ಕೊರೊನಾ ಆತಂಕದ ನಡುವೆಯೂ ಬಿಸಿಲೇಶ್ವರಿ ಕೊಂಡ ಮಹೋತ್ಸವದಲ್ಲಿ ಜನಜಾತ್ರೆ
ಚನ್ನಪಟ್ಟಣ, ಮಾರ್ಚ್ 16: ಕೊರೊನಾ ಸೋಂಕಿನ ಅಬ್ಬರದಿಂದ ರಾಜ್ಯದಲ್ಲಿ ಎಮರ್ಜೆನ್ಸಿ ಜಾರಿಯಲ್ಲಿದೆ. ಕೊರೊನಾ ಭೀತಿಯ ನಡುವೆಯೂ ಕಬ್ಬಾಳಮ್ಮನ ಸಹೋದರಿ ಬಿಸಿಲೇಶ್ವರಿ ಅಮ್ಮನ ಅದ್ಧೂರಿ ಕೊಂಡ ಮಹೋತ್ಸವ ಹುಣಸನಹಳ್ಳಿ ಗ್ರಾಮದಲ್ಲಿ ಸಂಭ್ರಮ ಸಡಗರದಿಂದ ನೆರವೇರಿತು. ತಲತಲಾಂತರದಿಂದಲೂ ನಡೆದುಕೊಂಡು ಬರುತ್ತಿರುವ ಈ ಆಚರಣೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.
ಬಿಸಿಲಮ್ಮನ ಮೂರ್ತಿಯನ್ನು ತಲೆ ಮೇಲೆ ಹೊತ್ತುಕೊಂಡು ಕೊಂಡಹಾಯುವ ದೃಶ್ಯ ನೋಡುಗರ ಕಣ್ಸೆಳೆಯಿತು. ಮಹಿಳೆಯರು ತಂಬಿಟ್ಟಿನ ಆರತಿ ಮಾಡಿ ಪ್ರಾರ್ಥನೆ ಮಾಡಿದರೆ ತಮ್ಮ ಬೇಡಿಕೆಗಳು ಯಾವುದೇ ಅಡೆತಡೆಗಳಿಲ್ಲದೆ ನೆರವೇರುತ್ತವೆ ಎಂಬುದೂ ಈ ಜಾತ್ರೆಗೆ ಬರುವ ಭಕ್ತರ ನಂಬಿಕೆ ಕೂಡ. ಈ ಕೊಂಡ ನೋಡಲು ಸುಮಾರು 10 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಪ್ರತಿವರ್ಷವೂ ಯುಗಾದಿ ಹಬ್ಬದ ಆಸುಪಾಸು ನಡೆಯುವ ಈ ಕೊಂಡ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ತಾಯಿ ಬಿಸಿಲಮ್ಮನ ದರ್ಶನ ಪಡೆಯುತ್ತಾರೆ.

ಒಟ್ಟಾರೆ ಪ್ರತಿವರ್ಷ ನಡೆಯುವ ಬಿಸಿಲಮ್ಮನ ಕೊಂಡ ಮಹೋತ್ಸವವನ್ನ ನೋಡಲು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರನ್ನು ನೋಡುವುದೇ ಕಣ್ಣಿಗೆ ಹಬ್ಬದಂತಿತ್ತು. ಕೊಂಡ ಮಹೋತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆದರೆ ಈ ಬಾರಿ ಕೊರೊನಾ ಅಬ್ಬರದ ನಡುವೆಯೂ ತಾಯಿ ಬಿಸಿಲೇಶ್ವರಿ ಕೊಂಡ ಅದ್ಧೂರಿಯಾಗಿ ನಡೆದದ್ದು ಮತ್ತೊಂದು ವಿಶೇಷ.












Click it and Unblock the Notifications