ರಸಗೊಬ್ಬರಕ್ಕೆ ಸೆಡ್ಡು, ರಾಯಚೂರಿನ ಕೋಳಿ ಗೊಬ್ಬರಕ್ಕೆ ಹೆಚ್ಚಿದ ಡಿಮ್ಯಾಂಡ್!
ರಾಯಚೂರು, ಜುಲೈ 12: ಎಡದೊರೆ ನಾಡಿನ ಕೋಳಿ ಗೊಬ್ಬರಕ್ಕೆ ರಾಜ್ಯ ಹೊರ ರಾಜ್ಯಗಳಿಂದ ಬೇಡಿಕೆ ಹೆಚ್ಚಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಹೆಚ್ಚು ರಫ್ತಾಗಿದೆ. ರಾಯಚೂರು ಜಿಲ್ಲೆಯಲ್ಲಿ ಕಳೆದ 15 ವರ್ಷಗಳ ಹಿಂದೆ ಕೋಳಿ ಗೊಬ್ಬರದ ಬಳಕೆ ಅಷ್ಟಾಗಿರಲಿಲ್ಲ. ಹೀಗಾಗಿ ಕೋಳಿ ಫಾರ್ಮ್ ಮಾಲೀಕರಿಗೆ ಗೊಬ್ಬರ ವಿಲೇವಾರಿ ಮಾಡುವುದು ಕಷ್ಟವಾಗಿತ್ತು.
ಪ್ರಸ್ತುತ ಕರ್ನಾಟಕದ ನಾನಾ ಮೂಲೆ ಹಾಗೂ ಅಂತರ್ ರಾಜ್ಯಗಳಿಂದ ಬೇಡಿಕೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ವಿಲೇವಾರಿಗೆ ಅನುಕೂಲವಾಗಿದೆ. ಸದ್ಯ ಸಗಣಿ ಗೊಬ್ಬರ ದೊರೆಯುವುದು ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ ಆ ಸ್ಥಾನವನ್ನು ಕೋಳಿ ಗೊಬ್ಬರ ತುಂಬಿದೆ. ಮುಂಗಾರು ಕೃಷಿಯಲ್ಲಿ ರೈತರು ಈ ಕೋಳಿ ಗೊಬ್ಬರ ಬಳಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ರೈತರು ಕೋಳಿ ಗೊಬ್ಬರ ಬಳಸುತ್ತಿರುವುದರಿಂದ ಹೆಚ್ಚು ಇಳುವರಿ ಪಡೆಯುತ್ತಿರುವುದು ಕಂಡು ಬಂದಿದೆ. ಇನ್ನು ರಾಯಚೂರು ತಾಲೂಕಿನ ಹಲವು ಹಳ್ಳಿಗರು ಕಡಿಮೆ ದರಕ್ಕೆ ಸಿಗುತ್ತದೆ ಎಂಬ ಕಾರಣಕ್ಕೆ ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿಯ ಕೋಳಿ ಫಾರ್ಮ್‌ಗಳಿಂದ ಗೊಬ್ಬರ ಖರೀದಿ ಮಾಡುತ್ತಿದ್ದಾರೆ. ಈ ಗೊಬ್ಬರ ಬಳಕೆಯಿಂದ ಇಳುವರಿ ಅಧಿಕವಾಗಿ ಬರುತ್ತಿದೆ ಎಂಬ ಕಾರಣಕ್ಕೆ ಖರೀದಿಸುತ್ತಿರುವುದು ಕಂಡು ಬಂದಿದೆ.
ರಾಸಾಯನಿಕ ಗೊಬ್ಬರಗಳ ದುಷ್ಪರಿಣಾಮಗಳ ಮಧ್ಯೆ ಕೋಳಿ ಗೊಬ್ಬರ ಉತ್ತಮವಾಗಿದೆ. ಅಲ್ಲದೆ ರಾಯಚೂರು ತಾಲೂಕಿನ ಹಲವು ಕಡೆ ಹೆಚ್ಚಿನ ಕೋಳಿ ಫಾರ್ಮ್‌ಗಳಿರುವುದರಿಂದ ಸುಲಭವಾಗಿ ಕಡಿಮೆ ದರಕ್ಕೆ ಗೊಬ್ಬರ ಸಿಗುತ್ತಿದೆ. ಕೋಳಿ ಗೊಬ್ಬರ ಬಳಸುವವರು ತೋಟಗಳಿಗೆ ಹೆಚ್ಚಿನ ನೀರು ಪೂರೈಕೆ ಮಾಡುತ್ತಿರುವುದು ಕಂಡು ಬಂದಿದೆ.

ಆರಂಭದಲ್ಲಿ ಪ್ರತಿ ಟನ್ ಗೊಬ್ಬರ ದರ 1,200 ರಿಂದ 1,3000ರ ಅಸುಪಾಸಿನಲ್ಲಿತ್ತು. ಆದರೆ ನಾಲ್ಕೈದು ವರ್ಷಗಳಿಂದ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ಹೆಚ್ಚಾಗಿದೆ. ಅಡಿಕೆ , ದಾಳಿಂಬೆ , ತೆಂಗು , ಸಪೋಟಾ, ಈರುಳ್ಳಿಯಂತಹ ವಾಣಿಜ್ಯ ಬೆಳಗಳಿಗೆ ಈ ಕೋಳಿ ಗೊಬ್ಬರವನ್ನು ಹೆಚ್ಚು ಬಳಸಲಾಗುತ್ತಿದೆ. ಕೋಳಿ ಗೊಬ್ಬರ ಪೂರ್ಣವಾಗಿ ಸಾವಯವ ಗೊಬ್ಬರವಾಗಿದೆ. ಹಾಕಿದ ನಂತರ ಸ್ವಲ್ಪ ಹೆಚ್ಚು ನೀರು ಹಾಯಿಸಿದಲ್ಲಿ ಇಳುವರಿ ಉತ್ತಮವಾಗಿ ಬರಲಿದೆ.
