ಗೋಹತ್ಯೆ ನಿಷೇಧ ಕಾಯ್ದೆ; ಸರ್ಕಾರಕ್ಕೆ ಕುಮಾರಸ್ವಾಮಿ ಪ್ರಶ್ನೆಗಳು
ರಾಮನಗರ, ಡಿಸೆಂಬರ್ 10: ಕರ್ನಾಟಕ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ವಿರೋಧದ ನಡುವೆಯೇ ಗೋಹತ್ಯೆ ನಿಷೇಧ ಕಾಯ್ದೆ ಅಂಗೀಕಾರವಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಚಳಿಗಾಲದ ಅಧಿವೇಶನ ಮೊಟಕುಗೊಳಿಸಲಾಗುತ್ತಿದ್ದು, ಇಂದು ಅಧಿವೇಶನ ಮುಕ್ತಾಯವಾಗಲಿದೆ.
'ಕರ್ನಾಟಕ ಜಾನುವಾರು ವಧೆ ಪ್ರತಿಬಂಧಕ ಮತ್ತು ಸಂರಕ್ಷಣಾ ಮಸೂದೆ' ಪ್ರತಿಪಕ್ಷಗಳ ವಿರೋಧ, ಸಭಾಗತ್ಯಾಗದ ನಡುವೆ ಬುಧವಾರ ಅನುಮೋದನೆಯಾಗಿದೆ. ಈ ಕುರಿತು ರಾಜ್ಯದಲ್ಲಿ ಚರ್ಚೆಗಳು ಆರಂಭವಾಗಿವೆ. ಬಿಜೆಪಿ ನಾಯಕರು ಗೋ ಪೂಜೆ ಮಾಡುವ ಮೂಲಕ ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ, ಚನ್ನಪಟ್ಟಣ ಶಾಸಕ ಎಚ್. ಡಿ. ಕುಮಾರಸ್ವಾಮಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರವಾದ ಹಿನ್ನಲೆಯಲ್ಲಿ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. "ಜೆಡಿಎಸ್ ಒಂದು ಪಕ್ಷವಾಗಿ ಮಾತ್ರವಲ್ಲ, ರೈತ ಸಂಘವಾಗಿ, ರೈತ ಪ್ರತಿನಿಧಿಯಾಗಿ ಕೆಲಸ ಮಾಡಲಿಚ್ಚಿಸುತ್ತದೆ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಎಚ್. ಡಿ. ಕುಮಾರಸ್ವಾಮಿ "ನಾವೆಲ್ಲರೂ ಹಸುಗಳನ್ನು ಪೂಜಿಸುತ್ತೇವೆ. ಆದರೆ, ರೈತ ಮಾತ್ರ ಅದನ್ನು ಪೋಷಿಸುವ ಹೊಣೆ ಹೊತ್ತಿದ್ದಾನೆ ಮತ್ತು ಅದರ ಮೇಲೆಯೇ ಅವನ ಜೀವನ ನಿರ್ವಹಣೆಯೂ ಅವಲಂಬಿತವಾಗಿದೆ. ಗೋವಿನ ಪೋಷಣೆ ಎಂಬುದೇ ಆರ್ಥಿಕ ಹೊರೆಗೆ ಕಾರಣವಾದರೆ, ಆತನ ನೆರವಿಗೆ ನಿಲ್ಲುವವರು ಯಾರು? ಇದು ಸಾಮಾನ್ಯ ರೈತನಿಗೆ ಇರುವ ಪ್ರಶ್ನೆ. ಸರ್ಕಾರ ಇದಕ್ಕೆ ಪರಿಹಾರ ಹುಡುಕಬೇಕು" ಎಂದು ಒತ್ತಾಯಿಸಿದ್ದಾರೆ.

