ಇಡೀ ದೇಶವೇ ನಿನ್ನ ಜೊತೆಗಿದೆ, ಗೆದ್ದು ಬಾರೋ ನನ್ನ ಬಂಗಾರ ಎಂದು ಕಣ್ಣೀರಿಟ್ಟ ವೈಭವ್ ಅಜ್ಜಿ

Vaibhav Sooryavanshi: ಐಪಿಎಲ್‌ 2026ರಲ್ಲಿ ಆಕ್ರಮಣಕಾರಿ ಆಡವಾಡಿ ಕ್ರಿಕೆಟ್‌ ದಿಗ್ಗಜರ ಗಮನ ಸೆಳೆದಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಭಾರತ ರಾಷ್ಟ್ರೀಯ ಟಿ20 ತಂಡಕ್ಕೆ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸ ಹಾಗೂ ಏಷ್ಯನ್ ಗೇಮ್ಸ್‌ಗಾಗಿ ಪ್ರಕಟಿಸಲಾದ ಭಾರತ ತಂಡದಲ್ಲಿ ಈ ಯುವ ಎಡಗೈ ಬ್ಯಾಟರ್‌ಗೆ ಸ್ಥಾನ ಸಿಕ್ಕಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಬಿಹಾರದಲ್ಲಿರುವ ವೈಭವ್ ಅವರ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಜೊತೆಗೆ ಮನೆ ಮಗನಿಗೆ ವಿಶೇಷ ಸಂದೇಶವನ್ನು ಸಹ ರವಾನಿಸಿದ್ದಾರೆ.

ವೈಭವ್ ಭಾರತ ತಂಡಕ್ಕೆ ಆಯ್ಕೆಯಾದ ಸುದ್ದಿ ಹೊರಬೀಳುತ್ತಿದ್ದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರ ಅಜ್ಜಿ ಭಾವುಕರಾದರು. ಆನಂದಬಾಷ್ಪದ ಕಣ್ಣೀರಿಡುತ್ತಾ ಮಾತನಾಡಿದ ಅವರು, 'ನನಗೆ ಆಗುತ್ತಿರುವ ಸಂತೋಷವನ್ನು ಮಾತುಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಕೇವಲ ನನಗಷ್ಟೇ ಅಲ್ಲ, ಇಡೀ ದೇಶದ ಜನತೆಗೆ ಇಂದು ಹೆಮ್ಮೆಯ ದಿನವಾಗಿದೆ. ನನ್ನ ಮೊಮ್ಮಗ ಪಟ್ಟ ಕಠಿಣ ಪರಿಶ್ರಮಕ್ಕೆ ಇಂದು ತಕ್ಕ ಪ್ರತಿಫಲ ಸಿಕ್ಕಿದೆ. ಅವನು ತನ್ನ ಸ್ವಂತ ಶ್ರಮದಿಂದ ಈ ಮಟ್ಟಕ್ಕೆ ಬೆಳೆದಿದ್ದಾನೆ. ಅವನ ಈ ಸಾಧನೆ ಇಡೀ ದೇಶ ಮೆಚ್ಚುವಂತದ್ದು,' ಎಂದು ಅತ್ಯಂತ ಹೆಮ್ಮೆಯಿಂದ ಹೇಳಿಕೊಂಡರು.

Vaibhav Sooryavanshi Selected for India T20 Team Family Celebrates as 15-Year-Old Creates History

ವೈಭವ್ ಸೂರ್ಯವಂಶಿ ಪರ ನಿಂತ ಕುಟುಂಬ

ಈ ವೇಳೆ ನೆರೆಹೊರೆಯವರು ಮತ್ತು ಕುಟುಂಬದ ಇತರ ಸದಸ್ಯರು ಚಪ್ಪಾಳೆ ತಟ್ಟಿ, ಘೋಷಣೆಗಳನ್ನು ಕೂಗಿ ಸೂರ್ಯವಂಶಿ ಅವರ ಅಜ್ಜಿಯನ್ನು ತಬ್ಬಿಕೊಂಡು ಶುಭಾಶಯ ಕೋರಿದರು. ಮತ್ತೊಂದೆಡೆ ವೈಭವ್ ಅವರ ತಂದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಿರ್ಧಾರಕ್ಕೆ ಧನ್ಯವಾದ ತಿಳಿಸಿದ್ದಾರೆ. 'ಭಾರತ ತಂಡಕ್ಕೆ ವೈಭವ್ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಇಷ್ಟು ಸಣ್ಣ ವಯಸ್ಸಿನಲ್ಲೇ ಮಗನ ಪ್ರತಿಭೆಯನ್ನು ಗುರುತಿಸಿದ ಬಿಸಿಸಿಐ ಆಯ್ಕೆ ಸಮಿತಿಗೆ ಧನ್ಯವಾದಗಳು,' ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, 'ಕೇವಲ 15ನೇ ವಯಸ್ಸಿಯಲ್ಲೇ ಭಾರತೀಯ ಹಿರಿಯರ ಟಿ20 ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ನಮ್ಮ ಇಡೀ ಕುಟುಂಬ ಹಾಗೂ ರಾಜ್ಯ ಹೆಮ್ಮೆ ಪಡುವಂತಹ ವಿಷಯ. ಈ ಚಿಕ್ಕ ವಯಸ್ಸಿನಲ್ಲಿ ಇಷ್ಟು ದೊಡ್ಡ ಸಾಧನೆ ಮಾಡಿರುವುದು ಅವಿಸ್ಮರಣೀಯ. ವೈಭವ್ ಮುಂಬರುವ ದಿನಗಳಲ್ಲೂ ತನ್ನ ಅದ್ಭುತ ಆಟದ ಮೂಲಕ ದೇಶದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂಬುದೇ ನಮ್ಮ ಆಶೀರ್ವಾದ,' ಎಂದು ಅವರು ತಿಳಿಸಿದರು.

