Channapatna By Election: ಸಿಪಿ ಯೋಗೇಶ್ವರ ಸ್ಪರ್ಧೆಗೆ ಅವರೊಬ್ಬರ ಒಪ್ಪಿಗೆ ಸಾಕು!
ರಾಮನಗರ, ಆಗಸ್ಟ್ 14: ಕರ್ನಾಟಕದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕುತೂಹಲ ಕೆರಳಿಸಿರುವುದು ಚನ್ನಪಟ್ಟಣ. ಈ ಉಪ ಚುನಾವಣೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ, ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಬಿಜೆಪಿ ನಾಯಕ ಸಿ. ಪಿ. ಯೋಗೇಶ್ವರ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ. ಆದರೆ ಕ್ಷೇತ್ರ ಬಿಜೆಪಿ ಅಥವ ಜೆಡಿಎಸ್ ಯಾರಿಗೆ? ಎನ್ನುವುದು ಇನ್ನೂ ನಿಗೂಢವಾಗಿದೆ.
ಎಂಎಲ್‌ಸಿ ಸಿ. ಪಿ. ಯೋಗೇಶ್ವರ ದೆಹಲಿಯಲ್ಲಿದ್ದರು. ವಿವಿಧ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಚನ್ನಪಟ್ಟಣದ ಉಪ ಚುನಾವಣೆ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ. ಆದರೆ ಹೈಕಮಾಂಡ್ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಆಗಸ್ಟ್ 18ರ ಬಳಿಕ ಮತ್ತೆ ಬನ್ನಿ ಎಂಬ ಸಂದೇಶವನ್ನು ನೀಡಿದೆ.

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮೂಲಕ ಚನ್ನಪಟ್ಟಣ ಉಪ ಚುನಾವಣೆ ಬಿಜೆಪಿ ಟಿಕೆಟ್‌ಗೆ ಯೋಗೇಶ್ವರ ಪ್ರಯತ್ನ ನಡೆಸಿದರು. ಆದರೆ ಕರ್ನಾಟಕದ ಬಿಜೆಪಿ ನಾಯಕರು, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅಭಿಪ್ರಾಯ ಪಡೆಯಬೇಕಾದ ಹೈಕಮಾಂಡ್ ಇನ್ನೂ ಯೋಗೇಶ್ವರ ಸ್ಪರ್ಧೆಗೆ ಹಸಿರು ನಿಶಾನೆ ತೋರಿಸಿಲ್ಲ.
ಕುಮಾರಸ್ವಾಮಿ ಒಪ್ಪಿಗೆ ಬಾಕಿ: ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ. ಪಿ. ಯೋಗೇಶ್ವರ, ಎಚ್. ಡಿ. ಕುಮಾರಸ್ವಾಮಿ ಸದಾ ರಾಜಕೀಯ ಎದುರಾಳಿಗಳು. ಆದರೆ ಈಗ ಬಿಜೆಪಿ-ಜೆಡಿಎಸ್ ಮೈತ್ರಿ ಇಬ್ಬರೂ ನಾಯಕರನ್ನು ಒಂದಾಗಿದೆ. ಆದರೆ ಕಾರ್ಯಕರ್ತರು, ಅಭಿಮಾನಿಗಳು ಯೋಗೇಶ್ವರ ಬೆಂಬಲಿಸಲು ತಯಾರಿಲ್ಲ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಎಚ್. ಡಿ. ಕುಮಾರಸ್ವಾಮಿ 96,592 ಮತಗಳನ್ನು ಪಡೆದು ಗೆದ್ದರು. ಬಿಜೆಪಿಯ ಸಿ. ಪಿ. ಯೋಗೇಶ್ವರ 80,677 ಮತ ಪಡೆದು ಸೋಲು ಕಂಡರು. 2024ರ ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಕಣಕ್ಕಿಳಿದು ಗೆದ್ದ ಕುಮಾರಸ್ವಾಮಿ ಚನ್ನಪಟ್ಟಣದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು, ಈಗ ಉಪ ಚುನಾವಣೆ ನಡೆಯಬೇಕಿದೆ.