ಮತಬ್ಯಾಂಕ್‌ನದ್ದೇ ಆದ್ಯತೆ
* ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಕಾಂಗ್ರೆಸ್, ಬಿಜೆಪಿಗೆ ಮತಬ್ಯಾಂಕ್‌ನದ್ದೇ ಆದ್ಯತೆ. ಆದರೆ, ಹಾಲು ಉತ್ಪಾದನೆಯಲ್ಲಿ ತೊಡಗಿರುವ 24 ಲಕ್ಷ ರೈತ ಕುಟುಂಬಗಳಿಗೆ ಕಾಯ್ದೆ ವಿಚಾರವಾಗಿ ಇರುವ ಅನುಮಾನ, ಆತಂಕಗಳನ್ನು ಜೆಡಿಎಸ್ ನಿಷ್ಪಕ್ಷಪಾತವಾಗಿ ವಿಮರ್ಶಿಸಲು ಬಯಸುತ್ತದೆ. ಜೆಡಿಎಸ್ ಒಂದು ಪಕ್ಷವಾಗಿ ಮಾತ್ರವಲ್ಲ, ರೈತ ಸಂಘವಾಗಿ, ರೈತ ಪ್ರತಿನಿಧಿಯಾಗಿ ಕೆಲಸ ಮಾಡಲಿಚ್ಚಿಸುತ್ತದೆ.
* ಸರ್ಕಾರ ಗೋಹತ್ಯೆ ನಿಷೇಧಿಸುವ ಕಾಯ್ದೆಯನ್ನು ರೂಪಿಸಿದೆ. ಆದರೆ, ಗೋಹತ್ಯೆ ನಿಷೇಧದ ಜೊತೆಗೆ ಗೋಮಾತೆಯನ್ನು ರಕ್ಷಿಸುವ, ಗೋಮಾತೆಯನ್ನೇ ನಂಬಿದ ರೈತರನ್ನು ರಕ್ಷಿಸುವ ಕಾನೂನಾಗಿಯೂ ಇವತ್ತಿನ ಈ ಕಾಯ್ದೆ ವರ್ತಿಸಬೇಕು ಎಂಬುದು ರೈತರ ಪ್ರತಿನಿಧಿಯಾದ ಜೆಡಿಎಸ್‌ನ ಒತ್ತಾಯ. ಈ ವಿಚಾರವಾಗಿ ಯಾರದ್ದೂ ತಕರಾರು ಇಲ್ಲ ಎಂದು ನಾವು ಭಾವಿಸುತ್ತೇವೆ.

ರೈತರಿಗೆ ಹೊರೆಯಾಗುತ್ತದೆ
* ರೈತ ತಾನು ಪೂಜಿಸುವ, ಪೋಷಿಸುವ, ಜೀವನಾಧಾರವನ್ನಾಗಿ ನಂಬಿರುವ ಗೋವು ಈ ಕಾಯ್ದೆ ಮೂಲಕ ಆತನಿಗೆ ಹೇಗೆ ಹೊರೆಯಾಗುತ್ತದೆ? ತಾನು ಸಾಕಿದ ಹಸು ಗಂಡು ಕರು ಹಾಕಿದಾಗ, ಹಸುವಿಗೆ ವಯಸ್ಸಾದಾಗ, ಕಾಯಿಲೆ ಬಿದ್ದಾಗ ಅದರ ನಿರ್ವಹಣೆ ಕಷ್ಟ. ಈಗಾಗಲೇ ಸಂಕಷ್ಟದಲ್ಲಿರುವ ರೈತನಿಗೆ ಈ ಹೊರೆ ಜೀವನ್ಮರಣದ ಪ್ರಶ್ನೆಯಾಗಲೂಬಹುದು ಎಂಬುದನ್ನು ಸರ್ಕಾರ ಮರೆತಂತಿದೆ.
* ರೈತರು ಈಗ ಹಾಲು ಉತ್ಪಾದನೆಗಾಗಿ ಪೋಷಿಸುತ್ತಿರುವ ಹಸುಗಳ ಗಂಡು ಕರುಗಳನ್ನು ಸಾಕುವುದು ಆರ್ಥಿಕವಾಗಿ ಹೊರೆ. ಅದು ಬೆಳೆದರೂ ಕೃಷಿ ಕಾರ್ಯಗಳಿಗೆ ಬಳಕೆಗೆ ಯೋಗ್ಯವಲ್ಲ. ಹೀಗಾದಾಗ ಹೈನುಗಾರಿಕೆಗೆ ಹೊಡೆತ ಬೀಳುತ್ತದೆ. ಕ್ರಮೇಣ ರೈತರು ಹೈನುಗಾರಿಕೆಯಿಂದಲೇ ವಿಮುಖವಾಗಬಹುದು. ಅದು ಮತ್ತೊಂದು ಸಮಸ್ಯೆಗೆ ಕಾರಣವಾಗಬಹುದು ಎಂಬುದನ್ನು ಗಮನಿಸಲೇಬೇಕು.

