ಗ್ರಾಮ ಲೆಕ್ಕಾಧಿಕಾರಿ ಹತ್ಯೆ, ಲಾರಿ ಚಾಲಕನ ಬಂಧನ
ರಾಯಚೂರು, ಡಿಸೆಂಬರ್ 23 : ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಾಟೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ರಂಗಪ್ಪ ಎಂಬುವವರನ್ನು ಬಂಧಿಸಲಾಗಿದೆ. ಮರಳು ಲಾರಿ ಡಿಕ್ಕಿ ಹೊಡೆಸಿ ಗ್ರಾಮ ಲೆಕ್ಕಾಧಿಕಾರಿ ಹತ್ಯೆ ಮಾಡಲಾಗಿತ್ತು.
ಶರಣಯ್ಯ ಗೌಡ ಎಂಬುವವರಿಗೆ ಸೇರಿದ ಲಾರಿಯನ್ನು ರಂಗಪ್ಪ ಓಡಿಸುತ್ತಿದ್ದರು. ಇಫ್ರಾನ್ ಅಲಿ ನೀಡಿದ ದೂರಿನ ಅನ್ವಯ ಮಾನ್ವಿ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಚಾಲಕನನ್ನು ಬಂಧಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚೀಕಪರ್ವಿ ಗ್ರಾಮದ ಸಾಹೇಬ್ ಪಾಟೀಲ್ ಚೀಕಪರ್ವಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಶನಿವಾರ ಅವರು ಅಕ್ರಮ ಮರಳು ಸಾಗಣೆ ತಡೆಯಲು ಹೋದಾಗ ಅವರಿಗೆ ಲಾರಿಯನ್ನು ಡಿಕ್ಕಿ ಹೊಡೆಸಲಾಗಿತ್ತು.

ಮಾನ್ವಿಯ ಬುದ್ದಿನ್ನಿ ಸಮೀಪದ ತುಂಗಭದ್ರಾ ನದಿಯಿಂದ ಅಕ್ರಮವಾಗ ಮರಳು ಸಾಗಣೆ ಮಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದು, ಪರಿಶೀಲನೆ ನಡೆಸಲು ಸಾಹೇಬ್ ಪಾಟೀಲ್ ಹೋಗಿದ್ದರು. ಆಗ ಅವರ ಎರಡು ಕಾಲುಗಳ ಮೇಲೆ ಲಾರಿ ಹತ್ತಿಸಲಾಗಿತ್ತು.
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು.












Click it and Unblock the Notifications