ರಾಯಚೂರು: ಮಾನ್ವಿ ರೈತರಿಗೆ ಬರಬೇಕಿದೆ 13 ಕೋಟಿ ರೂ ಜೋಳದ ಬಾಕಿ ಹಣ!
ರಾಯಚೂರು, ಜುಲೈ 03: ಮುಂಗಾರು ಬಿತ್ತನೆಗೆ ಬೀಜ, ಗೊಬ್ಬರ, ರಸಾಯನಿಕ ಗೊಬ್ಬರ ಖರೀದಿಗೆ ಕೈಯಲ್ಲಿ ಹಣ ಇಲ್ಲದೇ ರೈತರಿಗೆ ಸಾಲ ಮಾಡುವ ಪರಿಸ್ಥಿತಿ ಬಂದಿದೆ. ರಾಯಚೂರು ಜಿಲ್ಲಾ ರೈತರಿಗೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಿಂದ ಜೋಳ ಖರೀದಿಸಿದ ಹಣ ಬಾಕಿ ಬರಬೇಕಿದೆ. ಸರ್ಕಾರದ ವಿಳಂಬ ನೀತಿಯಿಂದಾಗಿ ಬಿತ್ತನೆ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿರುವುದು ಕಂಡುಬಂದಿದೆ.
ರಾಯಚೂರು ಜಿಲ್ಲೆಯಲ್ಲಿ ಜೋಳ ಮಾರಿದ 1, 519 ರೈತರಿಗೆ 21.30 ಲಕ್ಷ ಬಾಕಿ ಇದ್ದು, ಸಿಂಧನೂರಿನಲ್ಲಿ 8,864 ರೈತರಿಗೆ 121.55 ಲಕ್ಷ ರೂ. ಪಾವತಿಯಾಗಿದ್ದು, 307 ರೈತರಿಗೆ 5.41 ಕೋಟಿ ರೂ. ಪಾವತಿಸಬೇಕಿದೆ. ಲಿಂಗಸುಗೂರಿನಲ್ಲಿ 111 ರೈತರಿಗೆ 1.40 ಕೋಟಿ ರೂ. ನೀಡಲಾಗಿದ್ದು, 187 ರೈತರಿಗೆ 1.84 ಕೋಟಿ ರೂ. ಪಾವತಿಯಾಗಬೇಕು. ಮಾನ್ವಿಯಲ್ಲಿ 1,683 ರೈತರಿಗೆ 23 ಕೋಟಿ ರೂ. ಪಾವತಿಸಿದ್ದು, ಇನ್ನೂ 1065 ಜನಕ್ಕೆ 13 ಕೋಟಿ ಬಾಕಿ ಇದೆ.

ಏಪ್ರಿಲ್ 30ರವರೆಗೆ ಕ್ವಿಂಟಲ್‌ಗೆ ಹೈಬ್ರಿಡ್ ಜೋಳಕ್ಕೆ 2, 970 ರೂನಂತೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಿಂದ ಖರೀದಿಸಲಾಗಿದೆ. ಎರಡು ತಿಂಗಳು ಕಳೆದರೂ ಜೋಳದ ಹಣ ಬಂದಿಲ್ಲ. ಕೂಡಲೇ ಬಾಕಿ ನೀಡಿದರೆ ಮುಂದಿನ ಕೃಷಿ ಚಟುವಟಿಕೆಗೆ ಸಹಕಾರಿಯಾಗಲಿದೆ. ಇಲ್ಲವಾದಲ್ಲಿ ಬಿತ್ತನೆ ಬೀಜ, ಗೊಬ್ಬರ, ಗಳೇವು ತೆಗೆಯಲು ಸಾಲ ಮಾಡಬೇಕಿದೆ. ಮುಂಗಾರು ಬಿತ್ತನೆ ಪ್ರಾರಂಭವಾಗಿದ್ದು, ಮಳೆಯಿಲ್ಲದೆ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಇನ್ನೊಂದೆಡೆ ಬೆಳೆದ ಜೋಳ ಮಾರಿದರೂ ಕೈಗೆ ಹಣ ಬರುತ್ತಿಲ್ಲ. ಭೂಮಿ ಹದ ಮಾಡಿಕೊಳ್ಳಲು ಟ್ರಾಕ್ಟರ್ ಬಾಡಿಗೆ, ಡಿಸೇಲ್, ಪೆಟ್ರೋಲ್‌ಗೆ ಹಣ ಇಲ್ಲದಂತಾಗಿದ್ದು ರೈತರು ಪರದಾಡುವಂತಾಗಿದೆ. ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಗೊಬ್ಬರ ಖರೀದಿಸಬೇಕಾಗಿದೆ. ಕೆಲ ರೈತರು ಸಾಲ ಮಾಡುತ್ತಿದ್ದಾರೆ. ಇನ್ನೂ ಕೆಲ ರೈತರು ದುಪ್ಪಟ್ಟು ದರಕ್ಕೆ ರಾಸಾಯನಿಕ ಅಂಗಡಿ ಮಾಲೀಕರಲ್ಲಿಯೇ ಉದ್ರಿ ಖರೀದಿ ಮಾಡುತ್ತಿದ್ದಾರೆ.
