ಕೈ ಕೊಟ್ಟ ಮಳೆಯಿಂದ ರೈತರಿಗೆ ಸಂಕಷ್ಟ: ರಾಯಚೂರಿನಲ್ಲಿ ಮೋಡ ಬಿತ್ತನೆ
ರಾಯಚೂರು, ನವೆಂಬರ್ 06: ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದ್ದು, ರೈತರ ಕೃಷಿ ಚಟುವಟಿಕೆಗಳು ನಿಧಾನಗತಿಯಲ್ಲಿ ಕುಂಟುತ್ತಾ ಸಾಗುತ್ತಿದೆ. ಬಹುತೇಕ ಜಲಾಶಯಗಳು ಖಾಲಿಯಾಗಿರುವುದರಿಂದ ರೈತರು ಮಳೆಗಾಗಿ ಆಕಾಶದೆಡೆ ನೋಡುತ್ತಿದ್ದಾರೆ. ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಸದ್ಯ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು ಬರಗಾಲದಿಂದ ತತ್ತರಿಸುತ್ತಿವೆ.
ಈ ನಡುವೆ ರೈತರ ನೆರವಿಗೆ ಬರುವ ಉದ್ದೇಶದಿಂದ ಕೆಲವು ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಮೋಡ ಬಿತ್ತನೆಗೆ ಮುಂದಾಗುತ್ತಿದ್ದಾರೆ. ಸಚಿವ ಎನ್.ಎಸ್ ಬೋಸರಾಜ್ ಅವರ ಫೌಂಡೇಷನ್ ವತಿಯಿಂದ ರಾಯಚೂರಿನಲ್ಲಿ ಮೋಡ ಬಿತ್ತನೆ ಮಾಡಲಾಗುತ್ತಿದೆ. ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಮೂರು ದಿನಗಳ ಕಾಲ ರಾಯಚೂರು ಜಿಲ್ಲೆಯಾದ್ಯಾಂತ ಮೋಡ ಬಿತ್ತನೆ ಮಾಡುತ್ತಿದೆ. ಅದೇ ರೀತಿ ಬಳ್ಳಾರಿ ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ ಮುಂದಾಗುವರೇ ಇಲ್ಲನ ಸ್ಥಳೀಯ ಜನಪ್ರತಿನಿಧಿಗಳು ಎಂದು ಸ್ಥಳೀಯ ರೈತರು ಎದುರು ನೋಡುತ್ತಿದ್ದಾರೆ.

ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಮೋಡ ಬಿತ್ತನೆ ಮಾಡಲಾಗುತ್ತಿದ್ದ, ಭತ್ತ, ಮೆಣಸಿನಕಾಯಿ, ಹತ್ತಿ ಸೇರಿದಂತೆ ಬಹುತೇಕ ಬೆಳೆಗಳು ಒಂದು ಹಂತದವರೆಗೂ ಬೆಳೆದು ನಿಂತಿವೆ. ಈ ಬೆಳೆಗಳಿಗೆ ಡಿಸೆಂಬರ್ ಅಂತ್ಯದವರೆಗೂ ನೀರು ಬೇಕು. ಮಳೆಯ ಕೊರತೆ ಇರುವ ಈ ಸನ್ನಿವೇಶದಲ್ಲಿ ರೈತರು ಬೆಳೆಯನ್ನು ಉಳಿಸಿಕೊಳ್ಳಲು ಹರಸಹಾಸ ಪಡುತ್ತಿದ್ದಾರೆ.
ಒಂದು ಕಡೆ ಟ್ಯಾಂಕರ್ ನೀರು ಹಾಕಿದರೆ, ಮತ್ತೊಂದು ಕಡೆ ಕಾಲುವೆ ನೀರು ಬರುತ್ತಿಲ್ಲವೆಂದು ಅನ್ನದಾತ ಪರದಾಡುತ್ತಿದ್ದಾರೆ. ಈ ಮಧ್ಯೆ ಆಕ್ಟೋಬರ್ ನವೆಂಬರ್‌ನಲ್ಲಿ ಬರಬಹುದಾದ ಹಿಂಗಾರು ಮಳೆ ಕೂಡ ಬಹುತೇಕ ಕೈಕೊಡುವ ಲಕ್ಷಣ ಕಾಣುಗುತ್ತಿದೆ. ಹೀಗಾಗಿ ರಾಯಚೂರಿನ ಬೋಸರಾಜ್ ಫೌಂಡೇಷನ್ ವತಿಯಿಂದ ಶಾಸಕ ಕೋಳಿವಾಡ ಅವರ ಪಿಕೆಕೆ ಸಂಸ್ಥೆಯ ಸಹಕಾರದೊಂದಿಗೆ ಮೋಡ ಬಿತ್ತನೆ ಕಾರ್ಯ ಮಾಡಲಾಗುತ್ತಿದೆ.
ಬಳ್ಳಾರಿ ಜಿಂದಾಲ್ ವಿಮಾನದಿಂದ ಹೊರಡುವ ವಿಮಾನ ಮೂರು ದಿನಗಳ ಕಾಲ ರಾಯಚೂರು ಜಿಲ್ಲೆಯಾದ್ಯಾಂತ ಮೋಡ ಬಿತ್ತನೆ ಮಾಡುತ್ತಿದೆ ಎಂದು ಸಚಿವ ಬೋಸರಾಜ್ ಮಗ ರವಿ ಬೋಸರಾಜ್ ತಿಳಿಸಿದ್ದಾರೆ.

