ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ಬರ, ಜನ ಸಿದ್ಧರಾಗಬೇಕು-ಕುಮಾರಸ್ವಾಮಿ
ರಾಮನಗರ, ಜೂನ್ 14: ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ರೇಸ್‌ಗೆ ಹಲವು ಮಂದಿ ಇದ್ದಾರೆ. ಅದರಿಂದ ಈ ಪಕ್ಷದಲ್ಲಿ ಜನತೆಯ ಸಮಸ್ಯೆಗಿಂತ ಹೆಚ್ಚಾಗಿ ಆಂತರಿಕ ಕಲಹ ಹೆಚ್ಚಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಡಾ.ಜಿ.ಪರಮೇಶ್ವರ್ ಸಿಎಂ ರೇಸ್‌ನಲ್ಲಿಲ್ಲವಾ? ಮೊನ್ನೆ ಸಿಎಂ ಸಿದ್ದರಾಮಯ್ಯ ದಲಿತರ ಸಭೆ ಮಾಡಿ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಡಂಗುರ ಹೊಡೆದರು. ಅದರೆ ಅದರ ಬೆನ್ನಲ್ಲೇ ಪರಮೇಶ್ವರ್ ಅವರೇ ನಮ್ಮ ಪಕ್ಷದಲ್ಲಿ ದಲಿತರ ಬಗ್ಗೆ ಧ್ವನಿ ಎತ್ತಿಲ್ಲ ಅಂತಾ ಹೇಳಿದ್ದರು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

2013ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ನಾನೇ ಅಧ್ಯಕ್ಷ ಆಗಿದ್ದೆ. ಆಗ ನನ್ನ ಹೆಸರು ಯಾರೂ ಹೇಳಲಿಲ್ಲ ಅಂತ ಪರಮೇಶ್ವರ್ ಅವರೇ ಹೇಳಿದ್ದಾರೆ. ಅವರ ಹೇಳಿಕೆಯೇ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದನ್ನು ಸೂಚಿಸುತ್ತಿದೆ. ಈಗ ಅವರು ವಿಮರ್ಶೆ ಶುರು ಮಾಡಿದ್ದಾರೆ. ಅದರಿಂದ ಈ ಪಕ್ಷದಲ್ಲಿ ಜನತೆಯ ಸಮಸ್ಯೆಗಿಂತ ಹೆಚ್ಚಾಗಿ ಆಂತರಿಕ ಕಲಹ ಹೆಚ್ಚಿದೆ ಎಂದರು.
ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ಕೊಡಬೇಡಿ ಎಂದಿದ್ದೆ
ರಾಜ್ಯದ ಎರಡು ರಾಷ್ಟ್ರೀಯ ಪಕ್ಷಗಳಿಗೆ ಇವತ್ತು ಪ್ರತಿಯೊಂದಕ್ಕೂ ದೆಹಲಿಯಿಂದಲೇ ಡೈರೆಕ್ಷನ್ ಬರಬೇಕು. ಹಾಗಾಗಿ ನಾನು ರಾಜ್ಯದ ಜನತೆಗೆ ಕನ್ನಡಿಗರಿಗಾಗಿ ಕನ್ನಡಿಗನಿಗೆ ಅಧಿಕಾರ ಕೊಡಿ ಎಂದು ಕೇಳಿಕೊಂಡೆ. ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ಕೊಡಬೇಡಿ ಅಂತಾ ದಿನ ಜಾಗಟೆ ಹೊಡೆದೆ ಆದರೆ ಜನರು ಅವರ ಬಿಟ್ಟಿ ಭಾಗ್ಯಗಳಿಗೆ ಮರಳಾಗಿ ರಾಷ್ಟ್ರೀಯ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರು ಗ್ಯಾರೆಂಟಿಗಳ ಬಗ್ಗೆ ಅವರೇ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಅದು ಏನೇನ್ ಆಗುತ್ತೋ ನೋಡೊಣ. ಅವರು ಏನು ಮಾತು ಕೊಟ್ಟಿದ್ದಾರೆ ಹಾಗೆ ನಡೆದುಕೊಳ್ಳಲಿ. ಅದೇನೋ ನುಡಿದಂತೆ ನಡೆದ ಸರ್ಕಾರ ಅಂತ ಹೇಳ್ತಿದ್ದಾರಲ್ಲ ಮಾಡಲಿ ಅದರ ಪರಿಣಾಮಗಳು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ವ್ಯಂಗ್ಯವಾಡಿದರು.
