Jitesh Sharma: ವೈಭವ್ ಮನೆಗೆ ಬಂದು ಪತ್ನಿಯೊಂದಿಗೆ ಮಾತಾಡ್ತಾನೆ, ಅವನು ನನ್ನ ಸೋದರ: ಜಿತೇಶ್ ಶರ್ಮಾ ಹೀಗೆ ಹೇಳಿದ್ಯಾಕೆ?
Jitesh Sharma: ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2026ರಲ್ಲಿ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಕ್ರಿಕೆಟ್ ದಿಗ್ಗಜರನ್ನೇ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಈ ನಡುವೆ ಇತ್ತೀಚೆಗಷ್ಟೇ ಆರ್‌ಸಿಬಿ ತಂಡದ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಅವರು ವೈಭವ್ ಪ್ರೊಫೆಷನಲ್ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದು, ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್, ಬ್ಯಾಟರ್ ಜಿತೇಶ್ ಶರ್ಮಾ ಅವರು, ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ತಮಾಷೆಯಾಗಿ ಅನ್ ಪ್ರೊಫೆಷನಲ್ ಎಂದು ಕರೆದಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಹೀಗೆ ಕರೆದಿದ್ದು ಯಾಕೆ ಎನ್ನುವ ಸ್ಪಷ್ಟನೆ ನೀಡಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಆರ್‌ಸಿಬಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಹೇಳಿದ್ದೇನು?
ವೈಭವ್ ಸೂರ್ಯವಂಶಿ ಕೇವಲ 15 ವರ್ಷದ ಬಾಲಕನಾಗಿದ್ದು, ಐಸ್‌ಕ್ರೀಮ್ ತಿನ್ನುವುದು, ಕಾರ್ಟೂನ್ ನೋಡುವುದು ಮತ್ತು ಹದಿಹರೆಯದ ಸಾಮಾನ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಜಿತೇಶ್ ಈ ರೀತಿ ಉಲ್ಲೇಖಿಸಿದ್ದರು. ಜಿತೇಶ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಣ್ಣ ಮಟ್ಟದ ವಿವಾದವನ್ನು ಸೃಷ್ಟಿಸಿತ್ತು. ಒಬ್ಬ ಸಹ ಆಟಗಾರನ ಬಗ್ಗೆ ಇಂತಹ ಪದ ಬಳಸಿರುವುದು ಸರಿಯೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು.
ಈ ಬಗ್ಗೆ ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಸ್ಪಷ್ಟನೆ ನೀಡಿದ ಜಿತೇಶ್ ಶರ್ಮಾ ಅವರು, "ಆ ಪದವನ್ನು ಕೇವಲ ತಮಾಷೆಗಾಗಿ ಮತ್ತು ನಮ್ಮ ನಡುವಿನ ಆಪ್ತ ಬಾಂಧವ್ಯದ ಹಿನ್ನೆಲೆಯಲ್ಲಿ ಬಳಸಲಾಗಿದೆ. ವೈಭವ್ ಅವರ ವಯಸ್ಸು ಮತ್ತು ಅವರ ಮುಗ್ಧತೆಯನ್ನು ಗಮನದಲ್ಲಿಟ್ಟುಕೊಂಡು ಆ ರೀತಿ ಹೇಳಿದ್ದೇನೆ," ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ವೈಭವ್ ನನ್ನ ಆಪ್ತ ಗೆಳೆಯ ಎಂದ ಜಿತೇಶ್
"ವೈಭವ್ ನನ್ನ ಅತ್ಯಂತ ಆಪ್ತ ಗೆಳೆಯ. ನಾವು ತುಂಬಾ ಆತ್ಮೀಯರಾಗಿದ್ದೇವೆ, ಹಾಗಾಗಿ ನಾನು ಅವನನ್ನು ಏನೆಂದು ಬೇಕಾದರೂ ಕರೆಯಬಲ್ಲೆ," ಎಂದು ಹೇಳಿದ್ದಾರೆ. ಜಿತೇಶ್ ಶರ್ಮಾ ಅವರು ಈ ಹೇಳಿಕೆಯನ್ನು ಎಬಿ ಡಿವಿಲಿಯರ್ಸ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಸಂಭಾಷಣೆಯ ಸಂದರ್ಭದಲ್ಲಿ ನೀಡಿದ್ದರು. ಜಿತೇಶ್ ಪ್ರಕಾರ, ಆ ಪದವನ್ನು ಯಾವುದೇ ನಕಾರಾತ್ಮಕ ಅರ್ಥದಲ್ಲಿ ಬಳಸಿಲ್ಲ, ಬದಲಿಗೆ ಇಬ್ಬರ ನಡುವಿನ ಉತ್ತಮ ಸ್ನೇಹ ಮತ್ತು ವೈಭವ್ ಅವರ ಮುಗ್ಧತೆಯಿಂದ ತಮಾಷೆಯಾಗಿ ಬಳಸಲಾಗಿದೆ.
