ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲುವಿಗೆ ಆ ಪಕ್ಷ ಸಪೋರ್ಟ್ ಮಾಡಿದೆ: ಡಿಕೆಶಿ ಅಚ್ಚರಿ ಹೇಳಿಕೆ
ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಭರ್ಜರಿ ಗೆಲುವು ಸಾಧಿಸಿದ್ದು, ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಇನ್ನು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲ್ಲಲು ಬಿಜೆಪಿಯವರೂ ಸಪೋರ್ಟ್ ಮಾಡಿದ್ದಾರೆ ಎಂದು ಹೇಳುವ ಮೂಲಕ ಚರ್ಚೆ ಹುಟ್ಟುಹಾಕಿದ್ದಾರೆ.
ಸಿ.ಪಿ.ಯೋಗೇಶ್ವರ್ ಗೆಲುವಿಗೆ ಜೆಡಿಎಸ್, ಬಿಜೆಪಿಯವರೂ ಬೆಂಬಲ ನೀಡಿದ್ದಾರೆ. ಈ ಹಿಂದೆ ಬಿಜೆಪಿ ಶಾಸಕರಾದ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಸಿ.ಪಿ.ಯೋಗೇಶ್ವರ್ ಗೆಲ್ತಾರೆಂದು ಗೊತ್ತಿತ್ತು ಎಂದು ಹೇಳಿದ್ದರು. ಅದರಂತೆ ಯೋಗೇಶ್ವರ್ ಗೆದ್ದಿದ್ದಾರೆ ಎಂದಿದ್ದಾರೆ.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ಗೆ ಕೇವಲ 16 ಸಾವಿರ ಮತಗಳು ಮಾತ್ರ ಇತ್ತು. ಈಗ ಅದೂ ಕೂಡ ಹೆಚ್ಚಾಗಿದೆ. ಬಿಜೆಪಿಯವರು ನಮ್ಮೊಂದಿಗೆ ನಿಲ್ಲದೇ ಇದ್ದಿದ್ದರೆ, ಅವರು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕೆಲಸ ಮಾಡದೆ ಇದ್ದಿದ್ದರೆ ಇಷ್ಟು ಪ್ರಮಾಣದ ಮತಗಳು ನಮಗೆ ಬರುತ್ತಿರಲಿಲ್ಲ. ಇದಕ್ಕಾಗಿ ಅವರಿಗೆಲ್ಲ ಅಭಿನಂದನೆಗಳು ಎಂದು ಹೇಳಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಜನ ನಮ್ಮ ಪರ ನಿಂತಿದ್ದಾರೆ. ಈ ಗೆಲುವಿನ ಕ್ರೆಡಿಟ್ ಅವರಿಗೆಲ್ಲರಿಗೂ ಸಲ್ಲಬೇಕು. ನಮ್ಮ ಕಾಂಗ್ರೆಸ್ ಪಕ್ಷದ ನಾಯಕರು, ಚನ್ನಪಟ್ಟಣ ಕ್ಷೇತ್ರದ ಮತದಾರರಿಗೂ ಸಲ್ಲಬೇಕಾಗಿದೆ. ಈ ಚುನಾವಣೆಯನ್ನು ಗೆಲ್ಲಲು ನಮಗೆ ಎಲ್ಲ ಪಕ್ಷದವರೂ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಈ ಹಿಂದೆ ಶಾಸಕರ ಸ್ಥಾನ ತೆರವಾದ ನಂತರ ಹಲವು ಬಾರಿ ಪ್ರವಾಸ ಮಾಡಿದ್ದೇವೆ. ಇಲ್ಲಿ ಜನರಿಗೆ ನೀಡಿರುವ ಭರವಸೆಗಳನ್ನು ಜಾರಿ ಮಾಡಬೇಕಾಗಿದೆ. ಹಾಗಾಗಿ ನೂತನ ಶಾಸಕರಾದ ನಮ್ಮ ಯೋಗೇಶ್ವರ್ ಅವರೊಂದಿಗೆ ಚರ್ಚೆ ಮಾಡಿ ಆ ಯೋಜನೆಗಳಿಗೆಲ್ಲ ಚಾಲನೆ ನೀಡುವ ಕೆಲಸ ಮಾಡಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯಭೇರಿ ಬಾರಿಸಿದ್ದು, ಗೆಲುವು ಸಾಧಿಸಿದ ಮೂವರಿಗೂ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಈ ಗೆಲುವು 2028ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಡಿ.ಕೆ.ಶಿವಕುಮಾರ್ ಅಭಿನಂದಿಸಿದ್ದಾರೆ.
ʼಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕುʼ
ಕನಕಾಂಬರಿ ಮಹಿಳಾ ಒಕ್ಕೂಟದ ವತಿಯಿಂದ ಇಂದು ಕನಕಪುರದ ಆರ್‍ಎಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಜಾಗೃತಿ ಮಹಾ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಪಾಲ್ಗೊಂಡರು. ಬಳಿಕ ಮಾತನಾಡಿ, ಹೆಣ್ಣು ಕುಟುಂಬದ ಕಣ್ಣು. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಈ ನಿಟ್ಟಿನಲ್ಲಿ ಕನಕಾಂಬರಿ ಮಹಿಳಾ ಒಕ್ಕೂಟ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಮಹಿಳೆಯರ ಆರ್ಥಿಕ ಪ್ರಗತಿಗಾಗಿ ಹಲವಾರು ವೃತ್ತಿಪರ ತರಬೇತಿಗಳನ್ನು ನೀಡುತ್ತಾ ಉದ್ಯೋಗ ಕಲ್ಪಿಸುತ್ತಿದೆ ಎಂದರು.
ಇದಲ್ಲದೆ ಒಕ್ಕೂಟದ ಸದಸ್ಯರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಮಹಿಳೆಯರ ಸಬಲೀಕರಣಕ್ಕಾಗಿ ನಮ್ಮ ಸರ್ಕಾರ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆ ಜಾರಿಗೆ ತಂದಿದೆ. ಈ ಮೂಲಕ ಅವರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಹೆಣ್ಣು ಮಕ್ಕಳು ಪ್ರಗತಿಯಾದರೆ ಒಂದು ಕುಟುಂಬ, ರಾಜ್ಯ, ಹಳ್ಳಿ ಪ್ರಗತಿಯಾದಂತೆ. ಹಾಗಾಗಿ ನಾವು ಹೆಣ್ಣು ಮಕ್ಕಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.












Click it and Unblock the Notifications