By-Elections: ಅಳೋ ಗಂಡಸನ್ನ ನಂಬಬಾರದು! ಹೆಚ್‌ಡಿಕೆ ವಿರುದ್ಧ ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ರಾಜ್ಯದಲ್ಲಿ ಉಪ ಚುನಾವಣೆ ಕಾವು ಜೋರಾಗಿದೆ. ಕಾಂಗ್ರೆಸ್ ಮತ್ತು ಎನ್‌ಡಿಎ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಮೂರು ಕ್ಷೇತ್ರಗಳಲ್ಲಿ ಗೆಲುವಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಾಗಿದೆ. ಸಿಪಿ ಯೋಗೇಶ್ವರ್ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಳೋ ಗಂಡಸನ್ನ ನಂಬಬೇಡಿ ಎಂದು ಹೆಚ್‌ಡಿ ಕುಮಾರಸ್ವಾಮಿಯನ್ನು ಟೀಕಿಸಿದರು.
ಚನ್ನಪಟ್ಟಣದ ಕುಡ್ಲೂರು ಗ್ರಾಮದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಳುವ ಗಂಡಸನ್ನು ನಂಬಬಾರದು ಎಂದು ನಮ್ಮ ಕಡೆ ಒಂದು ಗಾದೆ ಇದೆ. ಹೆಚ್‌ಡಿ ಕುಮಾರಸ್ವಾಮಿ ಅಳುವ ಗಂಡಸು, ಯಾವತ್ತೂ ಅವರನ್ನು ನಂಬಬೇಡಿ, ಅತ್ತರೆ ಜನರ ಸಮಸ್ಯೆ ಬಗೆಹರಿಯುತ್ತದಾ? ಕೆರೆಗಳು ತುಂಬುತ್ತವಾ? ರೈತರ ಜಮೀನಿಗೆ ನೀರು ಹರಿಯುತ್ತಾ? ಕ್ಷೇತ್ರದ ಅಭಿವೃದ್ಧಿ ಆಗುತ್ತಾ ಎಂದು ಪ್ರಶ್ನೆ ಮಾಡಿದರು.

ನಮಗೆ ಯಾರೂ ಕೂಡ ರಾಜಕೀಯಕ್ಕೆ ಬನ್ನಿ ಎಂದು ಕರೆದಿಲ್ಲ. ಜನಸೇವೆ ಮಾಡಬೇಕು ಎಂದು ನಾವೇ ಬಂದಿದ್ದೇವೆ, ಬಂದ ಮೇಲೆ ಕೆಲಸ ಮಾಡಬೇಕು. ಕಣ್ಣೀರು ಹಾಕಿದರೆ ಜನರ ಕೆಲಸ ಆಗಲ್ಲ, ನಾವು ಗ್ಯಾರಂಟಿ ಯೋಜನೆಗಳ ಮೂಲಕ 1.69 ಕೋಟಿ ಕುಟುಂಬಗಳಿಗೆ ನೆರವಾಗಿದ್ದೇವೆ. ನಮ್ಮ ಕೆಲಸವನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ ಎಂದರು.
ಜನಪರ ಯೋಜನೆಗಳು ಕೈ ಹಿಡಿಯುತ್ತವೆ
ನಮ್ಮ ಸರ್ಕಾರದ ಶಕ್ತಿ ಯೋಜನೆಯನ್ನು ಮೆಚ್ಚಿಕೊಂಡು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರೇ ಪತ್ರ ಬರೆದಿದ್ದಾರೆ. ಈ ಬಾರಿ ಹಾಸನಾಂಬೆ ಜಾತ್ರೆಯಲ್ಲಿ 21 ಲಕ್ಷ ಮಹಿಳೆಯರು ಹೋಗಿದ್ದಾರೆ, ಇದು ದಾಖಲೆ. ಇದಕ್ಕೆ ಶಕ್ತಿ ಯೋಜನೆ ಕಾರಣ ಎಂದರು.
ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ನಿಖಿಲ್ ಕುಮಾರಸ್ವಾಮಿಯನ್ನು ರಾಮನಗರಕ್ಕೆ ತಂದು ನಿಲ್ಲಿಸಿದರು, ಅಲ್ಲಿ ಕೂಡ ಅವರು ಸೋತಿದ್ದು ಈಗ ಚನ್ನಪಟ್ಟಣಕ್ಕೆ ಕರೆತಂದಿದ್ದಾರೆ. ಅಳು ನಮ್ಮ ಪರಂಪರೆ, ನೀನು ಅಳೋಕೆ ಶುರು ಮಾಡು, ಜನ ಮರುಳಾಗಿ ಮತ ಹಾಕುತ್ತಾರೆ ಎಂದು ನಿಖಿಲ್‌ಗೆ ಹೇಳಿಕೊಟ್ಟಿದ್ದಾರೆ. ಸೋಲಿನ ಭಯದಲ್ಲಿ ಇಡೀ ಫ್ಯಾಮಿಲಿ ಕಣ್ಣೀರು ಹಾಕುತ್ತಿದ್ದಾರೆ ಎಂದು ಹೇಳಿದರು.
ಯೋಗೇಶ್ವರ್ ಗೆಲುವು ಖಚಿತ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ 220 ಕೋರಿ ರೂಪಾಯಿ ಅನುದಾನ ಕೊಟ್ಟವನು ನಾನು. ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಟ್ಟ ಬಿಜೆಪಿ ಅನುದಾನ ಕೊಡದೆ ಸುಮ್ಮನಾಗಿತ್ತು, ನಾನು ಅಧಿಕಾರಕ್ಕೆ ಬಂದ ಬಳಿಕ ಅನುದಾನ ಬಿಡುಗಡೆ ಮಾಡಿದ್ದೇನೆ ಎಂದರು.
ಯೋಗೇಶ್ವರ್ ಗೆ ಜನರ ಕಷ್ಟಸುಖ ಗೊತ್ತು. ದೇವೇಗೌಡರ ಕುಟುಂಬಕ್ಕೆ ಇದು ಗೊತ್ತಿಲ್ಲ. ಅವರಿಗೆ ಭಾವನಾತ್ಮಕವಾಗಿ ಮಾತಾಡೋದು, ಅಳೋದು ಮಾತ್ರ ಗೊತ್ತು. ಚನ್ನಪಟ್ಟಣದ ಅಭಿವೃದ್ಧಿಗೆ ಯೋಗೇಶ್ವರ್ ಗೆಲ್ಲಬೇಕು, ಕಣ್ಣೀರು ಹಾಕುವವರಲ್ಲ, ಇಲ್ಲಿ ಯೋಗೇಶ್ವರ್ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಟುಕರಿಗೆ ಕಣ್ಣೀರು ಬರಲ್ಲ ಎಂದು ದೇವೇಗೌಡರು ಹೇಳಿದ್ದಾರೆ, ಹಾಸನದಲ್ಲಿ ನಿಮ್ಮ ಮೊಮ್ಮಗನಿಂದ ನೂರಾರು ಹೆಣ್ಣು ಮಕ್ಕಳು ಕಣ್ಣೀರು ಹಾಕಿದ್ದಾರೆ. ಅಲ್ಲಿ ಹೋಗಿ ನಿಮ್ಮ ಕುಟುಂಬದವರು ಕಣ್ಣೀರು ಹಾಕಿದ್ದೀರಾ? ನಿಮ್ಮ ಮೊಮ್ಮಗನಿಂದ ಅನ್ಯಾಯಕ್ಕೆ ಒಳಗಾದ ಹೆಣ್ಣು ಮಕ್ಕಳ ಕಷ್ಟ ಕೇಳಿದ್ರಾ ಎಂದು ಪ್ರಶ್ನೆ ಮಾಡಿದರು.
ಚನ್ನಪಟ್ಟಣ ಕ್ಷೇತ್ರಕ್ಕೆ ಈಗಾಗಲೇ 500 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ಕೊಟ್ಟಿದ್ದೇನೆ, ಇನ್ನೂ ಮೂರುವರೆ ವರ್ಷ ನಮ್ಮ ಸರ್ಕಾರ ಇರುತ್ತೆ, ಯೋಗೇಶ್ವರ್ ಗೆದ್ದ ಮೇಲೆ ಮತ್ತಷ್ಟು ಅನುದಾನ ಕೊಡ್ತೀನಿ. ಕ್ಷೇತ್ರದ ಅನುಕೂಲಕ್ಕಾಗಿ ಯೋಗೇಶ್ವರ್ ರನ್ನು ಗೆಲ್ಲಿಸಿ ಎಂದರು.












Click it and Unblock the Notifications