ಪರಿಷತ್ ಚುನಾವಣೆ ಬಳಿಕ ನಮ್ಮ ಶಕ್ತಿ ಏನೆಂಬುದು ತಿಳಿಯಲಿದೆ; ಎಚ್‌ಡಿಕೆ
ರಾಮನಗರ, ಡಿಸೆಂಬರ್ 10: "ಜೆಡಿಎಸ್ ಪಕ್ಷವನ್ನು ಲಘುವಾಗಿ ಕೆಲವರು ಪರಿಗಣಿಸಿದ್ದು, ವಿಧಾನ ಪರಿಷತ್ ಚುನಾವಣೆ ಬಳಿಕ ನಮ್ಮ ಶಕ್ತಿ ಏನೆಂಬುದು ತಿಳಿಯಲಿದೆ," ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಥಳೀಯ ಸಂಸ್ಥೆಗಳಿಂದ ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಸ್ಥಾನದ ಚುನಾವಣೆ ಹಿನ್ನಲೆಯಲ್ಲಿ ಚನ್ನಪಟ್ಟಣ ನಗರಸಭೆಯಲ್ಲಿ ಮಾಜಿ ಸಿಎಂ ಎಚ್‌ಡಿಕೆ ಮತ ಚಲಾಯಿಸಿದರು. ಮತಗಟ್ಟೆ ಸಂಖ್ಯೆ 168ರಲ್ಲಿ ಮತ ಹಾಕಲು ಬಂದ ಮಾಜಿ ಸಿಎಂಗೆ ನಗರಸಭಾ ಸದಸ್ಯರು ಸಾಥ್ ನೀಡಿದರು.
ಮತದಾನದ ಬಳಿಕ ಮಾತನಾಡಿದ ಮಾಜಿ ಸಿಎಂ ಎಚ್‌ಡಿಕೆ, "ತಮ್ಮ ಪಕ್ಷ ಸ್ಪರ್ಧಿಸಿರುವ ಆರು ಕ್ಷೇತ್ರದ ಎಂಎಲ್‌ಸಿ ಚುನಾವಣೆಯು ಜೆಡಿಎಸ್ ಪಕ್ಷದ ಬುನಾದಿಗೆ ಕಾರಣವಾಗಲಿದ್ದು, 2023ಕ್ಕೆ ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ," ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ಪಕ್ಷದ ನಾಯಕರ ಆರೋಪದ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಎಚ್‌ಡಿಕೆ, "ಸಾರ್ವತ್ರಿಕ ಚುನಾವಣೆಗೆ ಇನ್ನು ಒಂದು ವರ್ಷವಿದ್ದು, ಆಗ ಯಾರು ಹತಾಶರಾಗಿದ್ದಾರೆಂದು ತಿಳಿಯಲಿದೆ. ಅಲ್ಲದೇ ಯಡಿಯೂರಪ್ಪನವರು ತಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಲು ವೈಯಕ್ತಿಕವಾಗಿ ಮನವಿ ಮಾಡಿದ್ದರು. ಅದು ಅವರ ದೊಡ್ಡತನ ತೋರಿಸುತ್ತದೆ. ಆದರೆ ಕಾಂಗ್ರೆಸ್ ನಾಯಕರು ದುರಹಂಕಾರದಿಂದ ಮೆರೆಯುತ್ತಿದ್ದಾರೆ. ಸ್ಥಳೀಯ ಚುನಾವಣೆಯಲ್ಲಿ ನಮ್ಮವರು ಕೆಲವು ಕಡೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಕನಿಷ್ಟ ಸೌಜನ್ಯವೂ ಕಾಂಗ್ರೆಸ್‌ನವರಿಗೆ ಇಲ್ಲ. ನಮ್ಮ ಸಹಾಯವನ್ನು ನೆನಸಿಕೊಳ್ಳುವ ಔದಾರ್ಯವೂ ಇಲ್ಲವೆಂದು," ಕಿಡಿಕಾರಿದರು.
