ಚನ್ನಪಟ್ಟಣ: ಪುಂಡಾನೆ ಸೆರೆ ಕಾರ್ಯಾಚರಣೆಗೆ ಬಂದ್ವು 5 ಸಾಕಾನೆಗಳು
ರಾಮನಗರ, ಜೂನ್, 04: ವಿರುಪಸಂದ್ರ ಗ್ರಾಮದಲ್ಲಿ ಶನಿವಾರ ಮಾವಿನ ತೋಟದ ಕಾವಲುಗಾರನನ್ನು ಪುಂಡಾನೆ ತುಳಿದು ಸಾಯಿಸಿದ್ದು, ಈ ಹಿನ್ನೆಲೆ ಅರಣ್ಯ ಇಲಾಖೆ ಎರಡನೇ ಬಾರಿಗೆ ಪುಂಡಾನೆ ಸೆರೆಯಿಡಿಯಲು ಭಾನುವಾರ (ಜೂನ್ 04) ಐದು ಸಾಕನೆಗಳನ್ನು ಬಳಸಿಕೊಂಡು "ಆಪರೇಷನ್ ಪುಂಡಾನೆ ಸೆರೆ" ಕಾರ್ಯಚರಣೆ ಪ್ರಾರಂಭಿಸಿದೆ.
ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ವಿರುಪಸಂದ್ರ ಗ್ರಾಮದ ದೇವರಾಜು ಎಂಬುವವರಿಗೆ ಸೇರಿದ ಮಾವಿನತೋಟದ ಕಾವಲುಗಾರನಾಗಿ ಕೆಲಸ ಮಾಡುತಗತಿದ್ದ ಮುತ್ತರಾಯನಪುರ ಮೂಲದ ವೀರಭದ್ರಯ್ಯ ಎಂಬುವವರನ್ನು ಪುಂಡಾನೆ ದಾಳಿ ಮಾಡಿ ತುಳಿದು ಸಾಯಿಸಿತ್ತು. ಪುಂಡಾನೆ ದಾಳಿಗೆ ರೈತ ಬಲಿಯಾದ ಹಿನ್ನೆಲೆಯಲ್ಲಿ ರೈತರು ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಪುಂಡಾನೆ ಸೆರೆಗೆ ಮುಂದಾಗಿದೆ.

ಪುಂಡಾನೆ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲೇ ಹೆಚ್ಚು ಉಪಟಳ ನೀಡುತ್ತಿರುವ ಹಿನ್ನೆಲೆ ಮಾವುತರು ಹಾಗೂ ಕಾವಡಿ ಸೇರಿದಂತೆ ಐದು ಸಾಕನೆಗಳು ಇಂದು ವಿರುಪಸಂದ್ರ ಗ್ರಾಮದ ವ್ಯಾಪ್ತಿಯಲ್ಲಿ ಬಂದಿಳಿದಿವೆ. ಪುಂಡಾನೆ ಸೆರೆಗೆ ಕಾವೇರಿ ವನ್ಯಜೀವಿ ಧಾಮದಿಂದ ಆನೆ ಶಿಬಿರದಿಂದ ಭೀಮ, ಅರ್ಜುನ, ಮಹೇಂದ್ರ, ಶ್ರೀಕಂಠ, ಅಭಿಮನ್ಯು ಆನೆಗಳು ಪುಂಡಾನೆ ಸೆರೆ ಕಾರ್ಯಚರಣೆಗೆ ಬಂದಿವೆ.
ಪುಂಡಾನೆ ಸೆರೆಗೆ ಆಗಮಿಸಿದ ಐದು ಸಾಕನೆಗಳನ್ನು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬರಮಾಡಿಕೊಂಡುರು. ಕಳೆದ ರಾತ್ರಿಯಿಂದ ಪ್ರಯಾಣ ಮಾಡಿ ಬಂದಿರುವ ಐದು ಸಾಕನೆಗಳು ಹಾಗೂ ಸಿಬ್ಬಂದಿಗಳು ಇಂದು ವಿಶಾಂತ್ರಿ ಪಡೆಯಲಿವೆ. ಸೋಮವಾರ ಬೆಳಗ್ಗೆಯಿಂದ ಸಾಕಾನೆಗಳು ಪುಂಡಾನೆ ಸೆರೆ ಕಾರ್ಯಚರಣೆಗೆ ಇಳಿಯಲಿವೆ.
