ಜೈಲಲ್ಲಿದ್ದರೂ ದರ್ಶನ್‌ನ ಮರೆಯದ ಕಿಚ್ಚ ಸುದೀಪ್‌: ಸಿನಿಮಾ ಪೋಸ್ಟರ್‌ನಲ್ಲಿ ಗೆಳೆಯನಿಗೆ ತನ್ನ ಪಕ್ಕದಲ್ಲೇ ಸ್ಥಾನ

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ಅವರ ಚೊಚ್ಚಲ ಸಿನಿಮಾ 'ಮ್ಯಾಂಗೋ ಪಚ್ಚ' ಚಿತ್ರದ ಪೋಸ್ಟರ್ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಪೋಸ್ಟರ್‌ನಲ್ಲಿ ಕನ್ನಡ ಚಿತ್ರರಂಗದ ದಿಗ್ಗಜ ನಟರ ಫೋಟೋಗಳ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫೋಟೋ ಇರುವುದು ಮತ್ತು ಅವರ ಪಕ್ಕದಲ್ಲೇ ಕಿಚ್ಚ ಸುದೀಪ್ ಇರುವುದು ಸಿನಿರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಈ ಕುರಿತು ಸ್ವತಃ ಕಿಚ್ಚ ಸುದೀಪ್ ಅವರೇ ಆ ಪೋಸ್ಟರ್‌ನ ಹಿಂದಿನ ಸೀಕ್ರೇಟ್‌ ಬಿಚ್ಚಿಟ್ಟಿದ್ದಾರೆ.

ಸಂಚಿತ್ ಸಂಜೀವ್ ನಾಯಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಚೊಚ್ಚಲ ಚಿತ್ರ 'ಮ್ಯಾಂಗೋ ಪಚ್ಚ'. ಈ ಸಿನಿಮಾದ ಪ್ರಚಾರದ ಭಾಗವಾಗಿ ಬಿಡುಗಡೆಯಾದ ವಿಶೇಷ ಪೋಸ್ಟರ್‌ನಲ್ಲಿ ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸಿದ ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಶ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಇಂದಿನ ತಲೆಮಾರಿನ ಸ್ಟಾರ್ ನಟರಾದ ಯಶ್ ಹಾಗೂ ದರ್ಶನ್ ಅವರ ಫೋಟೋಗಳನ್ನು ಹಾಕಲಾಗಿತ್ತು. ಎಲ್ಲರ ಆಶೀರ್ವಾದದೊಂದಿಗೆ ಸಿನಿಮಾ ರಿಲೀಸ್ ಮಾಡಲಾಗಿರುವ ಈ ಪೋಸ್ಟರ್ ವೈರಲ್ ಆಗುತ್ತಿದ್ದಂತೆ, ದರ್ಶನ್ ಫೋಟೋ ಬಳಸಿದ್ದರ ಹಿಂದಿನ ಕಾರಣದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ಇದೀಗ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ ಸುದೀಪ್, "ಆ ಪೋಸ್ಟರ್ ನಾನೇ ಮಾಡಿಸಿದ್ದು, ಅದು ಸಂಪೂರ್ಣವಾಗಿ ನನ್ನದೇ ಐಡಿಯಾ" ಎಂದಿದ್ದಾರೆ.

Kichcha Sudeep

ಹುಚ್ಚ ಕಟೌಟ್‌ಗೆ ಹಾರ ಹಾಕಿರಲಿಲ್ಲ

ಈ ವಿಭಿನ್ನ ಪೋಸ್ಟರ್ ವಿನ್ಯಾಸದ ಹಿಂದಿರುವ ಕಾರಣವನ್ನು ಬಿಚ್ಚಿಟ್ಟ ಸುದೀಪ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು. "ನನ್ನ 'ಹುಚ್ಚ' ಸಿನಿಮಾ ರಿಲೀಸ್ ಆದಾಗ ಚಿತ್ರಮಂದಿರಗಳ ಮುಂದೆ ಕಟೌಟ್ ನಿಲ್ಲಿಸುವುದು ದೊಡ್ಡ ಪದ್ಧತಿಯಾಗಿತ್ತು. ಆಗ ನನ್ನದೂ ಒಂದು ಕಟೌಟ್ ನಿಲ್ಲಿಸಲಾಗಿತ್ತು. ಆದರೆ ದುರದೃಷ್ಟವಶಾತ್, ಮೊದಲನೇ ವಾರ ಆ ಕಟೌಟ್‌ಗೆ ಒಂದು ಸಣ್ಣ ಹಾರ ಕೂಡ ಬಿದ್ದಿರಲಿಲ್ಲ. ಏಕೆಂದರೆ ಆಗ ನಾನು ಚಿತ್ರರಂಗದಲ್ಲಿ ಏನೂ ಆಗಿರಲಿಲ್ಲ, ನನಗಾಗಿ ಅಭಿಮಾನಿ ಬಳಗ ಇನ್ನೂ ಸೃಷ್ಟಿಯಾಗಿರಲಿಲ್ಲ" ಎಂದು ನೆನೆದಿದ್ದಾರೆ.

