ರಾಯಚೂರಿನಲ್ಲಿ ಹೆಚ್ಚಿದ ಹಸಿರು ಅಭಿರುಚಿ: ತೋಟಗಾರಿಕೆಯತ್ತ ಹಲವರ ಒಲವು
ರಾಯಚೂರು ಡಿಸೆಂಬರ್ 20: ಮನೆ ಸುತ್ತಲೂ ಕಿರು ಉದ್ಯಾನ ಹಾಗೂ ಜಮೀನುಗಳಲ್ಲಿ ಮರಗಳನ್ನು ಬೆಳೆಸುವ ಜಾಗೃತಿ ಜಿಲ್ಲೆಯ ಜನರಲ್ಲಿ ಇತ್ತೀಚೆಗೆ ವ್ಯಾಪಕವಾಗಿ ಚಿಗುರೊಡೆಯುತ್ತಿದೆ. ನಗರ ಹಾಗೂ ಪಟ್ಟಣಗಳಲ್ಲಿ ವರ್ಷದಿಂದ ವರ್ಷಕ್ಕೆ ಖಾಸಗಿ ನರ್ಸರಿಗಳು ಹೆಚ್ಚಾಗುತ್ತಿರುವುದು ಇದಕ್ಕೆ ಸಾಕ್ಷಿ.
ಸರ್ಕಾರಿ ತೋಟಗಾರಿಕೆ ಇಲಾಖೆಯಿಂದಲೂ ಸಾವಿರಾರು ಸಸಿಗಳನ್ನು ಜನರು ನಿಗದಿತ ರಿಯಾಯಿತಿ ದರದಲ್ಲಿ ಖರೀದಿಸುತ್ತಿದ್ದಾರೆ. ಮನೆಗಳ ಸುತ್ತಲೂ ಬೆಳೆಸುವುದಕ್ಕೆ ಬೇಕಾಗುವ ತರಹೇವಾರಿ ಉದ್ಯಾನ ಸಸಿಗಳನ್ನು ತೋಟಗಾರಿಕೆ ಇಲಾಖೆಯು ನರ್ಸರಿಗಳಲ್ಲಿ ಬೆಳೆಸಿ ಮಾರಾಟ ಮಾಡುತ್ತಿದೆ. ಇದಕ್ಕಾಗಿ ವಿಶೇಷ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದಾರೆ.
ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ ಬೇರೆ ಮರಗಳನ್ನು ಆಶ್ರಯಿಸಿ ಬೆಳೆಯುವ ಬಳ್ಳಿಗಳಿಗೆ, ಗುಲಾಬಿ, ದಾಸವಾಳ ಗಿಡಗಳಿಗೆ ಬೇಡಿಕೆ ಹೆಚ್ಚಾಗಿದೆ. ಇವುಗಳಲ್ಲದೆ ಮನೆ ಪಕ್ಕದಲ್ಲಿ ಹೆಚ್ಚು ಜಾಗ ಇರುವವರು, ತೋಟದ ಮನೆಗಳಿಗೆ ಮಾವು, ಸಪೋಟಾ ಸಸಿಗಳನ್ನು ಹೆಚ್ಚಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಮನೆಗಳ ಮುಂದೆ ಅಲಂಕಾರಿಕ ಗಿಡಗಳನ್ನು ಪೋಷಿಸುವುದು ಇತ್ತೀಚೆಗೆ ಅಭಿರುಚಿಯಾಗಿ ಬೆಳೆಯುತ್ತಿದೆ.
ಗ್ರಾಮೀಣ ಭಾಗದ ಯುವಕರು ಕೂಡ ಮಾವು, ಪೇರಲ, ಕರಿಬೇವು ಸೇರಿದಂತೆ ತರಹೇವಾರಿ ಸಸಿಗಳನ್ನು ಖರೀದಿಸಿ ಒಯ್ಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಪರಿಸರ ಜಾಗೃತಿ ಹೆಚ್ಚಾಗುವುದಕ್ಕೆ ಪರಿಸರ ಪರ ಸಂಘಟನೆಗಳು ಸಕ್ರಿಯವಾಗಿರುವುದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪರಿಣಾಮ ಬೀರುತ್ತಿದೆ.
