ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್‌ಗೆ ಕರೆ: ರಾಮನಗರದಿಂದ 50ಕ್ಕೂ ಹೆಚ್ಚು ಸಂಘಟನೆಗಳಿಂದ ಬೆಂಬಲ
ರಾಮನಗರ, ಸೆಪ್ಟೆಂಬರ್, 28: ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಆಗ್ರಹಿಸಿ ಹಲವು ಸಂಘಟನೆಗಳು ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಹಿನ್ನೆಲೆ ರಾಮನಗರದಲ್ಲಿ ಇಂದು ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಸಭೆ ನಡೆಸಿದ್ದು, ಸಭೆಯಲ್ಲಿ ಬಂದ್ ರೂಪುರೇಷೆ ಬಗ್ಗೆ ಚರ್ಚೆ ನಡೆಸಿವೆ. ಹಾಗಾದರೆ ಸಭೆಯಲ್ಲಿ ಏನೆಲ್ಲ ನಿರ್ಧಾರ ಕೈಗೊಂಡಿದ್ದಾರೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ರಾಮನಗರದಲ್ಲಿ ನಡೆದ ಸಭೆಯಲ್ಲಿ ಸ್ವಯಂಪ್ರೇರಿತವಾಗಿ ಸಾರ್ವಜನಿಕರು ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಲಾಗಿದ್ದು, ಈ ವೇಳೆ ರಾಮನಗರದ 50ಕ್ಕೂ ಹೆಚ್ಚು ಸಂಘಟನೆಗಳಿಂದ ಬೆಂಬಲ ಸೂಚಿಸಿವೆ ಎಂದು ತಿಳಿದುಬಂದಿದೆ.

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ, ಕರುನಾಡ ಸೇನೆ, ಕನ್ನಡ ಜನಪರ ವೇದಿಕೆ, ಭಾರತ್ ವಿಕಾಸ್ ಪರಿಷತ್, ರಾಜ್ಯ ರೈತ ಸಂಘ- ಹಸಿರುಸೇನೆ ವತಿಯಿಂದ ಟಮಟೆ ಚಳುವಳಿ ಮಾಡಲು ನಿರ್ಧಾರ ಮಾಡಲಾಗಿದೆ. ನಗರದ ಕೆಂಪೇಗೌಡ ಸರ್ಕಲ್‌ನಿಂದ ಕೆಂಗಲ್ ಹನುಮಂತಯ್ಯ ಪ್ರತಿಮೆವರೆಗೆ ಪ್ರತಿಭಟನೆ ಮೆರವಣಿಗೆ ನಡೆಯಲಿದ್ದು, ಈ ವೇಳೆ ತಮಿಳುನಾಡು ಸಿಎಂ ಸ್ಟಾಲಿನ್ ಅಣಕು ಶವಯಾತ್ರೆ ಮಾಡಲು ನಿರ್ಧಾರ ಮಾಡಿದ್ದಾರೆ.
ಇನ್ನು ನಾಳೆ (ಸೆಪ್ಟೆಂಬರ್ 29) ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಚನ್ನಪಟ್ಟಣ ಟೌನ್ ಸಂಪೂರ್ಣ ಸ್ತಬ್ಧವಾಗಲಿದೆ. ಈ ವೇಳೆ ಆಸ್ಪತ್ರೆ, ಮೆಡಿಕಲ್, ಹಾಲಿನ ಅಂಗಡಿ ಹೊರತುಪಡಿಸಿ ಉಳಿದೆಲ್ಲ ಸೇವೆ ಸ್ಥಗಿತವಾಗಲಿದೆ ಎಂದು ತಿಳಿದುಬಂದಿದೆ.
ಗುಂಡ್ಲುಪೇಟೆ ಎಪಿಎಂಸಿಗೆ ರಜೆ ಘೋಷಣೆ
ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ ಪ್ರಯುಕ್ತ ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಗೆ ರಜೆ ಘೋಷಣೆ ಮಾಡಲಾಗಿದೆ.
ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ವರ್ತಕರು, ದಲ್ಲಾಳಿಗಳು ಹಾಗೂ ಕೂಲಿ ಕಾರ್ಮಿಕರು ಸೆಪ್ಟೆಂಬರ್ 29ರ ಕರ್ನಾಟಕ ಬಂದ್ಗೆ ಬೆಂಬಲ ಸೂಚಿಸುವ ಹಿನ್ನೆಲೆ ಮಾರುಕಟ್ಟೆಗೆ ರಜೆ ಘೋಷಣೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದು, ಈ ಹಿನ್ನೆಲೆ ಎಪಿಎಂಸಿ ಕಾರ್ಯದರ್ಶಿ ಎಸ್.ಶ್ರೀಧರ್ ನಾಳೆ ರಜೆ ಘೋಷಣೆ ಮಾಡಿ ಪ್ರಕಟಣೆ ಹೊರಡಿಸಿದ್ದಾರೆ. ಜೊತೆಗೆ ರಜೆ ಕಾರಣ ಶುಕ್ರವಾರ ಯಾವುದೇ ರೈತರು ಮಾರುಕಟ್ಟೆಗೆ ಹಣ್ಣು, ತರಕಾರಿ ತರದಂತೆ ಮನವಿ ಮಾಡಿದ್ದಾರೆ.
ಹಲವು ಸಂಘಟನೆ ಬೆಂಬಲ
ಕರ್ನಾಟಕ ಬಂದ್‍ಗೆ ಗುಂಡ್ಲುಪೇಟೆ ತಾಲೂಕು ಕೇಂದ್ರದಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ರೈತ ಸಂಘಟನೆ ಹಾಗೂ ವಿವಿಧ ಪ್ರಗತಿಪರ ಮತ್ತು ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ರೈತ ಸಂಘ, ಕರವೇ(ಪ್ರವೀಣ್ ಶೆಟ್ಟಿ ಬಣ), ಮಾನವ ಹಕ್ಕುಗಳ ಸಮಿತಿ, ಮಾನವ ಬಂಧುತ್ವ ವೇದಿಕೆ, ಕಾವಲು ಪಡೆ ಸಂಘಟನೆ, ಎಸ್‍ಡಿಪಿಐ ಸಂಘಟನೆ, ಬಿಎಸ್‍ಪಿ ಮತ್ತು ವೈಭವ ಕರ್ನಾಟಕ ಸೇರಿಂತೆ ವಿವಿಧ ಪ್ರಗತಿ ಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಬೆಂಬಲ ಸೂಚಿಸಿದ್ದಾರೆ.












Click it and Unblock the Notifications