ಸರ್ಕಾರಿ ಶಾಲೆಯಲ್ಲಿ ನೀರಿನ ಸಮಸ್ಯೆ: 6 ವರ್ಷಗಳಿಂದ ಸ್ವಂತ ಖರ್ಚಿನಲ್ಲಿ ಮಕ್ಕಳ ದಾಹ ನೀಗಿಸುತ್ತಿರುವ ಮಹ್ಮದ್ ಹುಸೇನ್
ರಾಯಚೂರು, ಸೆಪ್ಟೆಂಬರ್ 19: ಮಾನ್ವಿ ಪಟ್ಟಣದ ಪಿಡಬ್ಲೂಡಿ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ, ಸೌಲಭ್ಯಗಳ ಕೊರತೆಯಿಂದ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿರುವುದನ್ನು ಅರಿತು ಮಹ್ಮದ್ ಹುಸೇನ್ ಆರು ವರ್ಷಗಳಿಂದ ಸ್ವಂತ ಖರ್ಚಿನಲ್ಲಿ ಶುದ್ಧ ಕುಡಿಯುವ ನೀರಿನ 20 ಲೀಟರ್ ಬಾಟಲಿ ಖರೀದಿಸಿ ಪೂರೈಸುತ್ತಿದ್ದಾರೆ.
ರಜಾ ದಿನಗಳನ್ನು ಹೊರತುಪಡಿಸಿ ಪ್ರತಿ ದಿನ ಶಾಲೆ ಆರಂಭವಾಗುವ ವೇಳೆಗೆ ನೀರಿನ ಬಾಟಲಿಯೊಂದಿಗೆ ಪ್ರತ್ಯಕ್ಷರಾಗುವ ಮಹ್ಮದ್ ಹುಸೇನ್ ತಾವೇ ಖುದ್ದಾಗಿ ನೀರಿನ ಬಾಟಲಿಯನ್ನು ಶಾಲೆಗೆ ಹೊತ್ತು ತರುತ್ತಾರೆ. ಮಹ್ಮದ್ ಹುಸೇನ್ ಕುಟುಂಬದ ಮೂವರು ಮಕ್ಕಳ ಪೈಕಿ ಇಬ್ಬರು ಇದೇ ಶಾಲೆಯಲ್ಲಿ 1ರಿಂದ5ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಈಗ ಅವರ ಕಿರಿಯ ಮಗ 5ನೇ ತರಗತಿ ವಿದ್ಯಾರ್ಥಿ.

ಪಟ್ಟಣದ ಪ್ರವಾಸಿ ಮಂದಿರದ ಹತ್ತಿರ ಚಹಾ ಬಂಡಿಯ ಮಾಲೀಕರಾಗಿರುವ ಮಹ್ಮದ್ ಹುಸೇನ್ ಎರಡು ಅವಧಿಗೆ ಈ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ, ಈಗ ಸದಸ್ಯರಾಗಿ ಮುಂದುವರೆದಿದ್ದಾರೆ. ಅಧ್ಯಕ್ಷರಾದಾಗಿನಿಂದಲೂ ಶಾಲೆಯ ಅಭಿವೃದ್ಧಿಗೆ ವಿಶೇಷ ಕಾಳಜಿವಹಿಸಿರುವ ಮಹ್ಮದ್ ಹುಸೇನ್ ಅವರಿಗೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಪ್ರತಿ ವರ್ಷ ಕಡಿಮೆಯಾಗುತ್ತಿರುವುದು ಬೇಸರ ಮೂಡಿಸಿದೆ.