ವೈಭವ್‌ಗೆ ಅದೃಷ್ಟದ ದಾರಿ ತೋರಿಸಿದ ಐಪಿಎಲ್ 2026

ವೈಭವ್ ಸೂರ್ಯವಂಶಿ ಅವರಿಗೆ ಭಾರತ ತಂಡದ ಬಾಗಿಲು ಇಷ್ಟು ಬೇಗ ತೆರೆಯಲು ಪ್ರಮುಖ ಕಾರಣ ಐಪಿಎಲ್ 2026ರಲ್ಲಿ ಅವರು ನೀಡಿದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ. ರಾಜಸ್ಥಾನ್ ರಾಯಲ್ಸ್ ತಂಡದ ಪರ ಕಣಕ್ಕಿಳಿದಿದ್ದ ಈ ಯುವ ಆಟಗಾರ ಇಡೀ ಟೂರ್ನಿಯಲ್ಲಿ ಎದುರಾಳಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದರು. ಆಡಿದ ಪಂದ್ಯಗಳಲ್ಲಿ ಒಂದು ಭರ್ಜರಿ ಶತಕ ಹಾಗೂ ಐದು ಆಕರ್ಷಕ ಅರ್ಧಶತಕಗಳ ನೆರವಿನಿಂದ ಒಟ್ಟು 776 ರನ್ ಗಳಿಸಿ ಟೂರ್ನಿಯಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು.

ಆರ್‌ಆರ್ ಪರ ಮಿಂಚಿದ ವಂಡರ್ ಕಿಡ್‌

ಐಪಿಎಲ್ ಪ್ಲೇಆಫ್ ಹಂತದ ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬಹುತೇಕ ಏಕಾಂಗಿಯಾಗಿ ಮುನ್ನಡೆಸಿದ್ದ ವೈಭವ್ ಸೂರ್ಯವಂಶಿ, ಟೂರ್ನಿಯ 'ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್' ಮತ್ತು 'ಎಮರ್ಜಿಂಗ್ ಪ್ಲೇಯರ್' ಪ್ರಶಸ್ತಿಗಳನ್ನೂ ಕೂಡ ತಮ್ಮದಾಗಿಸಿಕೊಂಡರು. ಈ ಮೂಲಕ ಅವರು ಬರೀ ಭಾರತ ಅಷ್ಟೇ ಅಲ್ಲದೆ, ವಿಶ್ವಾದ್ಯಂತ ಕ್ರಿಕೆಟ್‌ ದಿಗ್ಗಜರು ಹಾಗೂ ಅಭಿಮಾನಿಗಳ ಪ್ರಶಂಸೆಗಳಿಗೆ ಪಾತ್ರರಾದರು.

ಪೋಷಕರ ಪ್ರವಾಸ ವೆಚ್ಚ ಭರಿಸಲಿರುವ ಬಿಸಿಸಿಐ

ವೈಭವ್ ಇನ್ನೂ ಬಾಲಕನಾಗಿರುವುದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಒತ್ತಡ ಹಾಗೂ ಸುದೀರ್ಘ ವಿದೇಶಿ ಪ್ರವಾಸಗಳ ಜೀವನಕ್ಕೆ ಹೊಂದಿಕೊಳ್ಳುವುದು ಸುಲಭವಲ್ಲ ಎಂಬುದನ್ನು ಬಿಸಿಸಿಐ ಮನಗಂಡಿದೆ. ಆದ್ದರಿಂದ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ವೇಳೆ ವೈಭವ್ ಅವರ ಪೋಷಕರು ಕೂಡ ಅವರೊಂದಿಗೆ ಪ್ರಯಾಣಿಸಲು ಬಿಸಿಸಿಐ ವಿಶೇಷ ಅನುಮತಿ ನೀಡಿದೆ. ಅಷ್ಟೇ ಅಲ್ಲದೆ ಅವರ ತಂದೆ-ತಾಯಿಯ ಸಂಪೂರ್ಣ ಪ್ರವಾಸ ಮತ್ತು ವಸತಿ ವೆಚ್ಚವನ್ನು ಕ್ರಿಕೆಟ್ ಮಂಡಳಿಯೇ ಭರಿಸಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.

ಸದ್ಯ ಭಾರತ 'ಎ' ತಂಡದೊಂದಿಗೆ ತ್ರಿಕೋನ ಸರಣಿಗಾಗಿ ಶ್ರೀಲಂಕಾದಲ್ಲಿರುವ ವೈಭವ್ ಸೂರ್ಯವಂಶಿ, ಮುಂಬರುವ ವಿದೇಶಿ ಪ್ರವಾಸಗಳಲ್ಲೂ ಭಾರತದ ಪರ ರನ್ ಮಳೆ ಹರಿಸಲು ಸಜ್ಜಾಗುತ್ತಿದ್ದಾರೆ. ಇವರ ಈ ಅಸಾಮಾನ್ಯ ಕ್ರಿಕೆಟ್ ಜರ್ನಿ ಭಾರತೀಯ ಕ್ರಿಕೆಟ್‌ನ ಭವಿಷ್ಯದ ಭರವಸೆಯ ಕಿರಣವಾಗಿದೆ. ಒಟ್ಟಿನಲ್ಲಿ ವೈಭವ್ ಇನ್ನೂ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲಿ ಎನ್ನುವುದೇ ಎಲ್ಲರ ಆಶಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+