ಶಾಲಾ-ಕಾಲೇಜುಗಳ ಸುತ್ತಲೂ ಸಸಿಗಳನ್ನು ನೆಟ್ಟು ಬೆಳೆಸುವ ಪರಿಪಾಠ ಶುರುವಾಗಿದೆ. ರೈತರು ಕೂಡ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳತ್ತ ವಾಲುತ್ತಿದ್ದಾರೆ. ರಾಯಚೂರಿನಲ್ಲಿ ಮಾವಿನ ತೋಟಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ.
ತೋಟಗಾರಿಕೆ ಇಲಾಖೆಯವರು ನೇರವಾಗಿ ಸಸಿಗಳನ್ನು ನೆಟ್ಟು ಬೆಳೆಸುವುದಿಲ್ಲ. ಆದರೆ ಫಲಪುಷ್ಪ ಗಿಡಗಳನ್ನು ಬೆಳೆಸುವವರಿಗೆ ಸಸಿಗಳನ್ನು ಒದಗಿಸುವುದಲ್ಲದೆ, ಅರ್ಹ ರೈತರಿಗೆ ಸಹಾಯಧನವನ್ನು ನೀಡಿ ಪ್ರೋತ್ಸಾಹಿಸುತ್ತಿದೆ.

ಇಲಾಖೆಯಿಂದ ಯಾವುದೇ ಹಣ್ಣಿನ ಸಸಿಗಳು ದೊರೆಯುತ್ತಿಲ್ಲ-ರೈತರ ಆರೋಪ
ಸಿಂಧನೂರು ತಾಲೂಕಿಗೆ ತೋಟಗಾರಿಕೆ ಇಲಾಖೆ ಇದ್ದರೂ ಇಲ್ಲದಂತಾಗಿದೆ. ಇಲ್ಲಿ ಯಾವುದೇ ಸಸಿಗಳನ್ನು ಬೆಳೆಸುವುದಿಲ್ಲ. ರೈತರಿಗೆ ಮಾರಾಟ ಮಾಡುವುದಿಲ್ಲ. 19 ಎಕರೆ ಜಮೀನು ಇದೆ. ಅದರಲ್ಲಿ ಸುಮಾರು 20 ಚಿಕ್ಕಗಿಡ ಹೊರತು ಪಡಿಸಿದರೆ ಜಾಲಿ ಗಿಡಗಳೇ ಬೆಳೆದು ನಿಂತಿವೆ. ಶಾಸಕ ವೆಂಕಟರಾವ್ ನಾಡಗೌಡರು ಹೈಟೆಕ್ ಉದ್ಯಾನವನ ನಿರ್ಮಾಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿಯಲ್ಲಿ ಸುಮಾರು ₹ 10 ಕೋಟಿ ಮಂಜೂರು ಮಾಡಿಸಿದ್ದು, ಕಾಮಗಾರಿಯನ್ನು ಪ್ರಾರಂಭಿಸಲಾಯಿತು.
ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ಕೆರೆ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ತದ ನಂತರ ಖಾಸಗಿ ವ್ಯಕ್ತಿಯೊಬ್ಬರು ತಾವೇ ಜಮೀನಿನ ಮಾಲೀಕರೆಂದು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ. ತೋಟಗಾರಿಕೆಯ ಯಾವುದೇ ಅಭಿವೃದ್ಧಿ ನಡೆದಿರುವುದು ಕಂಡು ಬಂದಿಲ್ಲ. ಈ ಕುರಿತು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಿ.ಟಿ.ನಂದಿಬೇವೂರ ಅವರನ್ನು ಸಂಪರ್ಕಿಸಿದಾಗ ನ್ಯಾಯಾಲಯ ತಡೆಯಾಜ್ಞೆ ಇರುವ ಕಾರಣ ಅಭಿವೃದ್ಧಿ ಕಾರ್ಯಗಳು ನಡೆಯದಂತಾಗಿದೆ ಎಂದು ಪ್ರತಿಕ್ರಿಯಿಸಿದರು.