ಇನ್ನು ಈಗಾಗಲೇ ಹಾವೇರಿ ಬೆಳಗಾವಿಯಲ್ಲಿ ಮೋಡ ಬಿತ್ತನೆ ಮಾಡಿದ್ದು, ಬಹುತೇಕ ಯಶಸ್ವಿಯಾಗಿದೆ. ಹೀಗಾಗಿ ಇದೀಗ ರಾಯಚೂರು ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯ ಮಾಡುತ್ತಿದ್ದೇವೆ ಇಲ್ಲಿಯೂ ಯಶಸ್ವಿಯಾಗುತ್ತದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದ್ದಾರೆ.
ಮೋಡ ಬಿತ್ತನೆಯಿಂದ ಮಳೆಯಾಗುವ ಸಾಧ್ಯತೆ ಇದೆ ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಹೀಗಾಗಿ ರಾಯಚೂರು ರೈತರ ಹಿತಕ್ಕಾಗಿ ಇದೀಗ ಮೋಡ ಬಿತ್ತೆನೆ ಮಾಡಲಾಗುತ್ತಿದೆ. ಇನ್ನು ಮೋಡ ಬಿತ್ತನೆಗಾಗಿ ಪ್ರತ್ಯೇಕವಾದ ಟೆಕ್ನಿಕಲ್ ತಂಡವೊಂದು ಬಂದಿದೆ. ಕಳೆದೊಂದುವರೆ ತಿಂಗಳಿಂದ ವಾತಾವರಣವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದು, ಮೂರು ದಿನಗಳ ಕಾಲ ಆಕಾಶದಲ್ಲಿರುವ ಮೋಡಗಳ ಜೊತೆ ಕೃತಕ ಮೋಡ ಬಿತ್ತನೆ ಮಾಡುವ ಮೂಲಕ ಮಳೆ ಬರುವಂತೆ ಮಾಡುತ್ತಾರೆ.
ತುಂಗಭದ್ರಾ ಜಲಾಶಯ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ತುಂಬಿಲ್ಲ. ಹೀಗಾಗಿ ಬಳ್ಳಾರಿ, ವಿಜಯನಗರ ಕೊಪ್ಪಳವಷ್ಟೇ ಅಲ್ಲದೇ ಕೆಳ ಭಾಗದಲ್ಲಿರುವ ರಾಯಚೂರಿಗೂ ಕಾಲುವೆಗಳ ಮೂಲಕ ನಿರೀಕ್ಷಿತ ಮಟ್ಟದಲ್ಲಿ ನೀರು ತಲುಪುತ್ತಿಲ್ಲ. ಹೀಗಾಗಿ ರೈತ ಸಂಕಷ್ಟ ಎದುರಿಸುತ್ತಿದ್ದಾನೆ. ಇದೀಗ ಮೋಡ ಬಿತ್ತೆನಯಿಂದಾದರೂ ಮಳೆಯಾಗುತ್ತದೆಯೇ ಕಾದು ನೋಡಬೇಕಿದೆ.












Click it and Unblock the Notifications