Channapattana By Election: ಸಿಪಿವೈಗೆ ಹೈಕಮಾಂಡ್ ಕರೆ, ಕೊನೇ ಕ್ಷಣದಲ್ಲಿ ಬೆಂಬಲಿಗರ ಸಮಾವೇಶ ರದ್ದು!
ರಾಮನಗರ ಆಗಸ್ಟ್ 11: ಬಿಜೆಪಿ-ಜೆಡಿಎಸ್ ಪಾದಯಾತ್ರೆಯಿಂದ ದೂರ ಉಳಿದ ಮಾಜಿ ಸಚಿವ ಸಿಪಿ ಯೋಗೇಶ್ವರ್ ಬಂಡಾಯದ ಬಾವುಟ ಹಾರಿಸಿದ್ದು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಚಿಂತನೆ ನಡೆಸಿದ್ದರು. ಹೀಗಾಗಿ ಸಿಪಿ ಯೋಗೇಶ್ವರ್‌ಗೆ ಬಿಜೆಪಿ ಹೈಕಮಾಂಡ್ ಕರೆ ನೀಡಿದೆ. ಇದರಿಂದಾಗಿ ಸಿಪಿ ಯೋಗೇಶ್ವರ್ ಬೆಂಬಲಿಗರು ಆಯೋಜಿಸಿದ್ದ ಸಮಾವೇಶ ಅಂತಿಮ ಕ್ಷಣದಲ್ಲಿ ರದ್ದಾಗಿದೆ.
ಸಿಪಿ ಯೋಗೇಶ್ವರ್ ಸದ್ಯದಲ್ಲೇ ಎದುರಾಗುವ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದರು. ಆಪ್ತರ ಜೊತೆಗೆ ಎರಡು ದಿನಗಳ ಹಿಂದೆ ಸಮಾಲೋಚನೆ ನಡೆಸಿರುವ ಅವರು ಆಗಸ್ಟ್ 11ರಂದು ಚನ್ನಪಟ್ಟಣದಲ್ಲಿ ಬಹಿರಂಗ ಸಭೆ ನಡೆಸಿ ತಮ್ಮ ಇಚ್ಚೆಗೆ ತಡೆಯಾಗಿರುವವರಿಗೆ ಪ್ರಬಲ ಸಂದೇಶ ನೀಡಲು ನಿರ್ಧರಿಸಿದ್ದರು. ಆದರೆ ಚನ್ನಪಟ್ಟದಲ್ಲಿ ಸಿಪಿವೈ ಶಕ್ತಿ ಪ್ರದರ್ಶನಕ್ಕೆ ಬ್ರೇಕ್ ಬಿದ್ದಿದೆ.

