ಪ್ರತಾಪ್‌ಗೌಡ ಸ್ಪರ್ಧೆ ಬಿಜೆಪಿ ಅಥವಾ ಜೆಡಿಎಸ್‌ನಿಂದಲೋ? ಕುತೂಹಲ ಮೂಡಿಸಿದ ಇಬ್ರಾಹಿಂ ಹೇಳಿಕೆ
ರಾಯಚೂರು ನವೆಂಬರ್ 9: ಮಸ್ಕಿ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವರೇ? ಅಥವಾ ಜಾತ್ಯಾತೀತ ಜನತಾ ದಳದಿಂದ ಸ್ಪರ್ಧಿಸುವರೇ? ಎನ್ನುವ ಕುತೂಹಲ ಕ್ಷೇತ್ರದಲ್ಲಿ ತೀವ್ರವಾಗುತ್ತಿದೆ.
ಬೆಳಗಾವಿ ಪ್ರವಾಸದಲ್ಲಿರುವ ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂ ಸುದ್ದಿಗೋಷ್ಠಿಯೊಂದರಲ್ಲಿ ನೀಡಿದ ಹೇಳಿಕೆ ಈ ಗೊಂದಲಕ್ಕೆ ಕಾರಣವಾಗಿದೆ. ಪ್ರತಾಪಗೌಡ ಪಾಟೀಲ್ ಅವರು ಬಂದು ತಮ್ಮನ್ನು ಭೇಟಿಯಾಗಿದ್ದಾರೆಂದು ಹೆಸರು ಸಹಿತವಾಗಿ ಹೇಳಿರುವುದು ಮಸ್ಕಿ ವಿಧಾನಸಭಾ ಕ್ಷೇತ್ರದ ಮುಂದಿನ ಚುನಾವಣೆ ಲೆಕ್ಕಚಾರಗಳೇ ಬದಲಾಗುವಂತೆ ಮಾಡಿದೆ.
ಪ್ರತಾಪಗೌಡ ಪಾಟೀಲ್ ಅವರು ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ ವಿರುದ್ಧ ಭಾರೀ ಅಂತರರಿಂದ ಪರಾಭವಗೊಂಡಿದ್ದರು. ಈ ಚುನಾವಣೆ ನಂತರ ಬಿಜೆಪಿಯಲ್ಲಿ ಅವರ ಚಟುವಟಿಕೆಗಳು ಅಷ್ಟಕಷ್ಟೆ ಎನ್ನುವಂತಿರುವುದು ಮತ್ತು ಜಾತ್ಯಾತೀತ ಜನತಾ ದಳ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಪ್ರತಾಪ್ ಗೌಡರು ತಮ್ಮನ್ನು ಭೇಟಿಯಾಗಿದ್ದಾರೆ ಎಂದು ನೀಡಿರುವ ಹೇಳಿಕೆ ನೀಡಿರುವುದು ಮುಂದಿನ ರಾಜಕೀಯ ಚಟುವಟಿಕೆಗಳ ಚರ್ಚೆ ಮತ್ತಷ್ಟು ತೀವ್ರಗೊಳ್ಳುವಂತೆ ಮಾಡಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಪ್ರತಾಪ ಗೌಡ
2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಪ್ರತಾಪಗೌಡ ಪಾಟೀಲ್ ಅವರು 223 ಮತಗಳಿಂದ ಜಯಗಳಿಸಿದ್ದರು. ನಂತರ ರಾಜ್ಯದಲ್ಲಿ ನಡೆದ ಆಪರೇಷನ್ ಕಮಲಕ್ಕೆ ಗುರಿಯಾದ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಕೈ ಹಿಡಿದಿದ್ದರು. ಆದರೆ ಉಪ ಚುನಾವಣೆಯಲ್ಲಿ ಬಸವನಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೇ, ಪ್ರತಾಪಗೌಡ ಪಾಟೀಲ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಆದರೆ, ಈ ಚುನಾವಣೆಯಲ್ಲಿ ಸಂಪೂರ್ಣ ಸರ್ಕಾರವೇ ಪ್ರತಾಪಗೌಡ ಪಾಟೀಲ್ ಪರ ಪ್ರಚಾರ ನಡೆಸಿದರೂ, ಭಾರೀ ಅಂತರದಿಂದ ಪರಾಭವಗೊಂಡಿದ್ದರು. ಇದು ಮಸ್ಕಿಯಲ್ಲಿ ಪ್ರತಾಪಗೌಡ ಮತ್ತು ಬಿಜೆಪಿಯ ರಾಜಕೀಯಕ್ಕೆ ಭಾರೀ ಹಿನ್ನಡೆಯಾಗುವಂತೆ ಮಾಡಿತ್ತು.