'ತೋಟಗಾರಿಕೆ ಇಲಾಖೆಯಿಂದ ಯಾವುದೇ ಹಣ್ಣಿನ ಸಸಿಗಳು ದೊರೆಯುತ್ತಿಲ್ಲ. ಆಂಧ್ರಪ್ರದೇಶದಿಂದ ಮಾವು, ತೆಂಗು, ಚಿಕ್ಕು, ಪೇರಲ, ದಾಳಿಂಬೆ ಮತ್ತಿತರ ಹಣ್ಣಿನ ಸಸಿಗಳನ್ನು ತರುತ್ತೇವೆ. ಅವು ಎಷ್ಟರಮಟ್ಟಿಗೆ ಕಸಿಯಾಗಿರುತ್ತವೆಯೋ ದೇವರೇ ಬಲ್ಲ. ಬಹಳಷ್ಟು ರೈತರು ಕಸಿಯಾಗದ ಮಾವು ತಂದು ನಷ್ಟ ಅನುಭವಿಸಿದ್ದೇವೆ' ಎಂದು ರೈತ ದೇವೇಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

ರಾಯಚೂರಿನಲ್ಲಿ ಹಣ್ಣಿನ ಬೆಳೆಗೆ ಲಿಂಗಸುಗೂರು ಪ್ರಥಮ ಸ್ಥಾನ
ಸರ್ಕಾರದ ವಿವಿಧ ಯೋಜನೆಗಳಿಂದ ಪ್ರೇರಿತಗೊಂಡ ಹಾಗೂ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ನಿರೀಕ್ಷೆಯಿಂದ ಲಿಂಗಸುಗೂರು ತಾಲೂಕಿನ ರೈತರು ಹಣ್ಣುಗಳು, ತರಕಾರಿಗಳು ಮತ್ತು ಅಲಂಕಾರಿಕ ಸಸ್ಯಗಳ ಕೃಷಿ ಮತ್ತು ಸಂಸ್ಕರಣೆ ಹಾಗೂ ಮಾರಾಟದ ಪೈಪೋಟಿಯಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿರುವುದು ಕಾಣಸಿಗುತ್ತದೆ.
ಹೆಚ್ಚು ಬಿಸಿಲಿನ ವಾತಾವರಣ ಹೊಂದಿರುವ ಈ ಪ್ರದೇಶದಲ್ಲಿ ಹಸಿರು ತರಕಾರಿ ಬೀನ್ಸ್, ಈರುಳ್ಳಿ, ಟೊಮ್ಯಾಟೊ, ಮೂಲಂಗಿ, ಗಜ್ಜರಿ, ಕುಂಬಳಕಾಯಿ, ಸೂರೆಕಾಯಿ, ಬದನೆ, ಬೆಂಡೆ, ಚವಳಿ, ಅಮರೆ ಸೇರಿದಂತೆ ಎಲೆಕೋಸು, ಹೂ ಕೋಸು ವಿವಿಧ ತರಕಾರಿ ಬೆಳೆ ಬೆಳೆದು ಇತರೆ ಬೆಳೆಗಳಿಗಿಂತ ಹೆಚ್ಚಿನ ಆದಾಯ ನಿರೀಕ್ಷೆಯಲ್ಲಿ ಕೃಷಿಕರು ಶ್ರಮಿಸುತ್ತಿದ್ದಾರೆ.
ದಾಳಿಂಬೆ, ಪಪ್ಪಾಯಿ, ಪೇರಲ, ಸೀತಾಫಲ ಸೇರಿದಂತೆ ಒಟ್ಟು 7,500 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದು ಜಿಲ್ಲೆಯಲ್ಲಿಯೆ ಲಿಂಗಸುಗೂರು ತಾಲೂಕು ಪ್ರಥಮ ಸ್ಥಾನದಲ್ಲಿದೆ. ದಾಳಿಂಬೆ ಪಪ್ಪಾಯಿ ಬೆಳೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುತ್ತಿದ್ದು, ಕೆಲವರು ಮಾತ್ರ ನಷ್ಟಕ್ಕೊಳಗಾಗಿ ತೋಟಗಾರಿಕೆಯಿಂದ ಹೊರ ನಡೆದ ನಿದರ್ಶನಗಳಿವೆ.
ತೋಟಗಾರಿಕೆ ಇಲಾಖೆಯವರು ಸ್ಥಳೀಯ ಮತ್ತು ಅಮರೇಶ್ವರ ತೋಟಗಾರಿಕೆ ಕ್ಷೇತ್ರದಲ್ಲಿ ಕರಿಬೇವು (4430), ಲಿಂಬೆ (10921), ನುಗ್ಗೆ (10539), ಪೇರಲ (3000) ಸಸಿಗಳನ್ನು ಮುಂಗಾರು ಹಂಗಾಮಿನಲ್ಲಿ ಬೆಳೆಸಲಾಗಿದೆ. ತಾಲೂಕಿನ ಇತರೆ ಹಣ್ಣುಗಳ ಜೊತೆ ಅಂಜುರ ಹಣ್ಣು ಬೆಳೆಸುವ ಪ್ರಯತ್ನವಾಗಿ 2500 ಸಸಿಗಳನ್ನು ಬೆಳೆಸಲಾಗಿದೆ ಎಂದು ಕೃಷಿ ಇಲಾಖೆ ದೃಢಪಡಿಸಿದೆ.
