ರಾಮನಗರದಲ್ಲಿ ಕಸಾಯಿಖಾನೆಗೆ ಅಕ್ರಮ ಗೋವು ಸಾಗಾಟ: ಇಬ್ಬರ ಬಂಧನ
ರಾಮನಗರ, ಮಾರ್ಚ್ 06: ಕ್ಯಾಂಟರ್ ನಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಎಮ್ಮೆ ಹಾಗೂ ನಾಟಿ ಹಸುಗಳನ್ನು ಸಾಗಿಸುತ್ತಿದ್ದವರನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿ ರಾಸುಗಳನ್ನು ರಕ್ಷಣೆ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರದ ಪುರ ಪೊಲೀಸ್ ಠಾಣೆ ಮುಂದೆ ಖಚಿತ ಮಾಹಿತಿ ಮೇರೆಗೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕ್ಯಾಂಟರ್ ವಾಹನ ತಡೆದು ಪರಿಶೀಲನೆ ಮಾಡಿದಾಗ ಜಾನುವಾರುಗಳು ಇದ್ದಿದ್ದು ಕಂಡು ಬಂದಿದೆ. ತಕ್ಷಣ ಈ ಬಗ್ಗೆ ವಿಚಾರಣೆ ಮಾಡಿ ರಾಸುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಕ್ಯಾಂಟರ್ ನಲ್ಲಿ 18 ಕ್ಕೂ ಹೆಚ್ಚು ಎಮ್ಮೆ ಹಾಗೂ ನಾಟಿ ಹಸುಗಳನ್ನು ಅಮಾನವೀಯವಾಗಿ ತುಂಬಿ ನಾಗಮಂಗಲದಿಂದ ತಮಿಳುನಾಡಿನ ಡಂಕಣಿಕೋಟೆಗೆ ಸಾಗಿಸಲಾಗುತ್ತಿತ್ತು. ದಾಳಿ ವೇಳೆ ಸಿದ್ದಿಕ್ ಹಾಗೂ ನಾಗರಾಜು ಇಬ್ಬರು ಆರೋಪಿಗಳು ಸಿಕ್ಕಿದ್ದು ಕ್ಯಾಂಟರ್ ವಾಹನ ಹಾಗೂ ಇಬ್ಬರು ಆರೋಪಿಗಳನ್ನು ಪುರ ಠಾಣೆ ಪೊಲೀಸರಿಗೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಒಪ್ಪಿಸಿದ್ದಾರೆ.

ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರುವ ಪುರ ಪೋಲೀಸ್ ಠಾಣೆಯ ಪೋಲೀಸರು ಪಕ್ರರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇನ್ನು ಜಾನುವಾರುಗಳನ್ನು ಪಾಂಡವಪುರ ಗೋಶಾಲೆಗೆ ಬಿಡುವುದಾಗಿ ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಹಿಂದು ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ಗಜೇಂದ್ರ ಸಿಂಗ್, ಕಳೆದೆರಡು ತಿಂಗಳಿನಿಂದ ಸುಮಾರು 15 ಕ್ಕೂ ಹೆಚ್ಚು ಕಸಾಯಿಖಾನೆಗೆ ಜಾನುವಾರಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣಗಳು ಪತ್ತೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದರು.

ಮುಂದೆಯೂ ನಿರಂತರವಾಗಿ ಅಕ್ರಮ ಗೋ ಸಾಗಾಣಿಕೆ ತಡೆಗಟ್ಟುತ್ತೇವೆ. ಇತ್ತೀಚಿನ ದಿನಗಳಲ್ಲಿ ಗೋವುಗಳನ್ನು ಐಷಾರಾಮಿ ಕಾರುಗಳಲ್ಲಿ ರಾಸುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿದರು.












Click it and Unblock the Notifications