'ನಮ್ಮ ಸರ್ಕಾರಿ ಶಾಲೆಯಲ್ಲಿ ಯಾವುದಕ್ಕೂ ಕೊರತೆಯಿಲ್ಲ ಎಂದು ಸುತ್ತಮುತ್ತಲಿನ ಪಾಲಕರಿಗೆ ಮನದಟ್ಟಾಗಲು ಖುದ್ದಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುತ್ತಿರುವೆ. ಹಿಂದಿನ ವರ್ಷಗಳಲ್ಲಿ ಪ್ರತಿ ದಿನ ಎರಡು ನೀರಿನ ಬಾಟಲಿಗಳನ್ನು ಪೂರೈಸುತ್ತಿದ್ದೆ. ಈಗ ಮಕ್ಕಳ ಸಂಖ್ಯೆ ಕಡಿಮೆಯಾಗಿರುವ ಕಾರಣ ಪ್ರತಿ ದಿನ ಒಂದು ಬಾಟಲಿ ನೀರು ತರುತ್ತಿದ್ದೇನೆ' ಎಂದು ಮಹ್ಮದ್ ಹುಸೇನ್ ಹೇಳುತ್ತಾರೆ.
ಪ್ರತಿ ಬಾರಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಕೈಗೊಳ್ಳಲಾಗುವ ದಾಖಲಾತಿ ಆಂದೋಲನದಲ್ಲಿ ಮಹ್ಮದ್ ಹುಸೇನ್ ಶಿಕ್ಷಕರ ಜೊತೆಗೆ ಮನೆ ಮನೆಗೆ ತೆರಳಿ ಪಾಲಕರ ಮನವೊಲಿಸಲು ಪ್ರಯತ್ನಿಸಿದ್ದರೂ ನಿರೀಕ್ಷಿತ ಫಲ ದೊರೆತಿಲ್ಲ.
ಮಕ್ಕಳ ದಾಖಲಾತಿ ಕುಸಿತ
1989ರಲ್ಲಿ ಆರಂಭವಾದ ಈ ಹಳೆಯ ಸರ್ಕಾರಿ ಶಾಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 40 ದಾಟಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸದರಿ ಶಾಲೆಯ ಸಮೀಪದಲ್ಲಿ ನಾಲ್ಕೆದು ಖಾಸಗಿ ಶಾಲೆಗಳು ತಲೆ ಎತ್ತಿರುವುದು ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಕುಸಿತಕ್ಕೆ ಕಾರಣವಾಗಿದೆ. ಈ ವರ್ಷ 1ರಿಂದ 5ನೇ ತರಗತಿ ವರೆಗೆ ಒಟ್ಟು 14ಮಕ್ಕಳು ಮಾತ್ರ ಪ್ರವೇಶ ಪಡೆದಿದ್ದಾರೆ.
ಈಚೆಗೆ ವರ್ಗವಾಗಿ ಬಂದಿರುವ ಮುಖ್ಯ ಶಿಕ್ಷಕ ಹಾಗೂ ಕಾಯಂ ಶಿಕ್ಷಕಿ ಇದ್ದಾರೆ. ಇಬ್ಬರು ಅಡುಗೆ ಸಿಬ್ಬಂದಿ ಹಾಗೂ ಬಿಸಿಯೂಟ ವ್ಯವಸ್ಥೆ ಇದೆ. ಪ್ರತ್ಯೇಕ ಬಿಸಿಯೂಟ ಕೋಣೆ, ತರಗತಿ ಕೊಠಡಿಗಳು, ಶೌಚಾಲಯ ವ್ಯವಸ್ಥೆ ಇವೆ. ಶಾಲೆಯ ಕಟ್ಟಡದ ಛಾವಣಿ ಶಿಥಿಲಗೊಂಡಿದೆ. ಶಾಲೆಯ ಕಟ್ಟಡದ ಅಭಿವೃದ್ಧಿ ಹಾಗೂ ಮಕ್ಕಳ ಪ್ರವೇಶಾತಿ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕು ಎಂಬುದು ಸ್ಥಳೀಯ ಸಂಘ ಸಂಸ್ಥೆಗಳ ಮುಖಂಡರ ಮನವಿ.












Click it and Unblock the Notifications