ಸರ್ಕಾರದಿಂದ ಬರಬೇಕಾಗಿದ್ದ ಹಣ ಬಿಡುಗಡೆಯಾಗಿಲ್ಲ. ಕಳೆದ ವಾರ ಕ್ಯಾಬಿನೆಟ್ ಸಬ್ ಕಮಿಟಿಯಿಂದ ಮಂಡಳಿಯ ಆವರ್ತನಿಧಿ ಬಳಸಿಕೊಂಡು ರೈತರಿಗೆ ಹಣ ಪಾವತಿಸಲು ಪರವಾನಗಿ ಪಡೆದಿದ್ದು, ಹಣ ಬಂದಿದೆ. ಆದರೆ, ಹಣ ಬಿಡುಗಡೆ ಮಾಡಬೇಕೆನ್ನುವಷ್ಟರಲ್ಲಿಯೇ ಮಂಡಳಿಯ ಕೃಷಿ ಮಾರಾಟ ಇಲಾಖೆ ವ್ಯವಸ್ಥಾಪಕ ನಿರ್ದೇಶಕರು ಬದಲಾವಣೆಯಾಗಿದ್ದು ವಿಳಂಬಕ್ಕೆ ಕಾರಣವಾಗಿದೆ.
ಜೋಳ ಮಾರಿ ಎರಡು ತಿಂಗಳಾಗಿದ್ದು ಇದುವರೆಗೂ ಹಣ ಬಂದಿಲ್ಲ. ಮುಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಬೇಕಾಗಿದ್ದು, ಬಿತ್ತನೆ ಬೀಜ, ಗೊಬ್ಬರ, ಟ್ರಾಕ್ಟರ್ ಬಾಡಿಗೆ ನೀಡಲು ಕೈಯಲ್ಲಿ ಹಣ ಇಲ್ಲದಂತಾಗಿದೆ. ಸಾಲ ಮಾಡುತ್ತಿದ್ದೇವೆ. ಶೀಘ್ರ ಹಣ ನೀಡಿದರೆ ಕೃಷಿ ಚಟುವಟಿಕೆಗಳ ಬಳಕೆಗೆ ಸಹಕಾರಿಯಾಗಲಿದೆ ಎಂದು ಮಾನ್ವಿ ರೈತರು ಮನವಿ ಮಾಡಿಕೊಂಡಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಜೋಳದ ಬಾಕಿ 21 ಕೋಟಿ ರೂಪಾಯಿ ಇದೆ. ಮಾನ್ವಿ ತಾಲೂಕಿಗೆ 13 ಕೋಟಿ ರೂಪಾಯಿ ಬಾಕಿಯಿದ್ದು, ಸರಕಾರದಿಂದ ಹಣ ಬಂದಿಲ್ಲ. ನಮ್ಮಲ್ಲಿನ ಆವರ್ತನಿಧಿ ಬಳಸಿಕೊಳ್ಳಲು ಆದೇಶ ಬಂದಿದ್ದು, ಮುಂದಿನ ವಾರದಲ್ಲಿ ರೈತರಿಗೆ ಹಣ ಪಾವತಿಸಲಾಗುವುದು ಎಂದು ರಾಯಚೂರು ಕ.ರಾ.ಕೃ.ಮಾ.ಮಂ, ಜಿಲ್ಲಾ ವ್ಯವಸ್ಥಾಪಕ ಶಿವಬಸವರಾಜ ಭರವಸೆ ನೀಡಿದ್ದಾರೆ.












Click it and Unblock the Notifications