ಬಿಸಿಲ ನಾಡು ರಾಯಚೂರು ಜಿಲ್ಲೆಯಲ್ಲಿ ತಗ್ಗಿದ ವಿದ್ಯುತ್ ಬೇಡಿಕೆ: ಕಾರಣ ಏನೆಂದು ತಿಳಿಯಿರಿ
ಕಳೆದ ಕೆಲ ದಿನಗಳಿಂದ ರಾಜ್ಯದ ಹವಾಮಾನದಲ್ಲಿ ಬದಲಾವಣೆ ಆಗಿದ್ದು, ರಾಯಚೂರು ಜಿಲ್ಲೆಯಲ್ಲಿ ಗಣನೀಯವಾಗಿ ವಿದ್ಯುತ್ ಪೂರೈಕೆ ಬೇಡಿಕೆ ತಗ್ಗಿದೆ.
ರಾಯಚೂರು, ಮಾರ್ಚ್, 22: ಬಿರು ಬೇಸಿಗೆಯಲ್ಲೂ ಸಹ ಮಳೆರಾಯ ಕೆಲವೆಡೆ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಇದರಿಂದ ಕಳೆದ ಕೆಲ ದಿನಗಳಿಂದ ರಾಜ್ಯದ ಹವಾಮಾನದಲ್ಲಿ ಬದಲಾವಣೆ ಆಗಿದ್ದು, ರಾಯಚೂರು ಜಿಲ್ಲೆಯಲ್ಲಿ ಗಣನೀಯವಾಗಿ ವಿದ್ಯುತ್ ಬೇಡಿಕೆ ತಗ್ಗಿದಂತಾಗಿದೆ. ಆದ್ದರಿಂದ ವಿದ್ಯುತ್ ಘಟಕಗಳ ಮೇಲಿನ ಉತ್ಪಾದನೆ ಒತ್ತಡವೂ ಇಳಿಕೆಯಾಗಿದೆ. ಹಾಗಾದರೆ ಯಾವ ಪ್ರದೇಶಗಳಲ್ಲಿ ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ವಿದ್ಯುತ್ ಬೇಡಿಕೆ ಒತ್ತಡ ಕುಗ್ಗಿದೆ
ಬೇಸಿಗೆ ದಿನಗಳಲ್ಲಿ ವಿದ್ಯುತ್ ಬಳಕೆ ಹೆಚ್ಚಳವಾಗುವುದು ಸಾಮಾನ್ಯವಾಗಿರುತ್ತದೆ. ಈ ಬಾರಿ ಮುಂಚಿತವಾಗಿಯೇ ಸಾಕಷ್ಟು ವಿದ್ಯುತ್ ಬೇಡಿಕೆ ಏರಿಕೆ ಕಂಡಿತ್ತು. ಹೀಗಾಗಿ ವಿದ್ಯುತ್ ಉತ್ಪಾದನೆಗೆ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಇದೀಗ ಮಳೆಯಾಗುತ್ತಿರುವುದರಿಂದ ವಿದ್ಯುತ್ ಬೇಡಿಕೆಯ ಒತ್ತಡವನ್ನು ತಾತ್ಕಾಲಿಕವಾಗಿ ಕುಗ್ಗಿದೆ ಎಂದು ನಿಗಮದ ಮೂಲಗಳಿಂದ ತಿಳಿದುಬಂದಿದೆ.

ವಿದ್ಯುತ್ ಕಡಿತಕ್ಕೆ ಮುಂದಾಗಿದ್ದ ಎಸ್ಕಾಂಗಳು
ಬೇಸಿಗೆಯ ಮೊದಲೇ ವಿದ್ಯುತ್ ಬೇಡಿಕೆ ಸಾರ್ವಕಾಲಿಕ ದಾಖಲೆ ಹಂತಕ್ಕೆ ತಲುಪಿದೆ. ಪ್ರತಿದಿನವೂ ವಿದ್ಯುತ್ ಬಳಕೆ ಹೆಚ್ಚಳವಾಗಿದ್ದು, ಕರ್ನಾಟಕ ವಿದ್ಯುತ್ ನಿಗಮವನ್ನು ಒತ್ತಡದಲ್ಲಿ ಸಿಲುಕಿಸಿತ್ತು. ವಿದ್ಯುತ್ ಬೇಡಿಕೆಯು ಕಳೆದ ಡಿಸೆಂಬನಿಂದಲೇ ಏರುಗತಿಯಲ್ಲಿದೆ. ಇನ್ನು ಈ ಬಾರಿಯ ಫೆಬ್ರವರಿ ಅಂತ್ಯಕ್ಕೆ ಸಾರ್ವಕಾಲಿಕ ದಾಖಲೆಯ 16 ಸಾವಿರ ಮೆಗಾವ್ಯಾಟ್ ಗಡಿ ದಾಟಿತ್ತು. ದಿನವೂ 15 ರಿಂದ 16 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯಿದ್ದು, ಎಸ್ಕಾಂಗಳು ವಿದ್ಯುತ್ ಕಡಿತಕ್ಕೆ ಮುಂದಾಗಿದ್ದವು.
ವಿದ್ಯುತ್ ಕಡಿತ ಮಾಡುವುದಕ್ಕಾಗಿ ಎಸ್ಕಾಂಗಳು ತಾಂತ್ರಿಕ ನೆಪ ಹೇಳುವ ಪರಿಸ್ಥಿತಿ ಬಂದೊದಗಿತ್ತು. ವಾಣಿಜ್ಯ ಬಳಕೆ ಹೆಚ್ಚಳ, ಗೃಹಪಯೋಗಿ ವಿದ್ಯುತ್ ಸಹ ಬಿರುಬಿಸಿಲ ಕಾರಣಕ್ಕೆ ಏರಿಕೆ ಕಂಡಿತ್ತು. ಪರೀಕ್ಷೆಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳ ಓದಿಗೂ ವಿದ್ಯುತ್ ಬಳಕೆ ಹೆಚ್ಚಳಕ್ಕೆ ಕಾರಣವಾಗಿದೆ. ಹಾಗೆಯೇ ದಿನದಿಂದ ದಿನಕ್ಕೆ ವಿದ್ಯುತ್ ಬಳಕೆ ತೀವ್ರಗತಿಯಲ್ಲಿ ಏರಿಕೆ ಕಂಡಿತ್ತು.