ರೈತರು ಹೈನುಗಾರಿಕೆಯಿಂದ ದೂರ
* ಸದ್ಯ ಸರ್ಕಾರ ತಂದಿರುವ ಕಾಯ್ದೆಯು ರೈತರು ಗಂಡು ಕರುಗಳನ್ನು, ವಯಸ್ಸಾದ ರಾಸುಗಳನ್ನು, ರೋಗಕ್ಕೀಡಾದ ಹಸುಗಳನ್ನು ಪೋಷಿಸಲೇಬೇಕಾದ ಷರತ್ತಿಗೆ ದೂಡುತ್ತದೆ. ಪ್ರಾಯೋಗಿಕವಲ್ಲದ ಷರತ್ತುಗಳ ಮೂಲಕ ಸರ್ಕಾರ ರೈತರ ಮೇಲೆ ಹೆಚ್ಚಿನ ಒತ್ತಡ ಹೇರಲು ಪ್ರಯತ್ನಿಸಿದರೆ, ರೈತರು ಹೈನುಗಾರಿಕೆಯಿಂದ ದೂರ ಸರಿಯಬಹುದು. ಆಗ ಹಾಲು ಉತ್ಪಾದನೆಗೆ ಹೊಡೆತ ಬೀಳಲಿದೆ.
* ಜಾನುವಾರುಗಳನ್ನು ಸೂಕ್ತ ಪ್ರಾಧಿಕಾರದ ಪರವಾನಗಿ ಪಡೆದು ವಧೆ ಮಾಡಬಹುದು. ಇದಕ್ಕೆ ಪಶು ವೈದ್ಯಾಧಿಕಾರಿಯ ಪ್ರಮಾಣ ಪತ್ರ ಬೇಕು ಎಂದು ಹೇಳಲಾಗಿದೆ. ಚಿಕಿತ್ಸೆಗೇ ಈಗ ಪಶುವೈದ್ಯರ ಲಭ್ಯತೆ ಇಲ್ಲ. ಇನ್ನು ಪ್ರಮಾಣ ಪತ್ರಕ್ಕೆ ಲಭ್ಯರಾಗುವರೇ? ಪ್ರಮಾಣ ಪತ್ರ, ಅನುಮತಿ ಪಡೆಯುವ ಪ್ರಕ್ರಿಯೆ ದಂಧೆಯ ರೂಪ ತಾಳದೇ? ರೈತರ ಶೋಷಣೆ ನಡೆಯುವುದಿಲ್ಲವೇ?

ರೈತರಿಗೆ ಕಿರುಕುಳ ನೀಡುವ ಸಾಧ್ಯತೆ
* ಪೊಲೀಸರು, ಅಧಿಕಾರಿಗಳಿಗೆ ರೈತರ ಡೈರಿ ಪರಿಶೀಲನೆಯ ಅವಕಾಶ ನೀಡಲಾಗಿದೆ. ಇದರಿಂದ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುವ ಸಾಧ್ಯತೆಗಳು ಸೃಷ್ಟಿಯಾಗುವ ಆತಂಕವಿದೆ. ರೈತರಲ್ಲಿ ಭಯದ ವಾತಾವರಣವೂ ಮೂಡುತ್ತದೆ. ಈ ನಿಯಮವನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಇದು ಹಳ್ಳಿಗಳ ಸೌಹಾರ್ದ ವಾತಾವರಣವನ್ನೇ ಹಾಳುಮಾಡಬಹುದಲ್ಲವೇ?.
* ಜಾನುವಾರುಗಳನ್ನು ಸಾಗಿಸಲು ಪಶುಸಂಗೋಪನಾ ಇಲಾಖೆಯ ಅನುಮತಿ ಪಡೆಯಬೇಕು ಎಂದು ಹೇಳಲಾಗಿದೆ. ಇದು ಮುಂದೊಂದು ದಿನ ಲೈಸನ್ಸ್ ರಾಜ್ ಪದ್ಧತಿಗೆ ಕಾರಣವಾಗದೇ? ಅಧಿಕಾರಿಗಳು ಇದರಲ್ಲಿ ಭ್ರಷ್ಟಾಚಾರ ನಡೆಸದೇ ಇರಲಾರರು ಎಂದು ಹೇಳಲು ಸಾಧ್ಯವೇ? ಒಂದು ವೇಳೆ ಇಂಥ ಪರವಾನಗಿಗೆ ರೈತರಿಂದ ಲಂಚ ಪಡೆಯುವ ಪರಿಸ್ಥಿತಿ ಸೃಷ್ಟಿಯಾದರೆ ಅದು ರೈತರ ಶೋಷಣೆಯಾಗದೇ?.