ಅಲ್ಲದೇ ಮುಂದಿನ ಬೆಳವಣಿಗೆಯನ್ನು ಈಗಲೇ ಯಾರೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲವೆಂದ ಮಾಜಿ ಸಿಎಂ ಕುಮಾರಸ್ವಾಮಿ, ಪರಿಷತ್ ಚುನಾವಣೆಯಲ್ಲಿ 6ಕ್ಕೆ 6 ಕಡೆಯೂ ಗೆಲ್ಲುತ್ತೇವೆ. ನಾವು ಈ ಚುನಾವಣೆಯ ನಂತರ ರೀಬೌನ್ಸ್ ಆಗುತ್ತೇವೆ ಎಂದರು.
"ಆರೂ ಕ್ಷೇತ್ರಗಳಲ್ಲಿ ನಾವು ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದು, ಕೆಲ ಕ್ಷೇತ್ರಗಳಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರವಹಿಸುತ್ತದೆ. ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ಇದ್ದು ನಮ್ಮ ಅಭ್ಯರ್ಥಿ ರಮೇಶ್‌ಗೌಡ ಗೆಲ್ಲುವ ವಿಶ್ವಾವಿದೆ," ಎಂದು ಹೇಳಿದರು.

"ಅಲ್ಲದೇ ಕಾಂಗ್ರೆಸ್ ಪಕ್ಷದ ನಾಯಕದು ಜೆಡಿಎಸ್ ಪಕ್ಷವನ್ನು ಲಘುವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಜೆಡಿಎಸ್ ಶಕ್ತಿ ಅವರಿಗೆ ಗೊತ್ತಾಗಲಿದೆ. ಇನ್ನು ನಾನಾಗಲಿ, ದೇವೇಗೌಡರಾಗಲಿ ಅರ್ಜಿ ಹಾಕಿಕೊಂಡು ಕಾಂಗ್ರೆಸ್‌ನ ಮನೆ ಬಾಗಿಲಿಗೆ ಹೋಗಿರಲಿಲ್ಲ. ಬೆಂಬಲ ನೀಡುವಂತೆ ನಾಟಕವಾಡುವ ಕಾಂಗ್ರೆಸ್ ನಾಯಕರು ಹಿಂದಿನಿಂದ ಕತ್ತು ಕೂಯ್ಯುವ ಸಂಸ್ಕೃತಿ ಅವರದ್ದಾಗಿದೆ," ಎಂದು ಮಾಜಿ ಸಿಎಂ ಎಚ್‌ಡಿಕೆ ಕಾಂಗ್ರೆಸ್ ಧೋರಣೆ ಬಗ್ಗೆ ಹರಿಹಾಯ್ದರು.
ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಮುಖಂಡರನ್ನು ಸೆಳೆಯುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, "ಜೆಡಿಎಸ್ ಪಕ್ಷ ನಾಯಕರನ್ನು ಬೆಳೆಸುವ ಫ್ಯಾಕ್ಟರಿ ಇದ್ದಂತೆ ಸಾಕಷ್ಟು ಜನ ಈ ಹಿಂದೆಯೇ ಪಕ್ಷವನ್ನು ತ್ಯಜಿಸಿದ್ದಾರೆ. ಅಲ್ಲದೇ ಜೆಡಿಎಸ್‌ನಲ್ಲಿ ಬೆಳೆದವರು ಕಾಂಗ್ರೆಸ್‌ಗೆ ಹೋಗಿದ್ದಾರೆ. ಕೆಲವು ಮುಖಂಡರನ್ನು ಬಹಳ ದಿನದ ಹಿಂದೆಯೇ ಹೈಜಾಕ್ ಮಾಡಿದ್ದು, ಇಂತಹದಕ್ಕೆಲ್ಲ ನಾನು ಆತಂಕಕ್ಕೆ ಒಳಗಾಗಲ್ಲ. ರಾಮನಗರ ಜಿಲ್ಲೆಯಾದ್ಯಂತ ನಿಷ್ಠಾವಂತ ಕಾರ್ಯಕರ್ತರು ಜೆಡಿಎಸ್‌ನಲ್ಲಿ ಇದ್ದಾರೆ".
