ಪರೀಕ್ಷೆ ಸಮಯದಲ್ಲಿ ಮಕ್ಕಳ ಮನಸ್ಥಿತಿ ಹಾಳು ಮಾಡುವುದು ಸರಿಯಲ್ಲ; ಬಿ.ವೈ. ವಿಜಯೇಂದ್ರ
ರಾಮನಗರ, ಫೆಬ್ರವರಿ 15: ಹಿಜಾಬ್ ಹಾಗೂ ಕೇಸರಿ ಶಾಲು ವಿಚಾರವಾಗಿ ಈಗಾಗಲೇ ಸಾಕಷ್ಟು ಚರ್ಚೆಗಳಾಗಿದೆ. ಶಾಲಾ ಕಾಲೇಜುಗಳಲ್ಲಿ ಈ ರೀತಿ ವಾತಾವರಣ ಸೃಷ್ಟಿಯಾಗಿರುವುದು ದುರದೃಷ್ಟಕರ. ಶಾಲೆಯಲ್ಲಿ ಪರೀಕ್ಷೆ ನಡೆಯುವ ಸಂದರ್ಭಗಳಲ್ಲಿ ಈ ರೀತಿ ಮಕ್ಕಳ ಮನಸ್ಥಿತಿ ಹಾಳು ಮಾಡುವುದು ಸರಿಯಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಷಾದ ವ್ಯಕ್ತಪಡಿಸಿದರು.
ಇಂದು ಮಾಗಡಿ ತಾಲ್ಲೂಕಿನ ವೀರಾಪುರದಲ್ಲಿ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ 111 ಅಡಿ ಎತ್ತರದ ಕಾಂಕ್ರೀಟ್ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದರು.
ಮಕ್ಕಳಿಗೆ ಪ್ರಚೋದನೆ ಮಾಡುವುದು ಸರಿಯಲ್ಲ. ಸಮವಸ್ತ್ರದ ವಿಷಯದಲ್ಲಿ ಗಂಭೀರವಾದ ವಿಚಾರ ಹಾಗೂ ಹಾಸ್ಯಾಸ್ಪದ ಕೂಡ ಆಗಿದೆ. ಸಮವಸ್ತ್ರದ ವಿಷಯದಲ್ಲಿ ಯಾವುದೇ ಜಾತಿ, ಧರ್ಮದ ಬಣ್ಣ ಕಟ್ಟಬಾರದು. ಎಲ್ಲಾ ಮಕ್ಕಳು ಸರಿ ಸಮಾನವಾಗಿ ಕುಳಿತು ವಿದ್ಯಾಭ್ಯಾಸ ಮಾಡಬೇಕು ಎಂದರು.

ಸಮವಸ್ತ್ರದ ವಿಚಾರದಲ್ಲಿ ಚರ್ಚೆ ಮಾಡುತ್ತಿರುವುದು ವಿಪರ್ಯಾಸ. ಈ ವಿಷಯದಲ್ಲಿ ಕಾಂಗ್ರೆಸ್ ರಾಜಕೀಯ ಬೆರಸುತ್ತಿದೆ ಎಂದು ಆರೋಪಿಸಿದರು. ಇನ್ನೆರಡು ದಿನದಲ್ಲಿ ತೀರ್ಪು ಬರುತ್ತದೆ ನೋಡೋಣ ಎಂದು ಬಿ.ವೈ. ವಿಜಯೇಂದ್ರ ಹೇಳಿಕೆ ನೀಡಿದರು.
ನನ್ನ ಸ್ಪರ್ಧೆ ವಿಚಾರ ಪಕ್ಷ ತೀರ್ಮಾನ ಮಾಡುತ್ತದೆ
ನಾನು ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬೇಕೇ? ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ನಮ್ಮ ಪಕ್ಷದ ರಾಜ್ಯಾಧ್ಯಕ್ಷರು, ಮುಖಂಡರು ತೀರ್ಮಾನ ಮಾಡುತ್ತಾರೆ. ನಾನು ಉಪಾಧ್ಯಕ್ಷನಾಗಿ ರಾಜ್ಯಾದ್ಯಂತ ಪ್ರವಾಸ ಮಾಡುವ ಮೂಲಕ ರಾಜ್ಯದಲ್ಲಿ ಪಕ್ಷ ಸಂಘಟನೆಯ ಕಡೆ ನನ್ನ ಗಮನ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇನ್ನು ಶಿಕಾರಿಪುರ ಅಥವಾ ಮೈಸೂರಿನಲ್ಲಿ ಸ್ಪರ್ಧಿಸುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಬಿ.ವೈ. ವಿಜಯೇಂದ್ರ, ಶಿಕಾರಿಪುರ, ಮೈಸೂರು ಆಯ್ತು, ಮೊನ್ನೆ ಬಳ್ಳಾರಿಯ ಹೊಸಪೇಟೆಗೆ ಹೋಗುತ್ತೇನೆ ಎಂದು ಪತ್ರಿಕೆಯಲ್ಲಿ ಬಂದಿದೆ. ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಹಾಗೂ ಯಾವ ಕ್ಷೇತ್ರ ಎಂದು ಪಕ್ಷ ತೀರ್ಮಾನ ಮಾಡುತ್ತದೆ. ನಾನು ನಮ್ಮ ಪಕ್ಷದ ತೀರ್ಮಾನದಂತೆ ನಾನು ನಡೆದುಕೊಳ್ಳುತ್ತೇನೆ ಎಂದರು.
ರಾಮನಗರ ಶಾಲಾ- ಕಾಲೇಜು ಸುತ್ತಮುತ್ತ ನಿಷೇಧಾಜ್ಞೆ ಜಾರಿ
ಹಿಜಾಬ್ ಮತ್ತು ಕೇಸರಿ ವಿವಾದದ ಬಳಿಕ ಸೋಮವಾರದಿಂದ ಶಾಂತಿಯುತವಾಗಿ ಹೈಸ್ಕೂಲ್ ತರಗತಿಗಳು ಪುನರಾರಂಭಗೊಂಡಿದ್ದು, ಇದೀಗ ಬುಧವಾರದಿಂದ ಪಿಯು, ಡಿಗ್ರಿ, ವಿಶ್ವವಿದ್ಯಾಲಯ ಮತ್ತು ಡಿಪ್ಲೋಮಾ ಕಾಲೇಜುಗಳನ್ನು ಆರಂಭಿಸಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಹಿಜಾಬ್ ಮತ್ತು ಕೇಸರಿ ವಿವಾದದ ಮುನ್ನೆಚ್ಚರಿಕೆ ಕ್ರಮವಾಗಿ ರಾಮನಗರ ಜಿಲ್ಲಾ ವ್ಯಾಪ್ತಿಯ ಎಲ್ಲಾ ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಪದವಿ ಕಾಲೇಜುಗಳು ಹಾಗೂ ಎಲ್ಲಾ ವೃತ್ತಿಪರ ಕಾಲೇಜುಗಳ ಮುಖ್ಯದ್ವಾರದಿಂದ 100 ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್.ಕೆ ಆದೇಶ ಹೊರಡಿಸಿದ್ದಾರೆ.












Click it and Unblock the Notifications