ವೈಭವ್ ಪ್ರೊಫೆಷನಲ್ ಬಗ್ಗೆ ಜಿತೇಶ್ ಹೇಳಿದ್ದೇನು?
"ಎಬಿ ಡಿವಿಲಿಯರ್ಸ್ ಅವರು ಯಾವ ಯುವ ಆಟಗಾರ ಭಾರತದ ಸ್ಟಾರ್ ಅಥವಾ ಶ್ರೇಷ್ಠ ಆಟಗಾರನಾಗಬಲ್ಲ ಎಂದು ನನಗೆ ಪ್ರಶ್ನೆ ಕೇಳಿದರು. ಆಗ ನನ್ನ ತಕ್ಷಣದ ಉತ್ತರ ವೈಭವ್ ಸೂರ್ಯವಂಶಿ ಆಗಿತ್ತು. ಅವರು ಏಕೆ ಎಂದು ಕೇಳಿದಾಗ ನಾನು ಅವನ ಕೌಶಲ್ಯ, ಮಾನಸಿಕ ಸ್ಥಿತಿ ಮತ್ತು ಪರಿಶ್ರಮದ ಬಗ್ಗೆ ಹೇಳಿದೆ. ವೈಭವ್ ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ಪ್ರಾಬಲ್ಯ ಸಾಧಿಸಬಲ್ಲ ಮತ್ತು ಮೈದಾನದಲ್ಲಿ ತುಂಬಾ ಪ್ರೊಫೆಷನಲ್ ಆಗಿ ಕಾಣುತ್ತಾನೆ ಎಂದು ಹೇಳಿದೆ," ಅಂತಾ ಹೇಳಿದರು.
"ವೈಭವ್ ಐಸ್‌ಕ್ರೀಮ್ ಅನ್ನು ಹೆಚ್ಚಾಗಿ ತಿನ್ನುತ್ತಾನೆ. ಅವನು ನಮ್ಮ ಮನೆಗೆ ಬರುತ್ತಾನೆ, ನನ್ನ ಪತ್ನಿಯ ಜೊತೆ ತಮಾಷೆಯಾಗಿ ಮಾತನಾಡುತ್ತಾನೆ ಮತ್ತು ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ನೋಡುತ್ತಾನೆ. ನಾವು ತುಂಬಾ ಆತ್ಮೀಯರಾಗಿದ್ದೇವೆ. ಅವನು ನನಗೆ ನನ್ನ ಕಿರಿಯ ತಮ್ಮನಿದ್ದಂತೆ," ಎಂದು ಹೇಳಿದರು. ಅಲ್ಲದೆ, "ಯಾವುದೇ ಒತ್ತಡವಿಲ್ಲದೆ ಆಟವನ್ನು ಆನಂದಿಸು ಎಂದು ಅವನಿಗೆ ಸಲಹೆ ನೀಡುತ್ತಿರುತ್ತೇನೆ," ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ವೈಭವ್ ಸೂರ್ಯವಂಶಿ ಅವರನ್ನು ಟೀಕೆ ಮಾಡಲಾಗಿದೆ ಎನ್ನುವ ಆರೋಪಗಳನ್ನು ಜಿತೇಶ್ ಶರ್ಮಾ ಅವರು ತಳ್ಳಿಹಾಕುವ ಮೂಲಕ ಇಬ್ಬರ ಬಾಂಧವ್ಯ ಎಂತಹದ್ದು ಎಂದು ವಿವರಿಸಿದ್ದಾರೆ.












Click it and Unblock the Notifications