ರಾಯಚೂರಿನಲ್ಲಿ ಸಾವಿರಾರು ಮೀನುಗಳ ಸಾವು: ಆತಂಕ
ರಾಯಚೂರು, ಮೇ 28: ರಾಯಚೂರು ಜಿಲ್ಲೆಯ ಗಂಜಳ್ಳಿ ಗ್ರಾಮದ ಹಳ್ಳದಲ್ಲಿ ಸಾವಿರಾರು ಮೀನುಗಳು ಮೃತಪಟ್ಟಿವೆ.
ಇದರಿಂದಾಗಿ ಹಳ್ಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಹಿಸಿಕೊಳ್ಳಲಾಗದ ದುರ್ವಾಸನೆಯೂ ಹೆಚ್ಚಳವಾಗಿದೆ. ಹಳ್ಳದಲ್ಲಿ ಸಾವಿರಾರು ಮೀನುಗಳು ಇದ್ದಕ್ಕಿದ್ದಂತೆ ಸಾವನ್ನಪಿದ್ದು ಗಂಜಳ್ಳಿ ಗ್ರಾಮದವರೆಗೂ ಕೊಳಕು ವಾಸನೆ ಬೀರುತ್ತಿದೆ. ಹಳ್ಳದ ಮಾರ್ಗದಿಂದ ಶಕ್ತಿನಗರಕ್ಕೆ ಬರುವವರು ಮೂಗು ಮುಚ್ಚಿಕೊಂಡು ಬರುವಂತಾಗಿದೆ.
ಸತ್ತು ಬಿದ್ದಿರುವ ಮೀನಿನ ರಾಶಿಯ ಚಿತ್ರಗಳು ಹಾಗೂ ವಿಡಿಯೊ ತುಣಕು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. ಮರಣ ಮೃದಂಗಕ್ಕೆ ತುತ್ತಾದ ಮೀನುಗಳನ್ನು ನೋಡಿದವರ ಕಣ್ಣಾಲಿ ಕೂಡ ಒದ್ದೆಯಾಗಿದೆ. ಅಲ್ಲದೆ ಇದನ್ನು ಕಣ್ಣಾರೆ ನೋಡಿದ ಗ್ರಾಮಗಳ ಕೆಲವರು ಗಾಬರಿಗೊಂಡಿದ್ದಾರೆ. ಹಲವು ಬಾರಿ ಇದೇ ರೀತಿ ಸಾವಿರಾರು ಮೀನುಗಳು ಹಳ್ಳದಲ್ಲಿ ಮೃತಪಟ್ಟಿದ್ದವು. ವಡ್ಲೂರು ಕೈಗಾರಿಕಾ ಪ್ರದೇಶದ ಕಂಪನಿಗಳಿಂದ ರಾಸಾಯನಿಕ ಮಲೀನ ನೀರು ಸೇರಿಕೊಂಡು ಬಹುತೇಕ ಹಳ್ಳ ಕಲುಷಿತಗೊಂಡಿದೆ.
ಮೀನುಗಳು ಸಾವನ್ನಪ್ಪಲು ಇದು ಕೂಡ ಕಾರಣವೇ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಕಲುಷಿತ ನೀರು, ವಿಷಕಾರಕ ರಾಸಾಯನಿಕ ಜತೆಗೆ ಈಚೆಗೆ ಸುರಿದ ಮಳೆಯಿಂದಾಗಿ ಜೀವವಾಯುವಿನ ಕೊರತೆ ಉಂಟಾಗಿದೆ. ಇದರಿಂದ ಉಸಿರಾಟದ ತೊಂದರೆಯಿಂದಲೂ ಮೃತಪಟ್ಟಿರಬಹುದು ಎಂದು ಕೆಲವರು ಶಂಕೆ ವ್ಯಕ್ತಪಡಿಸಿದ್ದಾರೆ.

ಯಾವ ಕಾರಣಕ್ಕೆ ಮೀನು ಮೃತಪಟ್ಟಿವೆ ಎಂಬುದನ್ನು ಮೀನುಗಾರಿ ಇಲಾಖೆ ಮತ್ತು ಪರಿಸರ ಮಾಲಿನ್ಯ ಅಧಿಕಾರಿಗಳು ಪರಿಶೀಲಿಸಿ ಖಚಿತಪಡಿಸಬೇಕು. ಇದು ಕೂಡ ಸಾಂಕ್ರಾಮಿಕ ರೋಗದ ಕರಿನೆರಳನ್ನು ಸೃಷ್ಟಿಸಿದೆ. ಅದನ್ನು ತಪ್ಪಿಸಲು ಕೂಡಲೇ ಮೀನುಗಳನ್ನು ಹೊರಗೆ ತೆಗೆಸಲು ಮುಂದಾಗಬೇಕು. ಈ ಮೂಲಕ ಇಲ್ಲಿನ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗದಂತೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಕೋರಿದ್ದಾರೆ.