ಹೆಚ್ಚಿದ ಬೇಡಿಕೆ: ನಿರಂತರ ವಿದ್ಯುತ್ ಉತ್ಪಾದನೆಗೆ ಆರ್‌ಟಿಪಿಎಸ್ ಅಧಿಕಾರಿಗಳ ಸಿದ್ಧತೆ
ರಾಯಚೂರು ಫೆಬ್ರವರಿ 20: ರಾಜ್ಯಗೆದಲ್ಲಿ ವಿದ್ಯುತ್ ಸಮಸ್ಯೆಯಾಗದಂತೆ ರಾಯಚೂರು ಶಾಖೋತ್ಪನ್ನ ವಿದ್ಯುತ್ ಘಟಕಗಳಿಂದ ನಿರಂತರ ವಿದ್ಯುತ್ ಉತ್ಪಾದನೆಗೆ ತೊಡಗಿಸಲು ಆರ್‌ಟಿಪಿಎಸ್ ಅಧಿಕಾರಿಗಳ ತಂಡ ಸಿದ್ಧತೆ ಚುರುಕುಪಡೆದಿದೆ.
ರಾಜ್ಯದ ನಾನಾ ಜಲ ವಿದ್ಯುತ್ ಕೇಂದ್ರಗಳಲ್ಲಿ ನೀರಿನ ಅಭಾವದಿಂದ ವಿದ್ಯುತ್ ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಬೇಡಿಕೆ ಸರಿದೂಗಿಸಲು ಶಾಖೋತ್ಪನ್ನ ಕೇಂದ್ರಗಳನ್ನೇ ನೆಚ್ಚುವಂತಾಗಿದೆ. ಫೆ.18ರಂದು ತಾಂತ್ರಿಕ ಸಮಸ್ಯೆಯಿಂದಾಗಿ ಆರ್‌ಟಿಪಿಎಸ್‌ನ 210 ಮೆಗಾವ್ಯಾಟ್ 2ನೇ ವಿದ್ಯುತ್ ಘಟಕದ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ವಾರ್ಷಿಕ ನಿರ್ವಹಣೆಗಾಗಿ 3ನೇ ವಿದ್ಯುತ್ ಘಟಕದ ಉತ್ಪಾದನೆ ಬಂದ್ ಮಾಡಲಾಗಿದೆ.

2ನೇ ವಿದ್ಯುತ್ ಘಟಕದಲ್ಲಿ ಸದ್ಯ ತಾಂತ್ರಿಕ ಸಮಸ್ಯೆ ನಿವಾರಿಸಿ ಸೋಮವಾರ ಸಂಜೆಯೊಳಗೆ ಅಧಿಕಾರಿಗಳ ತಂಡ ಉತ್ಪಾದನೆಗೆ ಆರಂಭಿಸಲು ಸಿದ್ಧತೆ ಚುರುಕು ಪಡೆದಿದೆ.
ರಾಜ್ಯದಲ್ಲಿ ಈಗ 300 ಮಿಲಿಯನ್ ಯೂನಿಟ್ ವಿದ್ಯುತ್ ಬೇಡಿಕೆ ಇದೆ. ಸೋಲಾರ್ , ಪವನ್ ಗಾಳಿ ಮತ್ತು ಜಲವಿದ್ಯುತ್ ಕೇಂದ್ರಗಳಿಂದ ದೊರೆಯುತ್ತಿದ್ದ ವಿದ್ಯುತ್ ಅನ್ನೇ ಬಳಸುವ ಮೂಲಕ ಆರ್ ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಕೇಂದ್ರಗಳ ಮೇಲಿನ ಒತ್ತಡ ತಗ್ಗಿಸಲಾಗುತ್ತಿತ್ತು. ಈಗ ಜಲವಿದ್ಯುತ್ ಕೇಂದ್ರಗಳ ವಿದ್ಯುತ್ ಉತ್ಪಾದನೆ ಗಣನೀಯ ಕುಸಿದಿದೆ.ರಾಜ್ಯದ ವಿದ್ಯುತ್ ಬೇಡಿಕೆ ಸರಿದೂಗಿಸುವ ಒತ್ತಡಕ್ಕೆ ಆರ್ ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಘಟಕಗಳು ಸಿಲುಕಿವೆ.
ಆರ್‌ಟಿಪಿಎಸ್‌ನಲ್ಲಿ ಒಟ್ಟು ಎಂಟು ವಿದ್ಯುತ್ ಘಟಕಗಳಲ್ಲಿ ಸದ್ಯ 210 ಮೆಗಾವ್ಯಾಟ್ 1ನೇ ವಿದ್ಯುತ್ ಘಟಕ, 2ನೇ ಮತ್ತು 3ನೇ ವಿದ್ಯುತ್ ಘಟಕಗಳ ಉತ್ಪಾದನೆ ಸ್ಥಗಿತಗೊಂಡಿವೆ. ಇನ್ನೂಳಿದ 5 ವಿದ್ಯುತ್ ಘಟಕಗಳಿಂದ ಉತ್ಪಾದನೆ ಸೇರಿ ಒಟ್ಟು 880ಮೆಗಾ ವ್ಯಾಟ್ ಉತ್ಪಾದನೆ ಆಗುತ್ತಿದೆ. ಹಾಗೂ ಯರಮರಸ್ ಶಾಖೋತ್ಪನ್ನ ವಿದ್ಯುತ್ (ಬಿಟಿಪಿಎಸ್) ಎರಡು ಘಟಕಗಳಿಂದ 1060 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಮುಂದಿನ ಮಾರ್ಚ್ ಮತ್ತು ಎಪ್ರಿಲ್ ತಿಂಗಳಲ್ಲಿ ರಾಜ್ಯದಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚುವ ಎಲ್ಲ ಸಾಧ್ಯತೆಯಿದೆ.
ಈಗ ಸದ್ಯ ಆರ್‌ಟಿಪಿಎಸ್‌ನಲ್ಲಿ ಕಲ್ಲಿದ್ದಲು ಸಮಸ್ಯೆ ಇಲ್ಲ. 2.50 ಲಕ್ಷ ಮೆಟ್ರಿಕ್ ಟನ್ ರಷ್ಟು ಕಲ್ಲಿದ್ದಲು ಸಂಗ್ರಹವಿದೆ. ಆರ್‌ಟಿಪಿಎಸ್‌ನ ವಿದ್ಯುತ್ ಘಟಕಗಳಿಂದ 30 ಮಿಲಿಯನ್ ಯೂನಿಟ್ ರಾಜ್ಯಕ್ಕೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. 3ನೇ ವಿದ್ಯುತ್ ಘಟಕ ವಾರ್ಷಿಕ ನಿರ್ವಹಣೆಗಾಗಿ ಉತ್ಪಾದನೆ ಬಂದ್ ಮಾಡಲಾಗಿದೆ. 2ನೇ ವಿದ್ಯುತ್ ಘಟಕದ ಉತ್ಪಾದನೆ ತಾಂತ್ರಿಕ ದುರಸ್ತಿ ಕಾರ್ಯ ಮುಗಿಸಿ ಸೋಮವಾರ ಸಂಜೆಯೊಳಗೆ ಉತ್ಪಾದನೆ ಆರಂಭಿಸಲಾಗುವುದು ಎಂದು ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಸುರೇಶ್ ಬಾಬು ಅವರು ಮಾಹಿತಿ ನೀಡಿದರು.












Click it and Unblock the Notifications