ಚುನಾವಣೆ ಸಮಯದಲ್ಲಿ ರಾಯಚೂರು ಡಿವೈಎಸ್‌ಪಿ ವರ್ಗಾವಣೆ
ರಾಯಚೂರು, ಏಪ್ರಿಲ್ 08 : ಚುನಾವಣೆಗೆ ಕೆಲವು ದಿನಗಳು ಬಾಕಿ ಇರುವಾಗ ರಾಯಚೂರಿನ ಡಿವೈಎಸ್‌ಪಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಡಿವೈಎಸ್‌ಪಿ ವರ್ಗಾವಣೆ ಮಾಡಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು.
ರಾಯಚೂರಿನ ಡಿವೈಎಸ್‌ಪಿ ಹರೀಶ್ ಅವರನ್ನು ಕಲಬುರಗಿ ಜಿಲ್ಲೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಬೆಂಗಳೂರಿನ ಸಿಐಡಿ ವಿಭಾಗದ ಎಸ್.ಬದರಿನಾಥ್ ಅವರನ್ನು ಹರೀಶ್ ಅವರ ಸ್ಥಾನಕ್ಕೆ ನಿಯೋಜನೆ ಮಾಡಲಾಗಿದೆ.

ರಾಯಚೂರು ಜಿಲ್ಲಾ ಬಿಜೆಪಿ ಘಟಕ ಹರೀಶ್ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಹರೀಶ್ ಅವರು ರಾಯಚೂರಿನ ವಿವಿಧ ಕಡೆ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಅವರನ್ನು ವರ್ಗಾವಣೆ ಮಾಡಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಚುನಾವಣಾ ಆಯೋಗ ದೂರಿನ ಕುರಿತು ವಿಚಾರಣೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು. ವಿಚಾರಣೆ ಬಳಿಕ ಚುನಾವಣಾ ಆಯುಕ್ತರ ಸೂಚನೆಯಂತೆ ವರ್ಗಾವಣೆ ಮಾಡಲಾಗಿದೆ. ನಿಷ್ಪಕ್ಷಪಾತ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ.
ಮೇ12ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಮೇ 15ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಪಾದರ್ಶಕ ಚುನಾವಣೆ ನಡೆಸಲು ಆಯೋಗ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.












Click it and Unblock the Notifications