ವಿಜೃಂಭಣೆಯಿಂದ ಜರುಗಿದ ಸಂಜೀವರಾಯ ಸ್ವಾಮಿ ಜಾತ್ರೆ: ನೂರಾರು ನವದಂಪತಿ ಭಾಗಿ
ರಾಮನಗರ, ಜುಲೈ 01: ನಂಬಿದವರ ಕಾಮಧೇನು, ಆರಾಧಿಸುವವರ ಕಲ್ಪವೃಕ್ಷ ಎನಿಸಿರುವ ಪುರಾಣ ಪ್ರಸಿದ್ಧ ದೇವರಹೊಸಹಳ್ಳಿ ಗ್ರಾಮದ ಸಂಜೀವರಾಯಸ್ವಾಮಿ ಜಾತ್ರಾಮಹೋತ್ಸವ ಹಾಗೂ ಶ್ರೀಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ಜರುಗಿತು. 12:30 ರಿಂದ 1:10ರ ಶುಭ ಕನ್ಯಾ ಲಗ್ನದಲ್ಲಿ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು.
ರಥೋತ್ಸವ ಪ್ರಯುಕ್ತ ಮುಂಜಾನೆಯಿಂದಲೇ ನಾನಾ ಪೂಜಾ ಕೈಕರ್ಯಗಳ ಜೊತೆಗೆ ತೋಮಾಲಸೇವೆ, ವೈಕುಂಠ ಸೇವಾ ದರ್ಶನ ಹಾಗೂ ಲಕ್ಷ ದೀಪೋತ್ಸವ ಹಾಗೂ ಸಂಜೆ ಡೋಲೋತ್ಸವ, ದೀಪೋತ್ಸವ, ತೇಪೋತ್ಸವ ಹಾಗೂ ಬಾಣಬಿರುಸಿನ ಪ್ರದರ್ಶನ ಹಮ್ಮಿಕೊಳ್ಳಾಗಿದೆ.

ವ್ಯಾಸ ಮಹರ್ಷಿಗಳು ತಪಸ್ಸು ಮಾಡಿ ಬೆಂಕಿಯ ಕೆಂಡದಲ್ಲಿ ಹನುಮ ದೇವರ ಮೂರ್ತಿಯನ್ನು ಪ್ರತಿಷ್ಟಾಪಿಸಿದರೆಂಬ ಪುರಾಣದ ಹಿನ್ನೆಲೆ ಇರುವ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ದೇವರಹೊಸಳ್ಳಿ ಸಂಜೀವರಾಯಸ್ವಾಮಿ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ಆಷಾಢ ಮಾಸದಲ್ಲಿ ನಡೆಯುವ ಬ್ರಹ್ಮರಥೋತ್ಸವದಲ್ಲಿ ಹೊಸದಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ನವದಂಪತಿ ಸಂಜೀವರಾಯ ಸ್ವಾಮಿಯ ದರ್ಶನ ಪಡೆದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆಂಬ ವಾಡಿಕೆ ಇದೆ.
ಕಳೆದ ಕೆಲ ವರ್ಷಗಳಿಂದ ಮಹಾಮಾರಿ ಸಮಯದಲ್ಲಿ ಜಾತ್ರಾಮಹೋತ್ಸವ ನಡೆದಿರಲ್ಲಿಲ್ಲ. ಈ ಬಾರಿ ಕೊರೊನಾ ಮುಕ್ತವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ನೂರಾರು ಮಂದಿ ನವ ದಂಪತಿ ಆಗಮಿಸಿ ಅದ್ಧೂರಿ ಬ್ರಹ್ಮರಥೋತ್ಸವದಲ್ಲಿ ಭಾಗವಹಿಸಿ ಸಂಜೀವರಾಯನ ಕೃಪೆಗೆ ಪಾತ್ರರಾದರು.

ಸಾಕಷ್ಟು ವೈಶಿಷ್ಟ್ಯತೆಗಳಿಂದ ಕೂಡಿರುವ ದೇವರಹೊಸಹಳ್ಳಿಯ ಸಂಜೀವರಾಯಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಗೋಪೂಜೆ, ಅಶ್ವಪೂಜೆ ಮತ್ತು ಗಜಪೂಜೆ ನೆರವೆರಿತು. ಸಾಲಿಗ್ರಾಮದ ಹರಳುಗಳಿಂದ ಹನುಮ ವಿಗ್ರಹ ಪ್ರತಿಷ್ಟಾಪನೆಯಾಗಿದ್ದು ವ್ಯಾಸ ಮಹರ್ಷಿಗಳು ಬೆಂಕಿಯ ಕೆಂಡದ ಮೂಲಕ ಹನುಮನ ರೂಪ ನೀಡಿದ್ದಾರೆಂಬುದು ಪುರಾಣದ ಕಥೆ ಕೂಡ ಇದೆ.
ದೇವರಹೊಸಳ್ಳಿಯ ಸಂಜೀವರಾಯಸ್ವಾಮಿ ಮೂರ್ತಿ ಸೌಮ್ಯವಾಗಿದೆ. ಇದರಿಂದ ಸಂಜೀವರಾಯಸ್ವಾಮಿಯ ಮೊರೆ ಹೋದರೆ ಮನುಷ್ಯನ ಮಾನಸಿಕ ಮತ್ತು ದೈಹಿಕ ರೋಗಗಳು ನಿವಾರಣೆಯಾಗುತ್ತದೆಂಬ ಪ್ರತೀತಿ ಇದೆ. ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಪ್ರತಿವರ್ಷ ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಮಂದಿ ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿಭಾವಗಳಿಂದ ದೇವರನ್ನು ಪೂಜಿಸುತ್ತಾರೆ.
ಪೂರ್ವಿಕರ ಕಾಲದಿಂದಲೂ ಸಂಜೀವರಾಯಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ನವ ದಂಪಂತಿ ಭಕ್ತಿ ಭಾವ ಶ್ರದ್ದೆಯಿಂದ ಪೂಜೆ ಸಲ್ಲಿಸುವುದು ವಾಡಿಕೆ. ದೇವರ ದರ್ಶನದಿಂದ ಮಾನಸಿಕವಾಗಿ ನೆಮ್ಮದಿ ಸಿಗುತ್ತಿದೆ ಮತ್ತು ಭಕ್ತರ ಇಷ್ಟಾರ್ಥ ಸಿದ್ದಿಯಾಗುತ್ತದೆಂಬ ನಂಬಿಕೆ ಆಸ್ತಿಕರಲ್ಲಿ ಮನೆ ಮಾಡಿದೆ.
ಮುಖ್ಯವಾಗಿ ಆಷಾಡ ಮಾಸದಲ್ಲಿ ನವದಂಪತಿ ಸಂಜೀವರಾಯಸ್ವಾಮಿ ದೇವರ ದರ್ಶನ ಪಡೆದರೆ ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ, ಸಮೃದ್ದಿ, ನೆಮ್ಮದಿ ನೆಲೆಸುತ್ತದೆಂಬ ನಂಬಿಕೆ ಇದೆ. ವಾಡಿಕೆಯಂತೆ ಈ ಬಾರಿ ಕೂಡ ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ ನವ ದಂಪತಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ತಮ್ಮ ಮೈವಾಹಿಕ ಜೀವನ ಸುಖಕರವಾಗಿರಲೆಂದು ದೇವರಲ್ಲಿ ತಮ್ಮ ಮನದ ಬಯಕೆ ನಿವೇದಿಸಿಕೊಂಡರು.












Click it and Unblock the Notifications