ಬಿಡದಿ ತೋಟದ ಮನೆಯಲ್ಲಿ ಬಾಡೂಟದ ಘಮಲು ಆರೋಪ: ಚುನಾವಣಾ ಅಧಿಕಾರಿಗಳ ದಾಳಿ
ರಾಮನಗರ, ಏಪ್ರಿಲ್ 10: ಯುಗಾದಿ ಹಬ್ಬದ ಹೊಸ್ತೊಡಕಿನ ಹೆಸರಲ್ಲಿ ಜೆಡಿಎಸ್ ಪಕ್ಷದ ನಾಯಕರು ಮತದಾರರಿಗೆ, ಕಾರ್ಯಕರ್ತರಿಗೆ ರಾಮನಗರದ ಬಿಡದಿಯಲ್ಲಿ ಬಾಡೂಟದ ವ್ಯವಸ್ಥೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಜೆಡಿಎಸ್ ಪಕ್ಷದ ಹೆಡ್ಡಾಫೀಸ್‌ನಂತಿರುವ ಬಿಡದಿ ತೋಟದ ಮನೆಯಿಂದ ಮದ್ಯ ಹಾಗೂ ಬಾಡೂಟದ ಘಮಲು ಹೊರಬರುತ್ತಿದೆಯಂತೆ? ಸೋಲಿನ ಭೀತಿಯಿಂದ ಹೊಸ್ತೊಡಕಿನ ಹೆಸರಲ್ಲಿ ಮತದಾರರಿಗೆ, ಕಾರ್ಯಕರ್ತರಿಗೆ ಬಾಡೂಟದ ವ್ಯವಸ್ಥೆ ಮಾಡಿರುವ ಕುರಿತು ಮಾಹಿತಿಗಳಿದ್ದರೂ ಚುನಾವಣಾ ಅಧಿಕಾರಿಗಳಿ ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೂತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.

ಸೋಲಿನ ಭಯದಲ್ಲಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮದ್ಯ, ಮಾಂಸದ ರುಚಿ ತೋರಿಸಿ ಮತ ಕೇಳಲು ಮುಂದಾಗಿವೆಯೇ? ರಾಮನಗರ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಬಾಡೂಟದ ಆಮಿಷವನ್ನು ತಡೆಯದೇ ವಾಮಮಾರ್ಗದ ಚುನಾವಣೆಗೆ ಬೆಂಬಲ ನೀಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ತೋಟದ ಮನೆ ಮೇಲೆ ಚುನಾವಣಾ ಅಧಿಕಾರಿಗಳ ದಾಳಿ
ಇತ್ತ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಬಾಡೂಟದ ವ್ಯವಸ್ಥೆ ಬಗ್ಗೆ ಆರೋಪ ಬಂದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಬಿಡದಿಯ ಕೇತಗಾನಹಳ್ಳಿ ತೋಟದ ಮನೆ ಪರಿಶೀಲನೆ ನಡೆಸಿದ್ದಾರೆ. ಸದ್ಯ ಊಟದ ವ್ಯವಸ್ಥೆ, ಖುರ್ಚಿ, ಪೆಂಡಾಲ್ ಪರಿಶೀಲನೆ ನಡೆಸಿದ್ದಾರೆ.
50ಕ್ಕೂ ಮಂದಿ ಸೇರಿದರೆ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆಗುತ್ತದೆ. ಕುಟುಂಬಸ್ಥರಿಗೆ ಊಟದ ವ್ಯವಸ್ಥೆ ಮಾಡಬಹುದು. ಆದರೆ ರಾಜಕೀಯ ನಾಯಕರು, ಮುಖಂಡರು ಬರುವ ಹಾಗಿಲ್ಲ. ಒಂದು ವೇಳೆ ರಾಜಕೀಯ ಮುಖಂಡರು ಬಂದರೆ ಎಲ್ಲವನ್ನೂ ಸೀಜ್ ಮಾಡಿ ಕೇಸ್ ಮಾಡುತ್ತೇವೆ. ಸದ್ಯ ಒಳಗೆ ಯಾವುದೇ ರಾಜಕೀಯ ಮುಖಂಡರು, ನಾಯಕರು ಇಲ್ಲ. ಒಂದು ಟೀಂ ಇಲ್ಲೇ ಇದ್ದು ಎಲ್ಲವನ್ನೂ ಪರಿಶೀಲನೆ ನಡೆಸಲಿದೆ. ನೀತಿ ಸಂಹಿತೆ ಉಲ್ಲಂಘನೆ ಆದರೆ ಕಾನೂನು ರೀತಿಯ ಕ್ರಮವಹಿಸುತ್ತೇವೆ. ಈಗಾಗಲೇ ಖುರ್ಚಿಗಳನ್ನು ತೆರವು ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ರಮೇಶ್ ಹೇಳಿದ್ದಾರೆ.












Click it and Unblock the Notifications