ತೋಟಗಾರಿಕೆ ಇಲಾಖೆ ಯಾವುದೇ ಬೆಳೆ ಬೆಳೆದರೂ ಸಹಾಯ ಧನ ನೀಡುವುದಾಗಿ ಹೇಳುತ್ತದೆ. ದಾಳಿಂಬೆ, ಪಪ್ಪಾಯಿ, ದ್ರಾಕ್ಷಿ, ಸೀತಾಫಲ, ಹೈಬ್ರಿಡ್ ಬಾರಿ (ಸೇಬು ಮಾದರಿ) ಹಣ್ಣು ಸಸಿ ಬೆಳೆಸುತ್ತಿಲ್ಲ. ರೈತರೇ ಹೆಚ್ಚಿನ ದರದಲ್ಲಿ ಅಥವಾ ಬೀಜ ತಂದುಕೊಂಡು ಸಸಿ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ ಎಂಬುದು ರೈತರ ಆರೋಪ.
'ತೋಟಗಾರಿ ಬೆಳೆಗಳಾದ ತರಕಾರಿ, ಹಣ್ಣು ಮತ್ತು ವೈವಿಧ್ಯಮಯ ಅಲಂಕಾರಿಕ ಸಸಿಗಳನ್ನು ಬೆಳೆಸಿ ರೈತರಿಗೆ ಕನಿಷ್ಠ ದರದಲ್ಲಿ ನೀಡುವ ಮೂಲಕ ತೋಟಗಾರಿಕೆಗೆ ಪ್ರೋತ್ಸಾಹಿಸುತ್ತ ಬಂದಿದ್ದೇವೆ. ಈ ವರ್ಷ ಮುಂಗಾರು ಹಂಗಾಮಿನಲ್ಲಿ 41,384 ವಿವಿಧ ಬಗೆಯ ಸಸಿಗಳನ್ನು ಬೆಳೆಸಿದ್ದೇವೆ. ಈಗಾಗಲೇ ರೈತರಿಗೆ 2300 ಸಸಿಗಳನ್ನು ನೀಡಿದ್ದೇವೆ' ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಭಾಗ್ಯಶ್ರೀ ತಿಳಿಸಿದ್ದಾರೆ.

ಮಾನ್ವಿಯಲ್ಲಿ ನಿಂಬೆ ಸಸಿಗೆ ಹೆಚ್ಚಿದ ಬೇಡಿಕೆ
ದೇವದುರ್ಗ ತಾಲೂಕಿನಲ್ಲಿ ರೈತರು ತೋಟಗಾರಿಕೆ ಬೆಳೆಗಳಿಗೆ ಆಸಕ್ತಿ ತೋರಿಸುತ್ತಿಲ್ಲ. ತಾಲೂಕಿನಲ್ಲಿ ಬಹುತೇಕ ಭೂಮಿಯು ನೀರಾವರಿ ಪ್ರದೇಶವನ್ನು ಹೊಂದಿದ್ದರೂ ಸಹ 2021-22ನೇ ಸಾಲಿನಲ್ಲಿ ಕೇವಲ ಮೂರು ಬಗೆಯ ಸಸಿಗಳನ್ನು ಮಾತ್ರ ರೈತರಿಗೆ ವಿತರಿಸಲಾಗಿದೆ.
ಅರಸಿಕೇರೆ ತಳಿಯ ತೆಂಗು 2600, ಸುಹಾಸಿನಿ ತಳಿಯ ಕರಿಬೇವು 3000 ಮತ್ತು 5000 ನುಗ್ಗೆ ಗಿಡಗಳು ಸೇರಿದಂತೆ ಒಟ್ಟು 10,600 ಸಸಿಗಳನ್ನು ರೈತರಿಗೆ ಮಾರಾಟ ಮಾಡಲಾಗಿದೆ. ಪ್ರಸ್ತುತ ತೋಟಗಾರಿಕೆ ಇಲಾಖೆಯ ಫಾರ್ಮ್‌ನಲ್ಲಿ 70 ಕರಿಬೇವು ಗಿಡಗಳು ಮಾತ್ರ ಉಳಿದಿವೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಭೀಮರಾವ್ ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ಮಾನ್ವಿ ತಾಲೂಕಿನಲ್ಲಿ ಅನೇಕ ರೈತರು ತೋಟಗಾರಿಕೆ ಬೆಳೆಗಳ ಕೃಷಿಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ತಾಲ್ಲೂಕಿನಲ್ಲಿ ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಪಟ್ಟಣದ ಸರ್ಕಾರಿ ಹಣ್ಣಿನ ತೋಟ ಹಾಗೂ ರಾಜಲಬಂಡಾ ತೋಟಗಾರಿಕೆ ಕ್ಷೇತ್ರಗಳು ಒಳಪಟ್ಟಿವೆ.
