ರಾಮನಗರದಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಗೋಷ್ಠಿ; ನಾಳೆ ಬಂದ್ ಕರೆ
ರಾಮನಗರ, ಸೆಪ್ಟೆಂಬರ್ 4: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಜೆಡಿಎಸ್ ಮುಖಂಡರು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು, ನಾಳೆ ರಾಮನಗರ ಬಂದ್ ಗೆ ಕರೆ ನೀಡಿದ್ದಾರೆ.
ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, "ಡಿಕೆಶಿ ಬಂಧನದಿಂದ ನಾವು ನೋವಿನಲ್ಲಿದ್ದೇವೆ. ರಾಜಕೀಯ ಪಿತೂರಿಯಿಂದ ಡಿಕೆಶಿ ಬಂಧನವಾಗಿದೆ. ಅವರಿಗೂ ರಾಜಕೀಯ ಪಟ್ಟು ಗೊತ್ತಿದೆ. ಅವರೂ ಕಾನೂನಾತ್ಮಕ ಹೋರಾಟ ಮಾಡಲಿದ್ದಾರೆ. ವ್ಯವಹಾರ ಮಾಡುವಾಗ ಸಣ್ಣಪುಟ್ಟ ನ್ಯೂನತೆಗಳು ಇರುತ್ತವೆ. ಇದನ್ನೇ ಬಳಸಿಕೊಂಡರೆ ಎಲ್ಲರನ್ನೂ ಜೈಲಿಗೆ ಕಳಿಸಬಹುದು" ಎಂದು ಹೇಳಿದರು.
'ಬಿಜೆಪಿಯ ಮಿತ್ರರೇ' ಎಂದ ಡಿಕೆಶಿ ಹೇಳಿಕೆಯ ಹಿಂದಿನ ಮರ್ಮವೇನು?
"ಬಿಜೆಪಿಯ ಹಲವು ಆಮಿಷಕ್ಕೆ ಡಿಕೆಶಿ ಬಲಿಯಾಗಲಿಲ್ಲ. ಇದರಿಂದ ಹೀಗೆ ಮಾಡಿದ್ದಾರೆ. ಈ ಬಂಧನ ಖಂಡಿಸಿ ನಾಳೆ ರಾಮನಗರ ಬಂದ್ ಮಾಡಲಾಗುವುದು. ಕಾಂಗ್ರೆಸ್- ಜೆಡಿಎಸ್ ಪಕ್ಷದಿಂದ ಬೆಳಗ್ಗೆ 6ರಿಂದ ಸಂಜೆ 6ರ ತನಕ ಬಂದ್ ಗೆ ಕರೆ ನೀಡಲಾಗಿದೆ" ಎಂದು ತಿಳಿಸಿದರು.
ಡಿಕೆಶಿ ಗೆ ಕೊಟ್ಟ ಮಾತನ್ನು ಉಳಿಸಿಕೊಳ್ತಾರ ರಮೇಶ್ ಕುಮಾರ್..?
ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಸಿ.ಎಂ.ಲಿಂಗಪ್ಪ, "ನಾಲ್ಕು ದಿನದಿಂದ ಡಿಕೆಶಿಗೆ ಇಡಿ ಅಧಿಕಾರಿಗಳು ಮಾನಸಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ. ಗಟ್ಟಿ ಹೃದಯದ ಡಿ.ಕೆ.ಶಿವಕುಮಾರ್ ಎಲ್ಲವನ್ನು ಎದುರಿಸಿದ್ದಾರೆ. ಕಾಂಗ್ರೆಸ್ ನಾಯಕರ ವಿರುದ್ಧ ಹಗೆ ಸಾಧಿಸುತ್ತಿದೆ ಬಿಜೆಪಿ. ಎಲ್ಲ ಪಕ್ಷದ ನಾಯಕರು ಬಿಜೆಪಿ ಗುಲಾಮರಾಗಬೇಕೆ? ಕ್ಷಮಿಸಲಾಗದ ಕೃತ್ಯವಿದು. ಇದರ ವಿರುದ್ಧ ಹೋರಾಟ ನಡೆಸುತ್ತೇವೆ" ಎಂದು ಹೇಳಿದರು.