ರಾಮನಗರ: ಮಹಿಳೆಯ ಗರ್ಭದಲ್ಲಿ ಬರೋಬ್ಬರಿ ಹತ್ತು ಕೆ.ಜಿ ತೂಕದ ಕ್ಯಾನ್ಸರ್ ಗಡ್ಡೆ
ರಾಮನಗರ, ಅಕ್ಟೋಬರ್ 23: ಹೊಟ್ಟೆ ನೋವಿನ ಬಾದೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿದ್ದ ಭಾರೀ ಗ್ರಾತದ ಕ್ಯಾನ್ಸರ್ ಗೆಡ್ಡೆಯನ್ನು ಹೊರ ತೆಗೆದಿರುವ ಘಟನೆ ಜಿಲ್ಲೆಯ ಚನ್ನಪಟ್ಟಣದ ಬಾಲು ಆಸ್ಪತ್ರೆಯಲ್ಲಿ ನಡೆದಿದೆ.
ಚನ್ನಪಟ್ಟಣದ ಬಾಲು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರ ಗರ್ಭಕೋಶ (ಅಂಡಾಶಯ) ದಲ್ಲಿದ್ದ ಬರೋಬ್ಬರಿ 10. ಕೆ.ಜಿ. ತೂಕದ ಕ್ಯಾನ್ಸರ್ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ನಡೆಸಿ ಹೊರತೆಗೆಯುವಲ್ಲಿ ಬಾಲು ಆಸ್ಪತ್ರೆಯ ವೈದ್ಯ ತಂಡ ಯಶಸ್ವಿಯಾಗಿದೆ.

ಬಾಲು ಆಸ್ಪತ್ರೆಯ ಮುಖ್ಯಸ್ಥೆ ಡಾ.ಶೈಲಜಾ ವೆಂಕಟ ಸುಬ್ಬಯ್ಯ ಚಟ್ಟಿ ಮಾರ್ಗದರ್ಶನದಲ್ಲಿ ಅರವಳಿಕೆ ತಜ್ಞ ಡಾ. ಮನೋಜಂ, ಸರ್ಜನ್‍ಗಳಾದ ಡಾ. ಪ್ರಕಾಶ್ ಹಾಗೂ ಡಾ. ಜಯಶ್ರೀ ಅವರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಮಹಿಳೆಯೊಬ್ಬರ ಗರ್ಭದಲ್ಲಿ ಬೆಳೆದಿದ್ದ 10 ಕೆ.ಜಿ. 300 ಗ್ರಾಂ ತೂಕದ ಅಂಡಾಶಯದ ಕ್ಯಾನ್ಸರ್ ಗೆಡ್ಡೆಯನ್ನು ಹೊರತೆಗೆದಿದ್ದಾರೆ.
ಮಹಿಳೆಯೊಬ್ಬರು (46 ವರ್ಷ) ತಮಗೆ ಗ್ಯಾಸ್ಟ್ರಿಕ್ ಆಗಿದ್ದು, ವಾಂತಿಯಾಗುತ್ತಿದೆ ಎಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದಾರೆ. ಮಹಿಳೆಯನ್ನು ಸ್ಕ್ಯಾನಿಂಗ್ ಮಾಡಿದ ವೇಳೆ ಅವರ ಗರ್ಭದಲ್ಲಿ ಕ್ಯಾನ್ಸರ್ ಗಡ್ಡೆ ಬೆಳೆದಿರುವುದು ಕಂಡುಬಂದಿದೆ. ಕ್ಯಾನ್ಸರ್ ಗೆಡ್ಡೆ ಪತ್ತೆಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯರು ತ್ವರಿತವಾಗಿ ಕಾರ್ಯಪ್ರವೃತರಾಗಿದ್ದಾರೆ.