ಈ ಸಸ್ಯ ಕ್ಷೇತ್ರಗಳಲ್ಲಿ ವಿವಿಧ ತಳಿಯ ಸಸಿಗಳನ್ನು ಬೆಳೆಸಿ ರೈತರಿಗೆ ಮಾರಾಟ ಮಾಡಲಾಗುತ್ತದೆ. ಈ ಬಾರಿಯ ಮಳೆಗಾಲದಲ್ಲಿ ಮಾನ್ವಿಯ ಸರ್ಕಾರಿ ಹಣ್ಣಿನ ತೋಟದಲ್ಲಿ ಬೆಳೆದ ಸಸಿಗಳನ್ನು ಮಾರಾಟ ಮಾಡಲಾಗಿದೆ. ನಿಂಬೆ 5,300 ಸಸಿಗಳು, ತೆಂಗು 3,200, ಕರಿಬೇವು 1,300 ಹಾಗೂ ಅಲಂಕಾರಿಕ ಸಸಿಗಳು 316 ಮಾರಾಟವಾಗಿವೆ. ಪ್ರಸ್ತುತ ನಿಂಬೆ, ತೆಂಗು, ಕರಿಬೇವು, ನುಗ್ಗೆ, ಪೇರಲ ಸೇರಿದಂತೆ 24 ಸಾವಿರಕ್ಕೂ ಅಧಿಕ ಸಸಿಗಳು ನರ್ಸರಿಯಲ್ಲಿ ಲಭ್ಯ ಇವೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ತೋಟಗಾರಿಕೆ ಲಾಭದಾಯಕವಾಗಿದ್ದು ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿ ಪ್ರೋತ್ಸಾಹಿಸಬೇಕು ಎಂಬುದು ಸ್ಥಳೀಯ ರೈತರ ಮನವಿಯಾಗಿದೆ.

ಜಿಲ್ಲೆಯಲ್ಲಿ ಹೆಚ್ಚಿದ ಹಸಿರು ಅಭಿರುಚಿ
ತೋಟಗಾರಿಕೆ ಹೊರತುಪಡಿಸಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ರಾಯಚೂರು ನಗರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉದ್ಯಾನಗಳನ್ನು ಅಭಿವೃದ್ಧಿ ಮಾಡುತ್ತಿಲ್ಲ. ಈಗಾಗಲೇ ಅಭಿವೃದ್ಧಿ ಮಾಡಿರುವ ಉದ್ಯಾನಗಳ ನಿರ್ವಹಣೆಗೆ ಕಾಯಂ ವ್ಯವಸ್ಥೆ ಎಂಬುದಿಲ್ಲ. ಆದರೂ ಇತ್ತೀಚೆಗೆ ಪರಿಸರದ ಕಾಳಜಿ ವಹಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನವುದೇ ವಿಶೇಷ.
ಕಿರು ಉದ್ಯಾನ, ಜಮೀನುಗಳಲ್ಲಿ ಮರಗಳನ್ನು ಬೆಳೆಸುವ ಜಾಗೃತಿ ಹಾಗೂ ಜಿಲ್ಲೆಯಲ್ಲಿ ಅದರಲ್ಲೂ ರಾಯಚೂರು ನಗರದಲ್ಲಿ ಹಸಿರು ಬೆಳೆಸಬೇಕು ಎನ್ನುವ ಅಭಿರುಚಿ ಹೆಚ್ಚಾಗುತ್ತಿದೆ. ಸ್ಥಳಾವಕಾಶ ಇದ್ದವರು ಉದ್ಯಾನಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮೊಹ್ಮದ್ ಅಲಿ ಹೇಳಿದರು.












Click it and Unblock the Notifications