ಹೈನುಗಾರಿಕೆಗೆ ಪೆಟ್ಟು
* ಜಾನುವಾರಿನ ವಧೆಯಾದ ಪ್ರಕರಣದಲ್ಲಿ ಮಾರಾಟ ಮಾಡಿದ ರೈತನನ್ನೂ ಹೊಣೆಗಾರನನ್ನಾಗಿಸುವ ನಿಯಮವಿದೆ. ರೈತ ತಾನು ಮಾರಾಟ ಮಾಡಿದ ಜಾನುವಾರು ವಧಾಸ್ಥಳಕ್ಕೆ ಹೋಗುತ್ತದೆ ಎಂಬುದನ್ನು ಅಂದಾಜಿಸಲು ಹೇಗೆ ಸಾಧ್ಯ? ಈ ನಿಯಮಗಳು ರೈತ ಸರ್ಕಾರ ಕಚೇರಿಗಳಿಗೆ ಅಲೆಯುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ಕೊನೆಗೆ ಇದು ಹೈನುಗಾರಿಕೆಗೆ ಪೆಟ್ಟು ಕೊಡುತ್ತದೆ.
* ಗೋಹತ್ಯೆ ನಿಷೇಧ ಕಾಯ್ದೆಯು ಗೋವಿನ ಹತ್ಯೆಯನ್ನು ತಡೆಯುವ ಸ್ವರೂಪದ್ದಾಗಿದೆಯಾದರೂ, ರೈತರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವ ಸಾಕಷ್ಟು ಸನ್ನಿವೇಶಗಳನ್ನೂ ಬಲವಂತವಾಗಿ ಸೃಷ್ಟಿ ಮಾಡುತ್ತಿದೆ ಎಂಬುದನ್ನು ಎಲ್ಲರೂ ಗಮನಿಸಲೇಬೇಕು. ಇದಕ್ಕೆ ಸರ್ಕಾರ ಸೂಕ್ತ ಪರಿಹಾರ, ಮಾರ್ಗೋಪಾಯಗಳನ್ನು ಸೂಚಿಸಬೇಕು. ಇಲ್ಲವಾದರೆ, ಇದು ರೈತ ವಿರೋಧಿಯಾಗಲಿದೆ.

ಮತಬ್ಯಾಂಕ್ ಓಲೈಕೆ ಬೇಕಿಲ್ಲ
* ಗೋವುಗಳು ಹೇಗೆ ನಮಗೆ ಪೂಜನೀಯವೋ, ರೈತನೂ ಪೂಜನೀಯವೇ. ಗೋ ಹತ್ಯೆಯನ್ನು ತಡೆಯುವ ನಮ್ಮ ಪ್ರಯತ್ನದಲ್ಲಿ ರೈತನನ್ನು ಶೋಷಿಸುವ ವ್ಯವಸ್ಥೆಗೆ ದೂಡುವುದು ಯಾವ ನ್ಯಾಯ? ಕಾಯ್ದೆಯು ರೈತನ್ನು ಸಂಕಷ್ಟಕ್ಕೆ ದೂಡಬಾರದು ಎಂಬುದಷ್ಟೇ ನನ್ನ ಆಶಯ. ಜೆಡಿಎಸ್‌ಗೆ ಈ ವಿಚಾರದಲ್ಲಿ ಯಾವ ಮತಬ್ಯಾಂಕ್‌ನ ಓಲೈಕೆಯೂ ಬೇಕಿಲ್ಲ. ರೈತನ ಹಿತ ರಕ್ಷಣೆಯಾದರೆ ಸಾಕು.
* ರೈತ ತಾನು ಪೋಷಿಸಿದ ಗೋವನ್ನು ಅಥವಾ ಯಾವುದೇ ಪ್ರಾಣಿಯನ್ನು ವಧೆಗಾಗಿ ಕೊಡಲು ಮನಃಪೂರ್ವಕವಾಗಿ ಒಪ್ಪಲಾರ. ಆದರೆ, ಅದು ಅವನಿಗೆ ಅನಿವಾರ್ಯ. ಗೋಹತ್ಯೆಯನ್ನು ನಿಷೇಧಿಸಬೇಕಿದ್ದರೆ, ಆತನ ಅನಿವಾರ್ಯತೆಯನ್ನು ನಾವು ಹೋಗಲಾಡಿಸಬೇಕು. ರೈತನಿಗೆ ಹೊರೆ ಸೃಷ್ಟಿಸುವ ಜಾನುವಾರುಗಳ ರಕ್ಷಣೆಯನ್ನು ಸರ್ಕಾರವೇ ಮಾಡಲಿ. ಗೋವಿನ ಜೊತೆಗೆ ರೈತನನ್ನೂ ರಕ್ಷಿಸಲಿ.
-
ಮಂಗಳೂರಿಗೆ ಬರಲಿದೆ 26,000 ಟನ್ LPG ತೈಲ ಹೊತ್ತ 'ಶಿವಾಲಿಕ್' ಹಡಗು -
ವಲಸೆ ಕಾರ್ಮಿಕರಿಂದಾಗಿ ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ: ಕಾರ್ಮಿಕ ಇಲಾಖೆ ಸ್ಪಷ್ಟನೆ -
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ












Click it and Unblock the Notifications