ಸರ್ಕಾರದ ತನಿಖೆಯಿಂದ ಯಾವ ಲೂಟಿಕೋರರಿಗೂ ಶಿಕ್ಷೆ ಆಗುವುದಿಲ್ಲ
ಕಾಂಗ್ರೆಸ್ ಹಾಗೂ ಬಿಜೆಪಿ ಒಳ ಒಪ್ಪಂದ ಕುರಿತು ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಹಿಂದೆ ಜೆಡಿಎಸ್ ಬಿಜೆಪಿಯ ಬಿ ಟೀಂ ಅಂತ ಹೇಳ್ತಿದ್ರಲ್ಲ, ಬಿಜೆಪಿ- ಕಾಂಗ್ರೆಸ್ ಹೊಂದಾಣಿಕೆ ಬಗ್ಗೆ ಪ್ರತಾಪ್ ಸಿಂಹ ಹೇಳಾಯ್ತು, ಸಿ.ಟಿ.ರವಿ ಹೇಳಿದ್ದಾರೆ. ಸತ್ಯ ಏನಿದೆ ಅಂತ ಬಿಜೆಪಿಯ ಹಾಗೂ ಕಾಂಗ್ರೆಸ್ ನಾಯಕರೇ ಹೇಳಬೇಕು ಎಂದರು.
ಇನ್ನು ಅರ್ಕವತಿ ಕರ್ಮಕಾಂಡದ ಬಗ್ಗೆ ಬೊಮ್ಮಾಯಿ ಯಾಕೆ ತನಿಖೆ ಮಾಡಲಿಲ್ಲ. ಮೂರು ವರ್ಷ ಇವರದ್ದೇ ಅಧಿಕಾರ ಇತ್ತಲ್ಲ, ಯಾಕೆ ಅವರನ್ನು ಕೊರಳ ಸೆರಗಲ್ಲಿ ಇಟ್ಕೊಂಡಿದ್ದಿರಿ, ಈಗ ಕಾಂಗ್ರೆಸ್‌ನವರು ಹೇಳುತ್ತಾರಲ್ಲ, ಬಿಜೆಪಿ ಸರ್ಕಾರದ ಬಗ್ಗೆ ತನಿಖೆ ಅಂತ. ಬರೆದಿಟ್ಟುಕೊಳ್ಳಿ ಯಾವುದೇ ತನಿಖೆ ಆಗಲ್ಲ. ಯಾವ ತನಿಖೆಯಿಂದಲೂ ರಾಜ್ಯ ಲೂಟಿ ಮಾಡಿದವರಿಗೆ ಏನೂ ತೊಂದರೆ ಆಗುವುದಿಲ್ಲ ಎಂದು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರದಲ್ಲೂ ಕಾಂಗ್ರೆಸ್ ಪಕ್ಷದ ಅಕ್ರಮಗಳ ಬಗ್ಗೆ ತನಿಖೆ ನಡೆದು ಎಲ್ಲಾ ಹಳ್ಳಹಿಡಿಯಿತು. ಈಗಲೂ ಅಷ್ಟೇ ಕಾಂಗ್ರೆಸ್ ಸರ್ಕಾರದಲ್ಲೂ ಬಿಜೆಪಿ ಅಕ್ರಮಗಳ ಬಗ್ಗೆ ತನಿಖೆ ನಡೆದರು ಅವುಗಳು ಕೂಡ ಹಳ್ಳ ಹಿಡಿಯುತ್ತವೆ. ಯಾವುದಕ್ಕೂ ತಾರ್ಕಿಕ ಅಂತ್ಯ ಇಲ್ಲ ಎಂದರು.
ಮೋಡ ಬಿತ್ತನೆ ಹೆಸರಿನಲ್ಲಿ ಲೂಟಿ ಹುನ್ನಾರ
ಮೋಡ ಬಿತ್ತನೆ ಕುರಿತು ಕೃಷಿ ಸಚಿವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮೋಡ ಬಿತ್ತನೆ ಹೆಸರಿನಲ್ಲಿ ಲೂಟಿ ಮಾಡುವ ಹುನ್ನಾರ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಬರ ಎನ್ನುವುದು ಮೊದಲಿನಿಂದಲೂ ಬಂದಿದೆ. ಜನರು ಅದನ್ನು ಎದುರಿಸಲು ಸಿದ್ಧವಾಗಬೇಕು
ಇನ್ನು ಜಾತಿ ಗಣತಿಯಲ್ಲಿ ಯಾವುದೇ ವಾಸ್ತವಾಂಶ ಇಲ್ಲ. ಅವತ್ತಿನ ಮುಖ್ಯಮಂತ್ರಿ ಆಗಿದ್ದವರು ಅದನ್ನ ಬರೆಸಿಕೊಂಡರು. ಅವತ್ತಿನ ಸೆಕ್ರೆಟರಿ ಅದಕ್ಕೆ ಸಹಿ ಹಾಕಿರಲಿಲ್ಲ. ಯಾಕೆ ಸಹಿ ಹಾಕಿರಲಿಲ್ಲ. ಅದು ಯಾವುದೇ ರೀತಿಯ ವಾಸ್ತವಾಂಶದ ವರದಿ ಅಲ್ಲ. ಯಾರನ್ನೋ ಸಂತೋಷ ಪಡಿಸಲು ಸಿದ್ಧಪಡಿಸಿರುವ ವರದಿ ಎಂದರು.












Click it and Unblock the Notifications