ಮುಂದುವರಿದು ಮಾತನಾಡಿದ ಅವರು, "ಇದೇ ಕಾರಣಕ್ಕೆ ನಾನು ಸಂಚಿತ್‌ಗೆ ಒಂದು ಕಿವಿಮಾತು ಹೇಳಿದೆ. ಈಗಲೇ ಕಟೌಟ್ ನಿಲ್ಲಿಸಿದರೆ ಅದನ್ನು ಖಾಲಿ ಬಿಡಲು ಆಗುವುದಿಲ್ಲ. ನಾವೇ ಹಾರ ಹಾಕಿಸಿದರೆ ಯಾರು ಹಾಕಿಸಿದ್ದು ಅನ್ನೋ ಪ್ರಶ್ನೆ ಬರುತ್ತದೆ. ಒಂದೇ ಒಂದು ಹಾರ ಹಾಕಿದರೆ ಅದು ನೋಡಲು ಅವಮಾನದಂತೆ ಕಾಣುತ್ತದೆ. ಕಟೌಟ್ ತುಂಬಾ ಹಾರಗಳಿದ್ದರೆ ನಾವೇ ಹಾಕಿಸಿದ್ದು ಅಂತ ಜನರಿಗೆ ಗೊತ್ತಾಗಿಬಿಡುತ್ತದೆ. ಹಾಗಾಗಿ, ಕಟೌಟ್ ಮತ್ತು ಹಾರ ಅನ್ನೋದು ನಿನಗಾಗಿ ಹುಟ್ಟಿಕೊಳ್ಳುವ ನಿಜವಾದ ಅಭಿಮಾನಿಗಳು ಕಟ್ಟಬೇಕು. ಅಲ್ಲಿಯವರೆಗೆ ಕಾಯಬೇಕು. ಸದ್ಯಕ್ಕೆ ಚಿತ್ರರಂಗದ ಹಿರಿಯರ ಮತ್ತು ಇಂದಿನ ಸ್ಟಾರ್‌ಗಳ ಆಶೀರ್ವಾದದೊಂದಿಗೆ ಮುನ್ನಡೆಯುವುದು ಸೂಕ್ತ ಎಂದು ಸಂಚಿತ್‌ಗೆ ತಿಳಿಸಿದೆ" ಎಂದಿದ್ದಾರೆ.

ನೆಪೋಟಿಸಂ ಬಗ್ಗೆ ರಾಜ್‌ಕುಮಾರ್‌ ಮಕ್ಕಳಿಗೂ ಪ್ರಶ್ನೆ ಕೇಳಿ, ಅದು ದೊಡ್ಮನೆಯಿಂದಲೇ ಶುರುವಾಯ್ತಲ್ಲ? ಗರಂ ಆದ ಕಿಚ್ಚ ಸುದೀಪ್‌
ನೆಪೋಟಿಸಂ ಬಗ್ಗೆ ರಾಜ್‌ಕುಮಾರ್‌ ಮಕ್ಕಳಿಗೂ ಪ್ರಶ್ನೆ ಕೇಳಿ, ಅದು ದೊಡ್ಮನೆಯಿಂದಲೇ ಶುರುವಾಯ್ತಲ್ಲ? ಗರಂ ಆದ ಕಿಚ್ಚ ಸುದೀಪ್‌

ಚಿತ್ರರಂಗ ಕಟ್ಟಿ ಬೆಳೆಸಿದವರ ಆಶೀರ್ವಾದ ಮುಖ್ಯ

ಕನ್ನಡ ಚಿತ್ರರಂಗವನ್ನು ಇಂದಿನ ಎತ್ತರಕ್ಕೆ ತಂದು ನಿಲ್ಲಿಸಿರುವ ಪ್ರತಿಯೊಬ್ಬ ನಟನ ಕೊಡುಗೆಯೂ ದೊಡ್ಡದಿದೆ. ಹಾಗಾಗಿ ಎಲ್ಲರ ಆಶೀರ್ವಾದವನ್ನು ಪಡೆಯುವುದು ಸೂಕ್ತ ಎಂದು ಭಾವಿಸಿ ಈ ನಿರ್ಧಾರಕ್ಕೆ ಬಂದಿದ್ದಾಗಿ ಸುದೀಪ್ ತಿಳಿಸಿದ್ದಾರೆ. "ನನ್ನ ಈ ಯೋಚನೆಯನ್ನು ಚಿತ್ರತಂಡಕ್ಕೂ ತಿಳಿಸಿದೆ. ಅವರು ಯಾವುದೇ ಮರುಮಾತಲ್ಲದೆ ಒಪ್ಪಿಕೊಂಡರು. ಆ ಪೋಸ್ಟರ್ ಮೂಡಿಬಂದ ಮೇಲೆ ನನಗೂ ತುಂಬಾ ತೃಪ್ತಿ ತಂದಿದೆ. ಪೋಸ್ಟರ್ ನಿಜಕ್ಕೂ ಅತ್ಯಂತ ಸುಂದರವಾಗಿ ಮೂಡಿಬಂದಿದೆ" ಎಂದಿದ್ದಾರೆ.

