ಕುಮಾರಸ್ವಾಮಿ ಹುಟ್ಟುಹಬ್ಬ ಸಂಭ್ರಮ: ದೇವಾಲಯ, ದರ್ಗಾ, ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ
ರಾಮನಗರ ಡಿಸೆಂಬರ್ 16: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪಂಚರತ್ನ ರಥಯಾತ್ರೆಯ ಒತ್ತಡದ ನಡುವೆಯೂ ಪ್ರತಿ ವರ್ಷದಂತೆ ಈ ಬಾರಿಯೂ ಹುಟ್ಟುಹಬ್ಬವನ್ನು ತಮ್ಮ ಕರ್ಮಭೂಮಿ ರಾಮನಗರದಲ್ಲಿ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರೊಂದಿಗೆ ಆಚರಿಸಿಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ 64ನೇ ಹುಟ್ಟುಹಬ್ಬ ದಿನ, ಮೊದಲಿಗೆ ನಗರದ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಮುಂದೆ ಅಭಿಮಾನಿ ತಂದಿದ್ದ 10 ಕೆಜಿ ಗ್ರಾತದ ಬೃಹತ್ ಕೇಕ್ ಕಟ್ ಮಾಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ಕುಮಾರಸ್ವಾಮಿ ಆಗಮನಕ್ಕೂ ಮೊದಲು ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಎಂಎಲ್ಸಿ ಬೋಜೆಗೌಡ ಮಾಜಿ, ಎಂಎಲ್ಸಿ ರಮೇಶ್ ಗೌಡ ಸೇರಿದಂತೆ ಹಲವು ಗಣ್ಯರು ಕುಮಾರಸ್ವಾಮಿ ಅವರಿಗಾಗಿ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.

ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದ ನಂತರ ಲೂರ್ದು ಮಾತಾ ಚರ್ಚ್‌ಗೆ ಭೇಟಿ ನೀಡಿದ ಕುಮಾರಸ್ವಾಮಿ ಕ್ಯಾಂಡಲ್ ಬೆಳಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಅಭಿಮಾನಿಗಳು ಚರ್ಚ್ ಅವರಣದಲ್ಲಿ ಕುಮಾರಸ್ವಾಮಿ ಅವರಿಂದ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿದರು.
ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಹೆಚ್.ಡಿ.ಕುಮಾರಸ್ವಾಮಿ ಹಜರತ್ ಫೀರೆನ್ ಷಾ ವಾಲಿ ದರ್ಗಾಕ್ಕೆ ತೆರಳಿ ಅಲ್ಪಸಂಖ್ಯಾತ ಸಮುದಾಯದವರೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದರ್ಗಾ ಬಳಿ ಜಮಾಯಿಸಿದ ನೂರಾರು ಸಂಖ್ಯೆಯ ಮುಸ್ಲಿಂ ಅಭಿಮಾನಿಗಳು ಕುಮಾರಸ್ವಾಮಿಗೆ ಬೃಹತ್ ಬಾದಾಮಿ ಹಾರ ಹಾಕಿ. ರಾಜ್ಯದ ಮುಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಂಬ ಘೋಷಣೆ ಕೂಗಿದರು.
ಹಜರತ್ ಫೀರೆನ್ ಷಾ ವಾಲಿ ದರ್ಗಾ ಮುಂದೆಯೂ ಅಭಿಮಾನಿಗಳು ಕುಮಾರಸ್ವಾಮಿ ಅವರಿಂದ ಬೃಹತ್ ಕೇಕ್ ಕಟ್ ಮಾಡಿಸಿದ್ದಾರೆ. ಬೃಹತ್ ಕೇಕ್ ಮೇಲೆ ಲಡ್ಡುನಲ್ಲಿ ಮುಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯವರಿಗೆ 64 ನೇ ಜನ್ಮದಿನದ ಶುಭಾಶಯಗಳು ಎಂದು ಬರೆದಿರುವುದು ವಿಶೇಷವಾಗಿತ್ತು.
ಇದೇ ಸಂದರ್ಭದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಡೋಲು, ಬ್ಯಾಂಡ್, ಪೂಜಾ ಕುಣಿತದೊಂದಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮೆರವಣಿಗೆ ಮಾಡುವ ಮೂಲಕ ಅಭಿಮಾನ ಮೆರೆದರು. ಮೆರವಣಿಗೆ ವೇಳೆ ಸಾವಿರಾರು ಅಭಿಮಾನಿಗಳು ನೆರೆದಿದ್ದು, ಕುಮಾರಸ್ವಾಮಿ ಪರ ಘೋಷಣೆ ಕೂಗಿದರು.











Click it and Unblock the Notifications