ಚನ್ನಪಟ್ಟಣ ಎಚ್. ಡಿ. ಕುಮಾರಸ್ವಾಮಿ ತವರು ಕ್ಷೇತ್ರ. ಕ್ಷೇತ್ರದಿಂದ ಯಾರೇ ಅಭ್ಯರ್ಥಿಯಾಗಬೇಕಾದರೂ ಬಿಜೆಪಿ ನಾಯಕರು ಎಚ್. ಡಿ. ಕುಮಾರಸ್ವಾಮಿ ಒಪ್ಪಿಗೆ ಪಡೆಯಲಿದ್ದಾರೆ. ಆದ್ದರಿಂದ ಸಿ. ಪಿ. ಯೋಗೇಶ್ವರ ಸ್ಪರ್ಧೆಗೆ ಎಚ್. ಡಿ. ಕುಮಾರಸ್ವಾಮಿ ಒಪ್ಪಿಗೆ ನೀಡಬೇಕು. ಇಲ್ಲವಾದಲ್ಲಿ ಚನ್ನಪಟ್ಟಣದ ರಾಜಕೀಯ ಲೆಕ್ಕಾಚಾರವೇ ಬದಲಾಗಲಿದೆ.
ಪಕ್ಷದ ಹೊರತಾಗಿಯೂ ಚನ್ನಪಟ್ಟಣದಲ್ಲಿ ಸಿ. ಪಿ. ಯೋಗೇಶ್ವರ ಪ್ರಭಾವವಿದೆ. ಅವರು ಬಿಜೆಪಿ, ಕಾಂಗ್ರೆಸ್, ಸಮಾಜವಾದಿ ಪಕ್ಷದಿಂದ ಕ್ಷೇತ್ರದಲ್ಲಿ ಸೋಲು, ಗೆಲುವು ಕಂಡಿದ್ದಾರೆ. ಈಗಾಗಲೇ ಅವರು ಬಿಜೆಪಿ ಟಿಕೆಟ್ ಸಿಕ್ಕಿಲ್ಲ ಎಂದಾದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮಾತನಾಡಿದ್ದಾರೆ. ಅಲ್ಲದೇ ಬಿಜೆಪಿ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ಅವರನ್ನು ಪಕ್ಷಕ್ಕೆ ಸೆಳೆಯಬಹುದು ಎಂಬ ಮಾತು ಇದೆ.
ಎಚ್. ಡಿ. ಕುಮಾರಸ್ವಾಮಿ ತವರು ಕ್ಷೇತ್ರ ಚನ್ನಪಟ್ಟಣ. ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತವರು ಜಿಲ್ಲೆ ರಾಮನಗರ ಜಿಲ್ಲೆಯಲ್ಲಿದೆ. ಆದ್ದರಿಂದ ಉಪ ಚುನಾವಣೆ ಗೆಲುವು ಕುಮಾರಸ್ವಾಮಿಗೆ, ಡಿ. ಕೆ. ಶಿವಕುಮಾರ್‌ಗೆ ಪ್ರತಿಷ್ಠೆಯ ಪ್ರಶ್ನೆ. ಕಾಂಗ್ರೆಸ್ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಯಾಗಿ ಹುಡುಕಾಟ ನಡೆಸುತ್ತಿದೆ. ಒಂದು ವೇಳೆ ಬಿಜೆಪಿ ಯೋಗೇಶ್ವರಗೆ ಕೈ ಕೊಟ್ಟರೆ ಅದು ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂದು ಅಂದಾಜಿಸಲಾಗಿದೆ.
ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆಯೇ? ಎಂಬ ಚರ್ಚೆ ನಡೆಯುತ್ತಲೇ ಇದೆ. ಆದರೆ ಇದಕ್ಕೆ ಹಲವು ಬಾರಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಯಬೇಕು ಎಂಬುದು ಕುಮಾರಸ್ವಾಮಿ ಲೆಕ್ಕಾಚಾರವಾಗಿದೆ.
ಸಿ. ಪಿ. ಯೋಗೇಶ್ವರ ಹಾಲಿ ವಿಧಾನ ಪರಿಷತ್ ಸದಸ್ಯರು. ಚನ್ನಪಟ್ಟಣದ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಲು ಅವರು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಚುನಾವಣೆ ಗೆದ್ದರೆ ಬೇರೆ ಲೆಕ್ಕಾಚಾರ, ಒಂದು ವೇಳೆ ಸೋತರೆ ರಾಜಕೀಯ ಭವಿಷ್ಯ? ಎಂಬುದು ಚಿಂತೆ. ಯೋಗೇಶ್ವರ ಪರಿಷತ್ ಸದಸ್ಯತ್ವ 2026ರ ತನಕ ಇದೆ.












Click it and Unblock the Notifications