'ಸ್ಟಾರ್ ವಾರ್' ಬಗ್ಗೆ ಸುದೀಪ್ ಖಡಕ್ ಮರುಪ್ರಶ್ನೆ

ಇದೇ ವೇಳೆ ಚಿತ್ರರಂಗದಲ್ಲಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಸದಾ ಚರ್ಚೆಯಾಗುವ 'ಸ್ಟಾರ್ ವಾರ್' ಬಗ್ಗೆಯೂ ಕಿಚ್ಚ ಸುದೀಪ್ ಮಾಧ್ಯಮಗಳಿಗೆ ನೇರವಾಗಿಯೇ ಮರುಪ್ರಶ್ನೆ ಹಾಕಿದರು. "ಇಲ್ಲಿ ಎಲ್ಲರೂ ಒಂದೇ ಚಿತ್ರರಂಗದವರು. ನೀವೆಲ್ಲಾ ಸದಾ ಸ್ಟಾರ್ ವಾರ್ ಸ್ಟಾರ್ ವಾರ್ ಅಂತೀರಲ್ಲ? ಆ ಸ್ಟಾರ್ ವಾರ್ ಅನ್ನು ಹೇಗೆ ಇಲ್ಲದಂತೆ ಮಾಡೋದು ಅಂತ ನೀವೇ ಹೇಳಿ? ಆ ರೀತಿ ಸಲಹೆ ಇದ್ರೆ ಖಂಡಿತವಾಗಿ ಮಾಡೋಣ" ಎಂದು ಹೇಳುವ ಮೂಲಕ ಚಿತ್ರರಂಗದಲ್ಲಿ ನಾವೆಲ್ಲರೂ ಒಂದೇ ಎಂಬ ಸಾಮರಸ್ಯದ ಸಂದೇಶವನ್ನು ಸಾರಿದ್ದಾರೆ. ಸುದೀಪ್ ಅವರ ಈ ವಿಡಿಯೋ ವೈರಲ್‌ ಆಗಿದೆ.

ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನ 'ಕುಚಿಕು ಗೆಳೆಯರು' ಎಂದೇ ಗುರುತಿಸಿಕೊಂಡಿದ್ದ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಳೆದ ಕೆಲವು ವರ್ಷಗಳ ಹಿಂದೆ ಕಾರಣಾಂತರಗಳಿಂದ ಪರಸ್ಪರ ದೂರವಾಗಿದ್ದರು. ಇಬ್ಬರ ನಡುವಿನ ಮುನಿಸು ಅಭಿಮಾನಿಗಳ ವಲಯದಲ್ಲೂ ದೊಡ್ಡ ತಲ್ಲಣ ಸೃಷ್ಟಿಸಿತ್ತು. ಇದೀಗ ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಅವರ ಇಡೀ ಸಿನಿಮಾ ವೃತ್ತಿಜೀವನ ಸಂಕಷ್ಟದಲ್ಲಿದೆ. ಚಿತ್ರರಂಗದ ಹಲವರು ದರ್ಶನ್ ಅವರಿಂದ ಅಂತರ ಕಾಯ್ದುಕೊಳ್ಳುತ್ತಿರುವ ಈ ಕಠಿಣ ಸಮಯದಲ್ಲಿ, ಕಿಚ್ಚ ಸುದೀಪ್ ತಮ್ಮ ಸೋದರಳಿಯನ ಚೊಚ್ಚಲ ಚಿತ್ರದ ಪೋಸ್ಟರ್‌ನಲ್ಲಿ ದರ್ಶನ್ ಫೋಟೋ ಬಳಸಿರುವುದು ಗಮನ ಸೆಳೆದಿದೆ. ಹಳೆಯ ಕಹಿ ನೆನಪುಗಳನ್ನು ಮರೆತು, ಕಷ್ಟದ ಕಾಲದಲ್ಲೂ ದರ್ಶನ್ ಫೋಟೋಗೆ ಗೌರವಯುತ ಸ್ಥಾನ ನೀಡಿರುವ ಸುದೀಪ್ ಅವರ ನಡೆ ಇಬ್ಬರ ಅಭಿಮಾನಿಗಳ ಹೃದಯ ಗೆದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+