ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿ ಹೆಚ್ಚಾದ ಸಾಂಕ್ರಾಮಿಕ ರೋಗ, ಜನರಲ್ಲಿ ಆತಂಕ
ರಾಯಚೂರು, ಮಾರ್ಚ್, 10: ಮಹಾಮಾರಿ ಕೊರೊನಾ ವೈರಸ್ ನಂತರ ರಾಜ್ಯದ ಇದೀಗ ಸಾಂಕ್ರಾಮಿಕ ಕಾಯಿಲೆ ಹೆಚ್ಚಾಗಿದೆ. ಮತ್ತೊಂದೆಡೆ ಎಚ್ 3 ಎನ್ 2 ಆತಂಕವೂ ಶುರುವಾಗಿದೆ. ಇದೀಗ ಜಿಲ್ಲೆಯಲ್ಲಿ ಎಚ್ 1 ಎನ್ 1 ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಈ ಪ್ರಕರಣಗಳು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಆದ್ದರಿಂದ ಜಿಲ್ಲೆಯ ಮಕ್ಕಳ ಆಸ್ಪತ್ರೆಯಂತೂ ತುಂಬಿ ತುಳುಕುತ್ತಿದೆ.
ನ್ಯೂಮೋನಿಯಾ ರೋಗವು ಅತೀ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಆದ್ದರಿಂದ ವೈದ್ಯಾಧಿಕಾರಿಗಳು ಸುರಕ್ಷತೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಆಸ್ಪತ್ರೆಯ ಸಿಬ್ಬಂದಿ ಸುರಕ್ಷತೆ ದೃಷ್ಟಿಯಿಂದ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ತಿಳಿಸಿದ್ದಾರೆ. ವಾತಾವರಣದಲ್ಲಿ ಏರುಪೇರು ಆಗಿರುವುದರಿಂದ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಯಿಲೆಗಳು ಈ ವರ್ಷ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಆತಂಕ ಉಂಟುಮಾಡಿದೆ.

ಎಚ್ 1 ಎನ್ 1 ಪ್ರಕರಣಗಳು ಹೆಚ್ಚಳ
ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿ ಎಚ್ 1 ಎನ್ 1 ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಮಕ್ಕಳು, ವಯಸ್ಕರು, ವಯೋವೃದ್ಧರು ಸೇರಿದಂತೆ ಯಾವುದೇ ವಯಸ್ಸಿನ ಅಂತರವಿಲ್ಲದೇ ಈ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಎಚ್ 1 ಎನ್ 1 ಪ್ರತೀ ವರ್ಷವೂ ಬಣ್ಣ ಬದಲಿಸುತ್ತದೆ. ಇದೀಗ ಜನರ ಕಾಯಿಲೆಗೆ ಕಾರಣವಾಗಿರುವ ವೈರಸ್ ಕುರಿತು ಸಂಶೋಧನೆ ಆಗಬೇಕಿದೆ. ಎಚ್ 1 ಎನ್ 1 ರೂಪಾಂತರ ತಳಿ ಇರಬಹುದು ಎಂಬ ಅಭಿಪ್ರಾಯವನ್ನು ಕೂಡ ತಜ್ಞ ವೈದ್ಯರು ವ್ಯಕ್ತಪಡಿಸಿದ್ದಾರೆ.
ರೋಗದ ಲಕ್ಷಣಗಳನ್ನು ತಿಳಿಯಿರಿ
ಕೊರೊನಾ ನಂತರ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಅಥವಾ ಬೇರೆ ಕಾರಣದಿಂದ ಬೇಸಿಗೆಯಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತಿರಬಹುದು. ಇದು ಕೆಮ್ಮು ರೋಗಿಗಳ ದೇಹವನ್ನೆಲ್ಲ ಹಿಂಡಿ ಹಿಪ್ಪೆ ಮಾಡುತ್ತಿದೆ. ಬೇಗ ಚಿಕಿತ್ಸೆ ಪಡೆಯದಿದ್ದರೆ ಕಫಾ ಹೆಚ್ಚಾಗಿ ನ್ಯೂಮೋನಿಯಾ ಕಾಣಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚಾಗಿದೆ. ಹೀಗಾಗಿ ಎಚ್ 1 ಎನ್ 1 ಲಸಿಕೆಯನ್ನು ತಪ್ಪದೇ ಮಕ್ಕಳಿಗೆ ಹಾಕಿಸಬೇಕು ಅಂತಾ ಮಕ್ಕಳ ವೈದ್ಯರು ಕೋರಿದ್ದಾರೆ.

ಮಾಸ್ಕ್ ಧರಿಸುವಂತೆ ಸೂಚನೆ
ಸಭೆ-ಸಮಾರಂಭಕ್ಕೆ ಮಕ್ಕಳನ್ನುಕರೆದುಕೊಂಡು ಹೋಗಬೇಡಿ. ಹಾಗೆಯೇ ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಬಳಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಕಳೆದ ವರ್ಷಕ್ಕಿಂತಲೂ ಈ ವರ್ಷ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಪ್ರಕರಣದ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವುದು ಎಲ್ಲರಿಗೂ ಒಳ್ಳಯದು ಎಂದು ವೈದ್ಯರು ಸೂಚಿಸಿದ್ದಾರೆ.
ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಈ ಕುರಿತು ಹೆಚ್ಚು ಜಾಗೃತಿ ಮೂಡಿಸಬೇಕಿದೆ. ಜಿಲ್ಲೆಯಲ್ಲಿ ಈವರೆಗೂ ಎಚ್ 3 ಎನ್ 2 ಪ್ರಕರಣ ಪತ್ತೆಯಾಗಿಲ್ಲ. ಅದರ ಜೊತೆಗೆ ಸಾಂಕ್ರಾಮಿಕ ಕಾಯಿಲೆಯ ಉಲ್ಬಣ ಹೆಚ್ಚಾಗಿದೆ. ನೆಗಡಿ, ಕೆಮ್ಮು ಹಾಗೂ ಜ್ವರ ಕಾಣಿಸಿಕೊಂಡಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಆಗಾಗ್ಗೆ ಬಿಸಿಯಾದ ನೀರನ್ನು ಸೇವಿಸಬೇಕು ಎಂದು ರಾಯಚೂರು ಆರೋಗ್ಯ ಇಲಾಖೆಯ ಡಿಎಚ್ಓ ಡಾ.ಸುರೇಂದ್ರಬಾಬು ಸೂಚನೆ ನೀಡಿದ್ದಾರೆ.












Click it and Unblock the Notifications