ಇಂದು ಶಿಬಿರದಲ್ಲೇ ಐದು ಸಾಕಾನೆ ಹಾಗೂ ಸಿಬ್ಬಂದಿಗಳಿಗೆ ಉಪಚಾರ ನಡೆಯಲಿದ್ದು, ನುರಿತ ಸಿಬ್ಬಂದಿಗಳು ತೆಂಗಿನಕಲ್ಲು ಅರಣ್ಯ ವ್ಯಾಪ್ತಿಯಲ್ಲಿ ಪುಂಡಾನೆ ಇರುವ ಸ್ಥಳ ಪತ್ತೆ ಹಚ್ಚಿ ಅದರ ಚಲನವಲನದ ಮೇಲೆ ನಿಗಾ ಇಡಲಿದ್ದಾರೆ. ಸೋಮವಾರ ಸಾಕಾನೆಗಳ ಸಹಾಯದಿಂದ ಪುಂಡನೆಗೆ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆಯಿಡಿಯಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಕಳೆದ ಬಾರಿ ಪುಂಡಾನೆ ಸೆರೆಗೆ ತಗುಲಿದ ವೆಚ್ಚ ಎಷ್ಟು?
ಕಳೆದ ವರ್ಷ ಆಗಸ್ಟ್ 13ರಂದು ಪುಂಡಾನೆ ಸೆರೆ ಕಾರ್ಯಚರಣೆಗೆ ದುಬಾರೆ ಆನೆ ಶಿಬಿರದಿಂದ ಪ್ರಶಾಂತ್, ಹರ್ಷ, ಲಕ್ಷ್ಮಣ ಹಾಗೂ ಮತ್ತಿಗೋಡು ಆನೆ ಶಿಬಿರದಿಂದ ಮಹಾರಾಷ್ಟ್ರ ಭೀಮ, ಗಣೇಶ ಎಂಬ ಐದು ಸಾಕಾನೆಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು , ಸಿಬ್ಬಂದಿಗಳು, ಮಾವುತರು ಸೇರಿದಂತೆ ಐವತ್ತಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆ ನಡೆಸಿ ಎರಡು ಪುಂಡಾನೆಗಳನ್ನು ಸೆರೆಯಿಡಲಾಗಿತ್ತು. ಆಗ ಕಾಡಾನೆಗಳ ಸೆರೆ ಕಾರ್ಯಾಚರಣೆಗೆ ಸುಮಾರು 25 ಲಕ್ಷ ರೂಪಾಯಿ ವೆಚ್ಚವಾಗಿತ್ತು.
ಕಳೆದ ಬಾರಿ ಸೆರೆಯಿಡಿದಿದ್ದ ಪುಂಡಾನೆ ಮತ್ತೆ ವಾಪಸ್ಸು
ಸೆರೆಯಿಡಿಯಲು ಮುಂದಾಗಿರುವ ಪುಂಡಾನೆಯನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ಬೇರೆ ಕಡೆಯ ಅರಣ್ಯಕ್ಕೆ ಬಿಡಲಾಗಿತ್ತು. ಆದರೆ ಅದೇ ಪುಂಡಾನೆ ಮತ್ತೆ ಮರಳಿ ಜಿಲ್ಲೆಗೆ ಬಂದಿದೆ. ರೆಡಿಯೋ ಕಾಲರ್ ಸಹಕಾರದಿಂದ ಇದು ಮಖ್ನಾ ಆನೆ ಎಂಬುದು ಈಗಾಗಲೇ ದೃಢಪಟ್ಟಿದೆ.
ಇನ್ನು ಕಾಡಾನೆಗಳನ್ನು ಸೆರೆಹಿಡಿದು ಬೇರೆ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬಿಡಲಾಗುತ್ತದೆ. ನಂತರ ಆನೆಗಳು ಮರಳಿ ತಮ್ಮ ಸ್ವಸ್ಥಾನಕ್ಕೆ ಮರಳಲು ಪ್ರಯತ್ನಿಸುವುದು ಸಾಮಾನ್ಯವಾಗಿರುತ್ತದೆ. ಆದರೆ, ಈ ಪ್ರಯತ್ನದಲ್ಲಿ ಎಲ್ಲ ಆನೆಗಳು ಸಫಲ ಆಗುವುದಿಲ್ಲ. ಮರಳುವ ಯತ್ನದಲ್ಲಿ ಕೆಲವು ಆನೆಗಳು ದಾರಿ ತಪ್ಪಿದರೆ, ಇನ್ನು ಕೆಲವು ಆನೆಗಳು ಸಾವನ್ನಪುತ್ತವೆ. ಆದರೆ ಚುರುಕು ಬುದ್ಧಿಯ ಆನೆಗಳು ಮಾತ್ರ ಎಷ್ಟೇ ಅಡೆತಡೆ ಎದುರಾದರೂ ತಮ್ಮ ಸ್ವಸ್ಥಾನಕ್ಕೆ ಮರಳುವಲ್ಲಿ ಯಶಸ್ವಿಯಾಗುತ್ತವೆ ಎಂದು ವನ್ಯಜೀವಿ ಪರಿಣತರು ಹೇಳಿದ್ದಾರೆ.












Click it and Unblock the Notifications