ವಿದ್ಯುತ್ ಉತ್ಪಾದನೆ ವಿವರ
ರಾಜ್ಯದಲ್ಲಿ ಸದ್ಯ ವಿದ್ಯುತ್ ಬಳಕೆ ಪ್ರಮಾಣ ತಗ್ಗಿದ್ದು, 16 ಸಾವಿರ ಮೆಗಾವ್ಯಾಟ್‌ನಿಂದ ಈಗ 12 ಸಾವಿರ ಮೆಗಾವ್ಯಾಟ್‌ಗೆ ತಗ್ಗಿದೆ. ಪರಿಣಾಮ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಮೇಲೆ ಉಂಟಾಗಿದ್ದ ವಿದ್ಯುತ್ ಉತ್ಪಾದನೆ ಒತ್ತಡ ತಗ್ಗಿದೆ. ಬೇಸಿಗೆಯಲ್ಲಿ ಥರ್ಮಲ್ ಘಟಕಗಳಿಂದಲೇ ವಿದ್ಯುತ್ ಪಡೆಯಲಾಗುತ್ತದೆ. ಈ ಬಾರಿಯೂ ಸಹ ಥರ್ಮಲ್ ಘಟಕಗಳಿಂದಲೇ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲಾಗಿತ್ತು.
ರಾಯಚೂರಿನ ಶಕ್ತಿನಗರ , ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ, ಬಳ್ಳಾರಿಯ ಕುಡಿತಿನಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿನ ಎಲ್ಲ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲಾಗಿತ್ತು. ಆದ್ದರಿಂದ ಕಲ್ಲಿದ್ದಲು ಸಂಗ್ರಹಣೆಗೆ ಹಿನ್ನೆಡೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇತ್ತೀಚೆಗಷ್ಟೇ ಮಳೆಯಾಗಿದ್ದು, ಇದರಿಂದ ವಾತಾವರಣದಲ್ಲಿ ಬದಲಾವಣೆ ಆಗಿದೆ. ಸದ್ಯ ಶಕ್ತಿನಗರದ ವಿದ್ಯುತ್ ಘಟಕಗಳಿಂದ 980 ಥರ್ಮಲ್ ಮೆಗಾವ್ಯಾಟ್, ಬಳ್ಳಾರಿಯಲ್ಲಿ 880 ಮೆಗಾವ್ಯಾಟ್ ಹಾಗೂ ವೈಟಿಪಿಎಸ್‌ನಲ್ಲಿ 400 ಮೆಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತಿದೆ. ಕಳೆದ ವಾರದಿಂದ ರಾಜ್ಯದ ಬಹುತೇಕ ಕಡೆ ಮೋಡ ಕವಿದ ವಾತಾವರಣ ಇದೆ. ಇನ್ನು ಕೆಲವಡೆ ಭಾರಿ ಮಳೆಯೂ ಸುರಿದೆ. ಇದರಿಂದಾಗಿ ವಾತಾವರಣದಲ್ಲಿ ತಂಪು ಮೂಡಿದೆ ಎನ್ನಲಾಗಿದೆ.
ತಂಪಾದ ವಾತಾವರಣ ಇರುವುದರಿಂದ ಗೃಹಪಯೋಗಿ ವಿದ್ಯುತ್ ಬಳಕೆ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ. ಕೃಷಿ ಕ್ಷೇತ್ರದಲ್ಲಿ ಕಳೆದ ಮುಂಗಾರು ಹಂಗಾಮಿನ ನಂತರ ಪಂಪ್ ಸೆಟ್ ಬಳಕೆ ಏರಿಕೆಯಾಗಿತ್ತು. ಇದೀಗ ಇಲ್ಲಿಯೂ ಮಳೆಯಾಗುತ್ತಿರುವುದರಿಂದ ವಿದ್ಯುತ್ ಬಳಕೆ ಸ್ಪಲ್ಪಮಟ್ಟಿಗೆ ತಗ್ಗಿದೆ. ಹೀಗಾಗಿ ರಾಜ್ಯದಲ್ಲಿ ವಿದ್ಯುತ್ ಬಳಕೆ ಕಳೆದೆರಡು ದಿನಗಳಲ್ಲಿ ಇಳಿಕೆಯಾಗಿದ್ದು, ಇದರಿಂದ ಕೆಪಿಸಿಎಲ್ ನಿಟ್ಟುಸಿರು ಬಿಡುವಂತಾಗಿದೆ.












Click it and Unblock the Notifications