Raichur: ಬಿಸಿಲ ಬಿಸಿಗೆ ಹೈರಾಣಾದ ರಾಜನೂರಿನ ಮಂದಿ
ರಾಯಚೂರು ಮಾರ್ಚ್ 26: ಕಲ್ಯಾಣ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚಾಗುತ್ತಿದೆ. ಬೇಸಿಗೆ ಕಾಲ ಬಂತು ಅಂದರೆ ಸಾಕು ಕಲ್ಯಾಣ ಕರ್ನಾಟಕ ಭಾಗದ ಜನರ ಸಮಸ್ಯೆಗಳು ಹೇಳ ತೀರದ್ದು. ಒಂದು ಕಡೆ ಕುಡಿಯುವ ನೀರಿನ ಸಮಸ್ಯೆ ಆದರೆ, ಮತ್ತೊಂದು ಕಡೆ ಬಿಸಿಲ ತಾಪಮಾನ ಹೆಚ್ಚಾಗುತ್ತದೆ. ಹಾಗಾದರೆ ಕಲ್ಯಾಣ ಕರ್ನಾಟಕದಲ್ಲಿ ಬಿಸಿಲ ಝಳ ಎಷ್ಟಿದೆ? ಈ ಬಿಸಿಲಿನಿಂದ ಅಲ್ಲಿನ ಜನರು ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.
ಹೌದು.. ಬಿಸಿಲಿನ ತಾಪಮಾನಕ್ಕೆ ರಾಯಚೂರು ಮಂದಿ ತತ್ತರಿಸಿ ಹೋಗಿದ್ದಾರೆ. ಹೇಳಿಕೇಳಿ ರಾಯಚೂರಿನಲ್ಲಿ ತಾಪಮಾನ ಇಳಿಯುವ ಮಾತೇ ಇಲ್ಲ. ಒಂದೆರೆಡು ದಿನ ಅಲ್ಲಲ್ಲಿ ಸ್ವಲ್ಪ ಮಳೆಯಾಗಿದ್ದು ಬಿಟ್ಟರೆ ಬಿಸಿಲಿನ ಝಳ ಎಂದಿನಂತೆಯೇ ಇರುತ್ತದೆ. ಪ್ರಸ್ತುತ ರಾಯಚೂರು ಜಿಲ್ಲೆಯಲ್ಲಿ ಸರಾಸರಿ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇದೆ. ಈ ಬಿಸಿಲಿನ ಝಳಕ್ಕೆ ರಾಜನೂರಿನ ಮಂದಿ ಹೈರಾಣಾಗಿ ಹೋಗಿದ್ದಾರೆ.

ಬಿಸಿಲು ಹೆಚ್ಚಾಗುತ್ತಿದ್ದಂತೆ ಜನ ಮನೆ ಬಿಟ್ಟು ಹೊರ ಬರಲು ಭಯ ಪಡುತ್ತಿದ್ದಾರೆ. ಅಲ್ಲದೆ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಲ್ಲಬೇಕಾದ ಅನಿವಾರ್ಯತೆಗೆ ಹೈರಾಣಾಗಿದ್ದಾರೆ. ಇನ್ನೂ ಮಧ್ಯಾಹ್ನದ ವೇಳೆ ಸರ್ಕಾರಿ ಕಚೇರಿಗಳಿಗೆ ಹೋಗುವವರು ನೆರಳಿಗಾಗಿ ಸ್ಥಳ ಹುಡುಕಾಡುವಂತ ಸ್ಥಿತಿ ಇದೆ. ಇನ್ನೂ ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಜನ ಮುಂದೆ ಸಾಗುತ್ತಿರುವ ದೃಶ್ಯಗಳು ರಾಯಚೂರಿನಲ್ಲಿ ಸಾಮಾನ್ಯವಾಗಿವೆ.
