯಾ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಸಹಕಾರಿಯಾಗುವುದರೊಂದಿಗೆ ರೈತರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಇವುಗಳನ್ನು ಅಭಿವೃದ್ಧಿ ಪಡಿಸಲಾಗಿದೆ.
ಮಾದಿಗೊಂಡನಹಳ್ಳಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ನಿವೃತ್ತ ಸೈನಿಕರು ರಾಮಣ್ಣನವರು, ನರೇಗಾ ಯೋಜನೆ ಬಡವರ ಏಳಿಗೆಗೆ ನೆರವಾಗಿದೆ. ಯೋಜನೆಯಲ್ಲಿ ಹಲವಾರು ಸವಲತ್ತುಗಳಿದ್ದು, ಜನರು ಹಾಗೂ ಹಿಂದುಳಿದವರು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆದರೇ ದೇಶಕ್ಕೆ ಕೀರ್ತಿ ತಂದಂತೆ. ಹಾಗಾಗಿ ಪ್ರತಿಯೊಬ್ಬರೂ ಕೆರೆಯ ಸದ್ಬಳಕೆ ಪಡೆದುಕೊಳ್ಳಿ ಎಂದು ಹೇಳಿದರು.
ಮಕ್ಕಳಿಗೆ ವಿವಿಧ ಚಟುವಟಿಕೆಗಳ ಆಯೋಜನೆ
ಅಮೃತ ಸರೋವರ ಬಳಿ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಮತ್ತು ನನ್ನ ಮಣ್ಣು ನನ್ನ ದೇಶ ಅಭಿಯಾನದಡಿ ಅನೇಕ ಕಾರ್ಯಕ್ರಮಗಳು ನಡೆದವು. ಮಕ್ಕಳಿಗೆ ಸಂಬಂಧಿಸಿದಂತೆ ಚಿತ್ರಕಲೆ, ರಂಗೋಲಿ, ಭಾಷಣ, ವಾಲಿಬಾಲ್, ಥ್ರೋಬಾಲ್ ಸೇರಿ ಇತರ ಸ್ಪರ್ಧೆ ಏರ್ಪಡಿಸಿದ್ದು, ಜಯಶೀಲರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಜೊತೆಗೆ ಸಾಂಪ್ರದಾಯಿಕ ಆಟಗಳಾದ ಖೋ ಖೋ, ಲಗೋರಿ, ಹಗ್ಗ ಜಗ್ಗಾಟ, ಕುರ್ಚಿಯಾಟ, ಹಗ್ಗ ಜಿಗಿತ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನರಸಿಂಹಮೂರ್ತಿ, ತಾಂತ್ರಿಕ ಸಂಯೋಜಕ ಅಭಿಯಂತರ ಮಹೇಶ್ ಕೆ.ಎಂ, ತಾಂತ್ರಿಕ ಸಹಾಯಕ ಅಭಿಯಂತರ ಸಚಿನ್ ಕುಮಾರ್, ಐಇಸಿ ಸಂಯೋಕರು ರವಿ ಅತ್ನಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಸತೀಶ್, ಪಂಚಾಯಿತಿ ಸದಸ್ಯರು, ಊರಿನ ಗ್ರಾಮಸ್ಥರು, ಮಹಿಳೆಯರು, ಮಕ್ಕಳು ಭಾಗಿಯಾಗಿದ್ದರು.












Click it and Unblock the Notifications