ಕೋಳಿ ಗೊಬ್ಬರ ಬಳಕೆಯಿಂದ ಫಸಲಿಗೆ ಉತ್ತಮ ಪೌಷ್ಟಿಕಾಂಶ ಒದಗಿ ಇಳುವರಿ ಪ್ರಮಾಣ ವೃದ್ಧಿಯಾಗಲಿದೆ. ನಿತ್ಯ ಸಾವಿರಾರು ಟನ್ ಕೋಳಿ ಗೊಬ್ಬರವನ್ನು ರಾಯಚೂರು ಜಿಲ್ಲೆಯ ನಾನಾ ಭಾಗ ಹಾಗೂ ಕರ್ನಾಟಕ ,ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಾಗಣೆ ಮಾಡಲಾಗುತ್ತಿದೆ. ಒಂದು ಟ್ರ್ಯಾಕ್ಟರ್ ಲೋಡ್ ಕೋಳಿ ಗೊಬ್ಬರಕ್ಕೆ 30 ರಿಂದ 35 ಸಾವಿರ ರೂಪಾಯಿ ದರವಿದೆ. ಗೊಬ್ಬರ ಒಣಗಿದ್ದರೆ ದರ ಜಾಸ್ತಿ ಫಿಕ್ಸ್ ಮಾಡಿ ಮಾರಲಾಗುತ್ತದೆ.
ತೆಂಗಿನ ಗಿಡಕ್ಕೆ 3 ರಿಂದ 4 ಕೆಜಿಯಂತೆ ನಾಲ್ಕು ಎಕರೆ ತೋಟಗಾರಿಕೆ ಬೆಳೆಗೆ ಒಂದು ಲೋಡ್ ಕೋಳಿ ಗೊಬ್ಬರ ಬಳಸುತ್ತಿದ್ದು, ಪ್ರತಿ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಗೊಬ್ಬರ ಕೊಡಲಾಗುತ್ತದೆ. ಬೆಳೆಗಾರರು ಕೋಳಿ ಗೊಬ್ಬರ ಬಳಕೆ ನಂತರ ಹೆಚ್ಚಿನ ನೀರನ್ನು ಗಿಡಗಳಿಗೆ ಪೂರೈಸಬೇಕು. ಒಂದು ವೇಳೆ ಹೆಚ್ಚು ನೀರು ಪೂರೈಸದೇ ಹೋದರೆ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ರೈತರು ತಿಳಿಸಿದ್ದಾರೆ.
ಕೋಳಿ ಗೊಬ್ಬರ ಬಳಕೆಯಿಂದ ತೋಟಗಾರಿಕೆ ಬೆಳಗಳಲ್ಲಿ ರೈತರು ಗರಿಷ್ಠ ಪ್ರಮಾಣದ ಇಳುವರಿ ಪಡೆದಿದ್ದಾರೆ. ಕೋಳಿ ಗೊಬ್ಬರ ರೋಗ ಬಾಧೆಯನ್ನು ನಿಯಂತ್ರಿಸಲಿದೆ. ಹೀಗಾಗಿ ರೈತರು ಅಧಿಕ ದರ ನೀಡಿ ಗೊಬ್ಬರ ತೆಗೆದುಕೊಂಡು ಹೋಗುತ್ತಿದ್ದಾರೆ. ಸದ್ಯ ಕೋಳಿ ಗೊಬ್ಬರಕ್ಕೆ ರೈತರು ಹೆಚ್ಚು ಬೇಡಿಕೆ ಸಲ್ಲಿಸುತ್ತಿದ್ದಾರೆ ಎಂದು ರಾಯಚೂರು ಕೋಳಿ ಫಾರ್ಮ್ ಮಾಲೀಕ ಎ.ಕೆ.ವಿರೇಶ್ ಹೇಳಿದ್ದಾರೆ.
ಈರುಳ್ಳಿ ಬೇಗ ಬೆಳೆಯಲು ಕೋಳಿ ಗೊಬ್ಬರ ಉತ್ತಮ. ಅಲ್ಲದೇ ಈಗ ಕೊಟ್ಟಿಗೆ ಗೊಬ್ಬರ ಸಾಕಷ್ಟು ಸಿಗುತ್ತಿಲ್ಲ. ರಸಗೊಬ್ಬರದ ಅಡ್ಡ ಪರಿಣಾಮ ಬೀರುತ್ತದೆ. ಹೀಗಾಗಿ ನಾವು ಕೋಳಿ ಗೊಬ್ಬರವನ್ನು ಹೆಚ್ಚು ಬಳಸುತ್ತಿದ್ದೇವೆ. ಇದರಿಂದ ಭೂಮಿಯ ಫಲವತ್ತತೆಯೂ ಹೆಚ್ಚಲಿದೆ ಎಂದು ರೈತ ಲಕ್ಷ್ಮಣ್ ಗೌಡ ಕಡಗಂದೊಡ್ಡಿ ತಿಳಿಸಿದ್ದಾರೆ.












Click it and Unblock the Notifications