ಇನ್ನೂ ಕೆಲ ಪೆಟ್ರೋಲ್ ಬಂಕ್ ಅವರು ತಾವೇ ಸ್ವತ: ಗ್ರಾಹಕರಿಗಾಗಿ ನೆರಳಿನ ಪರದೆಗಳನ್ನು ಹಾಕಿದ್ದಾರೆ. ಆದರೆ ಜನರಿಗೆ ನೆರಳಿನ ವ್ಯವಸ್ಥೆ ಮಾಡಿ ಎಂದು ರಾಯಚೂರು ಜಿಲ್ಲಾಡಳಿತ ಮನವಿ ಮಾಡಿದರೂ ಕೂಡ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನೆರಳಿನ ವ್ಯವಸ್ಥೆ ಮಾಡಿಕೊಳ್ಳುತ್ತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡುತ್ತಿಲ್ಲ ಎಂದು ಜನ ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಜಿಲ್ಲಾಡಳಿತ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನೆರಳಿನ ಪರದೆ ವ್ಯವಸ್ಥೆ ಮಾಡದೇ ಇದ್ದರೂ ಕೂಡ ಸರ್ಕಾರ ಕಚೇರಿಗಳ ಸಮಯ ಬದಲಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಲಾಗಿದೆ. ಬೆಳಿಗ್ಗೆ 8 ರಿಂದ ಮಧ್ಯಾಹ್ನ 1:30ರವರೆಗೆ ಕಚೇರಿ ಸಮಯವನ್ನು ನಿಗಧಿ ಮಾಡಲಿಕ್ಕೆ ಶಿಫಾರಸ್ಸು ಮಾಡಿ ಎಂದು ಮನವಿ ಮಾಡಲಾಗಿದೆ.
ಕೊಪ್ಪಳದಲ್ಲಿ ಹೆಚ್ಚಿದ ತಾಪಮಾನ
ಬೇಸಿಗೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಊಹಿಸಿಕೊಳ್ಳಲು ಸಾಧ್ಯವಾಗದಷ್ಟು ಬಿಸಿಲು ಹೆಚ್ಚಾಗಿರುತ್ತದೆ. ಬೆಳಗ್ಗೆ 9 ಗಂಟೆಯ ನಂತರ ಜನರು ಮನೆ ಬಿಟ್ಟು ಹೊರಬರಲು ಕೂಡ ಭಯ ಪಡುತ್ತಾರೆ. ಕೊಪ್ಪಳದಲ್ಲೂ ಇದೇ ಸ್ಥಿತಿ ಇದೆ. ಜನ ಮನೆಯಿಂದ ಹೊರ ಬಂದರೆ ಇಲ್ಲಿನ ಟ್ರಾಫಿಕ್ ಸಿಗ್ನಲ್‌ಗಳಿಂದ ಕ್ರಾಸ್ ಆಗಲುಡ ಭಯ ಪಡುತ್ತಾರೆ. ಯಾಕೆಂದರೆ ಇಲ್ಲಿಂದ ಪಾಸ್ ಮಾಡುವುದೇ ದೊಡ್ಡ ಸಾಹಸವಾಗಿಬಿಟ್ಟಿದೆ. ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಒಂದುವರೆ ಎರಡು ನಿಮಿಷ ನಿಲ್ಲುವುದಕ್ಕೂ ಕಷ್ಟವಾಗುವಂತಹ ಸ್ಥಿತಿ ಇದೆ.
ಗ್ರೀನ್ ಸಿಗ್ನಲ್ ಬರುವವರೆಗೂ ನಿಂತ ವಾಹನ ಸವಾರರು ಹಾಗೂ ಪಾದಚಾರಿಗಳು ಬಿಸಿಲಿಗೆ ಕುಸಿದು ಬೀಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನೆರಳಿನ ಪರದೆಯನ್ನು ಹಾಕಿ ಎಂದು ಜಿಲ್ಲಾಡಳಿತಕ್ಕೆ ಜನ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಒಟ್ಟಾರೆ ಬೇಸಿಗೆ ಬಂತು ಅಂದರೆ ಕಲ್ಯಾಣ ಕರ್ನಾಟಕದ ಜನರ ಗೋಳು ಹೇಳ ತೀರದ್ದಾಗುತ್ತದೆ. ಇದು ಈ ವರ್ಷಕ್ಕೆ ಮಾತ್ರ ಸೀಮಿತ ಅಲ್ಲ ಈ ಹಿಂದೆ ಕೂಡ ಇದೇ ಬಿಸಿಲು ಇತ್ತು. ಆದರೆ ಜಿಲ್ಲಾಡಳಿತ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಇರುವುದು ಬೇಸರದ ಸಂಗತಿ.












Click it and Unblock the Notifications