ಜೆಡಿಎಸ್ ಪಕ್ಷದ ಕಥೆ ಮುಗಿದ ಅಧ್ಯಾಯವೆಂದು ಜಿಲ್ಲೆಯಲ್ಲಿ ಕೆಲ ಕೈ ನಾಯಕರು ಮಾತನಾಡುತ್ತಿದ್ದು, ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಬಲ ತಿಳಿಯಲಿದೆ. ಇಲ್ಲಿ ಜೆಡಿಎಸ್ ತೊಳಿತಾರೋ, ಇಲ್ಲ ಕನಕಪುರವೂ ಸೇರಿದಂತೆ ಕಾಂಗ್ರೆಸ್ ಅನ್ನು ತೊಳಿತಾರೋ ಜಿಲ್ಲೆಯ ಜನರು ನಿರ್ಧಾರ ಮಾಡುತ್ತಾರೆ ಎಂದು ರಾಮನಗರ ಜಿಲ್ಲೆಯ ಕೈ ನಾಯಕರಿಗೆ ಮಾಜಿ ಸಿಎಂ ಟಾಂಗ್ ನೀಡಿದರು.

ಶಾಸಕಿ ಅನಿತಾ ಕುಮಾರಸ್ವಾಮಿ ಮತದಾನ
ರಾಮನಗರ ನಗರಸಭೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ ಸಂಖ್ಯೆ 189ರಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಮತದಾನ ಮಾಡಿದರು. ಅನಿತಾ ಕುಮಾರಸ್ವಾಮಿಯವರಿಗೆ ರಾಮನಗರ ನಗರಸಭಾ ಸದಸ್ಯರು ಸಾಥ್ ನೀಡಿದರು. ಶಾಸಕರ ಜೊತೆಗೆ ಆಗಮಿಸಿದ ನಗರಸಭಾ ಸದಸ್ಯರು ಸಹ ಮತದಾನ ಮಾಡಿದರು.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅನಿತಾ ಕುಮಾರಸ್ವಾಮಿ, ಈ ಹಿಂದೆ ಎಂಎಲ್‌ಸಿ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಈ ಬಾರಿ ಎಲ್ಲ ಪಕ್ಷದವರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದರು. ಇನ್ನು ನಮ್ಮ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲುವ ನಂಬಿಕೆ ನನಗಿದೆ. ಅಲ್ಲದೇ ಕಾಂಗ್ರೆಸ್‌ನವರ ಆಸೆ- ಆಮಿಷಗಳಿಗೆ ನಮ್ಮವರು ಬಲಿಯಾಗಲ್ಲ. ಅವರನ್ನು ಸೆಳೆಯುವುದು ಸುಲಭದ ಮಾತಲ್ಲ.
ಜೆಡಿಎಸ್ ಪಕ್ಷವನ್ನು ರಾಮನಗರ ಜಿಲ್ಲೆಯಲ್ಲಿ ಕಟ್ಟಿ ಬೆಳೆಸಿದ್ದಾರೆ. ಚುನಾಯಿತ ಪ್ರತಿನಿಧಿಗಳಿಗೆ ಮಾತ್ರವಲ್ಲ, ಈ ಜಿಲ್ಲೆಯ ಜನರಿಗೆ ಕುಮಾರಸ್ವಾಮಿ ಮನೆಮಗನಿದ್ದಂತೆ. ಈ ಜಿಲ್ಲೆಯ ಜನ ಮನೆ ಮಗನನ್ನು ನಮ್ಮ ಜನರು ಬಿಟ್ಟುಕೊಡಲ್ಲ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.












Click it and Unblock the Notifications