ಸುಮಾರು 15-20 ಸಾವಿರದಷ್ಟು ಜನರನ್ನು ಸೇರಿಸಿ ನಗರದ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶಕ್ತಿ ಪ್ರದರ್ಶನ ನಡೆಸಲು ತೆರೆಮರೆಯಲ್ಲಿ ಸಿಪಿ ಯೋಗೇಶ್ವರ್ ತಯಾರಿ ನಡೆಸುತ್ತಿದ್ದರು. ಆದರೆ ಹೈಕಮಾಂಡ್ ಸದ್ಯ ಇದಕ್ಕೆ ಬ್ರೇಕ್ ಹಾಕಿದ್ದು ತಕ್ಷಣ ದೆಹಲಿಗೆ ಬರುವಂತೆ ಕರೆ ನೀಡಿದೆ.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷದಲ್ಲಿ ಟಿಕೆಟ್‌ಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದ್ದು, ಶತಾಗತಾಯ ಉಪ ಚುನಾವಣೆಯಲ್ಲಿ ಸ್ಪರ್ಧಿಸಿಯೇ ತೀರಬೇಕೆಂಬ ಹಟಕ್ಕೆ ಬಿದ್ದಿರುವ ಯೋಗೇಶ್ವರ್ ಈ ಕಾರ್ಯಕ್ರಮದ ಮೂಲಕ ತನ್ನ ರಾಜಕೀಯ ವಿರೋಧಗಳಿಗೆ ಟಕ್ಕರ್ ಕೊಡಲು ತೀರ್ಮಾನಿಸಿದ್ದರು.
ಚನ್ನಪಟ್ಟಣ ಟಿಕೆಟ್ ತಮಗೇ ಸಿಗುತ್ತದೆ ಎಂಬ ಅದಮ್ಯ ವಿಶ್ವಾಸದಲ್ಲಿ ಇದ್ದರು. ತಾವೇ ಮೈತ್ರಿ ಅಭ್ಯರ್ಥಿ ಎಂದು ಘೋಷಣೆ ಕೂಡ ಮಾಡಿಕೊಂಡಿದ್ದರು. ಆದರೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಸಿಪಿ ಯೇಗೇಶ್ವರ್ ಅವರ ಆಸೆಗೆ ತಣ್ಣೀರು ಎರಚಿದ್ದರು. ಮಗ ನಿಖಿಲ್ ಕುಮಾರಸ್ವಾಮಿಗೆ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಟಿಕೆಟ್ ನೀಡಲು ಅವರು ಲಾಬಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿಪಿ ಯೋಗೇಶ್ವರ್ ಅವರು ವಿರೋಧಿಗಳಿಗೆ ಸ್ಪಷ್ಟ ಸಂದೇಶ ಸಾರಲು ತಮ್ಮ ರಾಜಕೀಯ ನಿರ್ಧಾರ ಘೋಷಣೆ ಮಾಡಲು ಇಂದಿನ ಕಾರ್ಯಕ್ರಮ ಆಯೋಜಿಸಿದ್ದರು. ಆದರೆ ಇದಕ್ಕೆ ಬ್ರೇಕ್ ಹಾಕಿದ ಬಿಜೆಪಿ ಹೈಕಮಾಂಡ್ ದೆಹಲಿಗೆ ತಕ್ಷಣ ಬುಲಾವ್ ನೀಡಿದೆ.

ಇಂದು ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಬೆಂಬಲಿಗರು ಬೃಹತ್ ಸಮಾವೇಶವನ್ನು ಆಯೋಜನೆ ಮಾಡಿದ್ದರು. ಈ ಕಾರ್ಯಕ್ರಮದ ಮೂಲಕ ವಿರೋಧಿಗಳಿಗೆ ಪಾಠ ಕಲಿಸುವುದು ಸಿಪಿ ಯೇಗೇಶ್ವರ್ ಮಹದಾಸೆಯಾಗಿತ್ತು. ಆದರೆ ಪಕ್ಷದ ನಾಯಕರು ಅವರಿಗೆ ಕರೆ ನೀಡಿದ್ದ ಬೆನ್ನಲ್ಲೇ ಸಮಾವೇಶ ರದ್ದಾಗಿದೆ.
ಇದರಿಂದಾಗಿ ತಮ್ಮ ರಾಜಕೀಯ ನಿರ್ಧಾರ ತೆಗೆದುಕೊಳ್ಳಲು ತರಾತುರಿಯಲ್ಲಿ ಇದ್ದ ಸಿಪಿ ಯೇಗೇಶ್ವರ್ ಅವರಿಗೆ ನಿರಾಸೆಯಾಗಿದೆ. ಸೋಮವಾರ ದೆಹಲಿಯಲ್ಲಿ ಸಭೆ ನಡೆಯಲಿದ್ದು, ಬಹುಮತ ಟಿಕೆಟ್ ಯಾರಿಗೆ ಎನ್ನುವುದು ನಿರ್ಧಾರವಾಗಲಿದೆ. ಸಭೆ ಬಳಿಕ ಸಿಪಿ ಯೋಗೇಶ್ವರ ಮುಂದಿನ ನಿರ್ಧಾರ ಗೊತ್ತಾಗಲಿದೆ. ಇದರಿಂದಾಗಿ ಚನ್ನಪಟ್ಟಣ ಉಪ ಚುನಾವಣೆ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ.












Click it and Unblock the Notifications