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ಸರ್ಜನ್ ಡಾ. ಪ್ರಕಾಶ್, ಅರವಳಿಕೆ ತಜ್ಞ ಡಾ. ಮನೋಜಂ, ಹಾಗೂ ಬಾಲು ಆಸ್ಪತ್ರೆಯ ಸರ್ಜನ್ ಡಾ. ಜಯಶ್ರೀ ನೇತೃತ್ವದಲ್ಲಿ ಶನಿವಾರ ಮುಂಜಾನೆ 3 ಗಂಟೆಯ ವೇಳೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಯ ಗರ್ಭದಲ್ಲಿ ಬೆಳೆದಿದ್ದ ಕ್ಯಾನ್ಸರ್ ಗಡ್ಡೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ತಪಾಸಣೆಯ ವೇಳೆ ಮಹಿಳೆ ತಮಗೆ ಕಳೆದ 6-7 ತಿಂಗಳಿನಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬರುತ್ತಿದ್ದು, ಕೆಲ ದಿನಗಳಿಂದ ಆಗಾಗ ವಾಂತಿಯಾಗುತ್ತಿದೆ ಎಂದು ತಿಳಿಸಿದ್ದಾರೆ. ಮಹಿಳೆಯ ಹೊಟ್ಟೆ ಊದುಕೊಂಡಿದ್ದು, ಇದರಿಂದ ಅನುಮಾನಗೊಂಡು ಸ್ಕ್ಯಾನಿಂಗ್ ನಡೆಸಿದ ವೇಳೆ ಮಹಿಳೆಯ ಗರ್ಭದಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ಪತ್ತೆಯಾಗಿದೆ.
ಮಹಿಳೆಯ ಹೊಟ್ಟೆಯಲ್ಲಿ ಬಾರಿ ಗ್ರಾತದ ಕ್ಯಾನ್ಸರ್ ಗೆಡ್ಡೆಯನ್ನು ತ್ವರಿತವಾಗಿ ಹೊರ ತೆಗೆಯದಿದ್ದರೆ ಮಹಿಳೆಯ ಜೀವಕ್ಕೆ ಅಪಾಯವಿದೆ ಎಂಬುದನ್ನು ಮನಗಂಡ ವೈದ್ಯರರ ತಂಡ ತಡ ಮಾಡದೆ ತ್ವರಿತವಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು ಎಂದು ಆಸ್ಪತ್ರೆಯ ಅರವಳಿಕೆ ತಜ್ಞ ಡಾ. ಮನೋಜಂ ಮಾಹಿತಿ ನೀಡಿದರು.
ಈ ಹಿಂದೆ ಚನ್ನಪಟ್ಟಣದಲ್ಲೇ ಒಮ್ಮೆ ಸುಮಾರು ಎಂಟುಕಾಲು ಕೆ.ಜಿ. ತೂಕದ ಕ್ಯಾನ್ಸರ್ ಗಡ್ಡೆಯೊಂದನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಯಶ್ವಸಿಯಾಗಿ ಹೊರತೆಗೆಯಲಾಗಿತ್ತು. ಅಲ್ಲದೇ ಕೆಲ ತಿಂಗಳ ಹಿಂದೆ ಕೂಡ ಜಿಲ್ಲೆಯ ಮಾಗಡಿಯ ಪಟ್ಟಣದ ಆಸ್ಪತ್ರೆಯಲ್ಲಿ ಸುಮಾರು ಎಂಟು ಮುಕ್ಕಾಲು ಕೆ.ಜಿ. ತೂಕದ ಕ್ಯಾನ್ಸರ್ ಗಡ್ಡೆಯನ್ನು ಹೊರತೆಗೆಯಲಾಗಿತ್ತು.
ಜಿಲ್ಲೆಯಲ್ಲಿ 10 ಕೆ.ಜಿ.ಗೂ ಹೆಚ್ಚು ತೂಕವಿರುವ ಅಂಡಾಶಯದ ಕ್ಯಾನ್ಸರ್ ಗಡ್ಡೆಯನ್ನು ಯಶಸ್ವಿಯಾಗಿ ಅಪರೇಷನ್ ಮೂಲಕ ಹೊರತೆಗೆದ ಘಟನೆ ಇದೇ ಮೊದಲು ಎಂದು ಡಾ. ಮನೋಜಂ ಮಾಹಿತಿ ಹಂಚಿಕೊಂಡರು. ಸದ್ಯ ಮಹಿಳೆ ಆರೋಗ್ಯವಾಗಿದ್ದು, ಬೃಹತ್ ಗಾತ್ರದ ಗೆಡ್ಡೆಯನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರತೆಗೆದಿರುವ ವೈದ್ಯರಿಗೆ ಮಹಿಳೆಯ ಕುಟುಂಬಸ್ಥರು ಧನ್ಯವಾದ ಸಲ್ಲಿಸಿದ್ದಾರೆ.












Click it and Unblock the Notifications