ಪ್ರತಾಪಗೌಡ ಪಾಟೀಲ್ ಅವರು ಪಕ್ಷಾಂತರಕ್ಕೆ ಸಂಬಂಧಿಸಿ ಗಂಭೀರವಾದ ಚರ್ಚೆಗಳೇನು ಮಸ್ಕಿಯಲ್ಲಿ ಇಲ್ಲವಾಗಿದ್ದರೂ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆ ಮಸ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾರೀ ಸಂಚಲನ ಮೂಡಿಸಿದೆ. ಪ್ರತಾಪಗೌಡ ಪಾಟೀಲ್ ವಾಸ್ತವದಲ್ಲಿ ಜೆಡಿಎಸ್ ಸೇರುವರೆ? ಅಥವಾ ಬಿಜೆಪಿ ಟಿಕೆಟ್ ಪಡೆಯಲು ಈ ಪರ್ಯಾಯ ತಂತ್ರವನ್ನಾಗಿ ಬಳಸಲಾಗುತ್ತಿದೆಯೇ ಎನ್ನುವುದು ಮತ್ತೊಂದು ಅಂಶವಾಗಿದೆ.
ಕಾಂಗ್ರೆಸ್‌ಗೆ ಮರಳಲ್ಲ
ಇನ್ನು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪ್ರತಾತ್ ಗೌಡ ಪಾಟೀಲ್, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಕ್ಕೆ ಕಾರಣಕರ್ತರಲ್ಲಿ ಒಬ್ಬರಾದ ನನ್ನನ್ನು ಎಂಎಲ್‌ಸಿ ಮಾಡಲು ಒತ್ತಡ ಏರಿಲಾಗಿತ್ತು. ಆದರೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನೂ ಕೂಡ ನೀಡದಿರುವುದು ಬೇಸರವನ್ನುಂಟು ಮಾಡಿದೆ. ಆದರೂ ಬಿಜೆಪಿಯಲ್ಲೇ ರಾಜಕೀಯ ಮುಂದುವರಿಸುತ್ತೇನೆ, ಮತ್ತೆ ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ ಎಂದು ಪ್ರತಾಪ್ ಗೌಡ ಹೇಳಿದ್ದರು.
ಪ್ರತಾಪ್‌ಗೌಡ ಬಿಜೆಪಿಯಲ್ಲೇ ಇರುತ್ತೇನೆ ಎನ್ನುತ್ತಿರುವುದು, ಇಬ್ರಾಹಿಂ ತಮ್ಮ ಜೊತೆ ಪ್ರತಾಪ್‌ಗೌಡ ಮಾತನಾಡಿದ್ದಾರೆ ಎಂದು ಹೇಳಿರುವುದು ಕ್ಷೇತ್ರದ ಜನರಲ್ಲಿ ಹಾಗೂ ಬಿಜೆಪಿ ಕಾರ್ಯಕರ್ತರಲ್ಲೂ ಗೊಂದಲವನ್ನುಂಟು ಮಾಡುತ್ತಿದೆ. ಒಟ್ಟಾರೆ ಮುಂಬರುವ ಚುನಾವಣೆಗೂ ಮುನ್ನ ಮಸ್ಕಿ ಕ್ಷೇತ್ರದಲ್ಲಿ ಯಾವ ರೀತಿಯ ಪಕ್ಷಾಂತರ ರಾಜಕೀಯ ನಡೆಯಲಿದೆ ಎನ್ನುವುದನ್ನು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.












Click it and Unblock the Notifications