ಜೆಡಿಎಸ್ ಕಾರ್ಯಕರ್ತರಿಂದ ಯೋಗೇಶ್ವರ್ ಕಾರಿನ ಮೇಲೆ ಮೊಟ್ಟೆ ದಾಳಿ: ಸಿಎಂ ಖಂಡನೆ
ಬೆಂಗಳೂರು, ಅಕ್ಟೋಬರ್ 1: ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಕಾರಿನ ಮೇಲೆ ಚೆನ್ನಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಕಲ್ಲು ಹಾಗೂ ಮೊಟ್ಟೆ ಎಸೆದ ಘಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಟುವಾಗಿ ಟೀಕಿಸಿದ್ದಾರೆ. .
ಘಟನೆ ಬಗ್ಗೆ ಟ್ವೀಟ್ ಮಾಡಿರುವ ಅವರು, "ಇಂದು ರಾಮನಗರದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ. ಪಿ. ಯೋಗೇಶ್ವರ್ ಅವರ ಮೇಲೆ ಕಲ್ಲು ಹಾಗೂ ಮೊಟ್ಟೆ ಎಸೆದಿರುವುದು ಸರಿಯಲ್ಲ, ಈ ದಾಳಿಯನ್ನು ನಾನು ಕಟುವಾಗಿ ಖಂಡಿಸುತ್ತೇನೆ. ವಿಷಯಗಳು ಏನೇ ಇರಲಿ ಅದನ್ನು ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳಬೇಕು ಮತ್ತು ಯಾರು ಕಾನೂನು ಕೈಗೆತ್ತಿಕೊಳ್ಳಬಾರದು" ಎಂದು ಟ್ವೀಟಿಸಿದ್ದಾರೆ.
ಮುಖ್ಯಮಂತ್ರಿಗಳ 50 ಕೋಟಿ ವಿಶೇಷ ಅನುದಾನದ ಅಡಿ ವಿವಿಧ ಕಾಮಗಾರಿಗೆ ಚಾಲನೆ ನೀಡಲು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಶನಿವಾರ ಬೆಳಗ್ಗೆ ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣ ಗ್ರಾಮಕ್ಕೆ ಆಗಮಿಸಿದ್ದರು. ಆದರೆ ಸ್ಥಳೀಯ ಶಾಸಕರಾದ ಎಚ್‌ಡಿ ಕುಮಾರಸ್ವಾಮಿಗೆ ಆಹ್ವಾನ ನೀಡಿಲ್ಲ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನಾಕಾರರು ಯೋಗೇಶ್ವರ್ ಕಾರಿಗೆ ಮುತ್ತಿಗೆ ಹಾಕಿದ್ದಲ್ಲದೆ, ಕಲ್ಲು ಹಾಗೂ ಮೊಟ್ಟೆ ಎಸೆದರು. ನೆರೆದಿದ್ದ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು.

ಗೂಂಡಾಗಳನ್ನು ಕರೆಸಿ ಪ್ರತಿಭಟನೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಪಿ ಯೋಗೇಶ್ವರ್ ನಾವು ಜಿಲ್ಲಾ ಉಸ್ತುವಾರಿ ಸಚಿವರನ್ನು ಹಾಗೂ ಶಾಸಕರಿಗೆ ಆಹ್ವಾನ ನೀಡಿದ್ದೆವು. ಇಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ. ನಾನು ಸರಕಾರದಿಂದ ರಸ್ತೆ ಅಭಿವೃದ್ಧಿಗೆ 50 ಕೋಟಿ ರೂ ಬಿಡುಗಡೆ ಮಾಡಿಸಿಕೊಂಡಿದ್ದೇನೆ. ಆದರೆ ಇದನ್ನು ಸಹಿಸದೇ ಕುಮಾರಸ್ವಾಮಿ ಬೆಂಗಳೂರಿನಿಂದ ಕೆಲವು ಗೂಂಡಾಗಳನ್ನು ಕರೆಸಿ ಪ್ರತಿಭಟನೆ ಮಾಡಿಸಿ ನನ್ನ ಕಾರಿನ ಮೇಲೆ ಕಲ್ಲು ತೂರಾಟ ಮಾಡಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸ್ಥಳೀಯ ಶಾಸಕರನ್ನು ಬಿಟ್ಟು ಕಾರ್ಯಕ್ರಮಕ್ಕೆ ಎಚ್‌ಡಿಕೆ ಅಸಮಧಾನ
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎಚ್‌ಡಿ ಕುಮಾರಸ್ವಾಮಿ, ನಾವು ಬೇರೆ ಜಿಲ್ಲೆಯ ಗುಂಡಾಗಳನ್ನು ಕರೆಯಿಸಿ ಪ್ರತಿಭಟನೆ ಮಾಡಿಲ್ಲ, ನನ್ನ ಪಕ್ಷದಲ್ಲಿರುವವರು ಗೂಂಡಾಗಳಲ್ಲ, ರಾಮನಗರ ಜಿಲ್ಲೆ ಅಷ್ಟೊಂದು ಅನಾಥವಾಗಿಲ್ಲ. ನನ್ನ ಪಕ್ಷದಲ್ಲಿ ಎಂದು ತಿರುಗೇಟು ನೀಡಿದ್ದಲ್ಲದೆ, ರಾಮನಗರ ಸ್ಥಳೀಯ ಶಾಸಕರ ಗಮನಕ್ಕೆ ತರದೇ ಸಿಪಿ ಯೋಗೇಶ್ವರ್ ಕಾರ್ಯಕ್ರಮ ಉದ್ಘಾಟನೆ ಹೇಗೆ ಮಾಡಿದ್ದಾರೆ? ಈ ಬಾರಿ ವಿಧಾನ ಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇನೆ, ಸುಮ್ಮನೆ ಬಿಡಲ್ಲ. ಈ ಕಾರ್ಯಕ್ರಮದಲ್ಲಿ ಯಾವ ಅಧಿಕಾರಿಗಳಿದ್ದರು ಅವರೆಲ್ಲಾ ಸಸ್ಪೆಂಡ್ ಆಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications