ರಾಯಚೂರು ಜಿಲ್ಲೆಯಲ್ಲಿ 2022 ರಿಂದ 2023ರವರೆಗೂ ದಾಖಲಾದ ಬಾಲ್ಯವಿವಾಹ ಪ್ರಕರಣಗಳು, ಇಲ್ಲಿದೆ ವಿವರ
ರಾಯಚೂರು ಏಪ್ರಿಲ್, 2: ಸರ್ಕಾರ ಬಾಲ್ಯವಿವಾಹ ತಡೆಯುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹೆಣ್ಣು ಕುಟುಂಬಕ್ಕೆ ಹೊರೆ ಆಗಬಾರದೆಂದು ಹಲವು ರೀತಿಯಲ್ಲಿ ಜಾಗೃತಿ ಮೂಡಿಸಿದರೂ ಸಹ ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ ಸದ್ದಿಲ್ಲದೆ ಬಾಲ್ಯವಿವಾಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಮದುವೆಗಳಿಗೆ ಜನಪ್ರತಿನಿಧಿಗಳು ಸಾಕ್ಷಿ ಆಗುತ್ತಿರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿದೆ.
ಜನರಿಗೆ ತಿಳಿಹೇಳಬೇಕಾದ ಜನಪ್ರತಿನಿಧಿಗಳೇ ಬಾಲ್ಯ ವಿವಾಹಗಳಿಗೆ ಸಾಕ್ಷಿಯಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಮತಕ್ಕಾಗಿ ಮದುವೆ ಕಾರ್ಯಕ್ರಮಗಳಿಗೆ ಹೋಗುವ ಜನಪ್ರತಿನಿಧಿಗಳು ಅವರ ಸಮ್ಮುಖದಲ್ಲಿ ಅಪ್ರಾಪ್ತ ವಧು ಹಾಗೂ ವರನಿಗೆ ಮದುವೆಯಾದರೂ ಕೂಡ ಕಣ್ಮುಚ್ಚಿ ಆಶೀರ್ವದಿಸಿ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳಿಗೆ ಈ ಬಗ್ಗೆ ಅರಿವಿದ್ದರೂ ಕೂಡ ಕಾಟಾಚಾರಕ್ಕೆ ಎಂಬಂತೆ ದಾಳಿ ಮಾಡಿ ಅಲ್ಲಿಗೆ ಬಿಡುವಂತಹ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.

ಬಾಲ್ಯ ವಿವಾಹ ಪ್ರಕರಣಗಳ ವಿವರ
2022 ರಿಂದ 2023 ರವರೆಗೆ ಜಿಲ್ಲೆಯಾದ್ಯಂತ 98 ಪ್ರಕರಣ ಬೆಳಕಿಗೆ ಬಂದಿದ್ದು, 92 ಬಾಲ್ಯವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ. 6 ಪ್ರಕರಣಗಳಲ್ಲಿ ಮಾತ್ರ ಎಫ್‌ಐಆರ್ ದಾಖಲಿಸಲಾಗಿದೆ. ಹೀಗೆ ಅದೆಷ್ಟೋ ಬಾಲ್ಯವಿವಾಹಗಳು ಸದ್ದಿಲ್ಲದೆ ನಡೆಯುತ್ತಿದ್ದರೂ ಅಧಿಕಾರಿಗಳ ಗಮನಕ್ಕೆ ಬರುತ್ತಿಲ್ಲ. ಜಿಲ್ಲೆಯಾದ್ಯಂತ ಹಲವಾರು ಕಡೆ ಬಾಲ್ಯವಿವಾಹ ನಡೆಯುತ್ತಿದ್ದು, ಕೇವಲ ವಧುವಿನ ವಯಸ್ಸುನ್ನು ಕೂಡ ತಿದ್ದಲಾಗುತ್ತಿರುವ ಪ್ರಕರಣಗಳಲ್ಲಿ ಕೂಡ ಕಂಡುಬರುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
2023ರ ವಿಧಾನಸಭಾ ಚುನಾವಣಾ ಹಿನ್ನೆಲೆ ಜಿಲ್ಲೆಯಾದ್ಯಂತ ರಾಜಕೀಯ ನಾಯಕರು ಪ್ರಚಾರವನ್ನು ಜೋರಾಗಿ ನಡೆಸುತ್ತಿದ್ದು, ಯಾರೇ ಮದುವೆಗೆ ಕರೆದರೂ ತೆರಳಿ ಶಾಲು, ಸನ್ಮಾನ ಮಾಡಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಹೀಗೆ ರಾಜಕೀಯ ನಾಯಕರೇ ಬಾಲ್ಯ ವಿವಾಹವನ್ನು ಬೆಂಬಲಿಸುತ್ತಿರುವುದು ಬೇಸರದ ಸಂಗತಿಯಾಗಿದೆ.
ಏನೂ ತಿಳಿಯದ ವಯಸ್ಸಿನಲ್ಲಿ ವಧುವಿನ ಪಾಲಕರು ವರನ ಆಕರ್ಷಣೆಗೋ, ಮೋಡಿ ಮಾತಿಗೋ, ಶ್ರೀಮಂತಿಕೆಗೋ ಮಾರು ಹೋಗಿ ಮದುವೆ ಮಾಡಿ ಕೊಡುತ್ತಾರೆ. ಆದರೆ ಬಾಲ್ಯದ ವಯಸ್ಸಿನಲ್ಲಿ ಸಂಸಾರ ನಡೆಸುವುದು ಕಷ್ಟವಾದ ಕಾಲದಲ್ಲಿ ಇಬ್ಬರ ಮಧ್ಯೆ ಪರಸ್ಪರ ಜಗಳವಾಗಿ ಬಾಕಕಿಯರು ಪಾಲಕರು ಅಥವಾ ಒಂಟಿಯಾಗಿ ಠಾಣೆ ಮೆಟ್ಟಿಲು ಹತ್ತುವ ಸ್ಥಿತಿಗೆ ಬಂದು ತಲುಪುತ್ತಿದ್ದಾರೆ.

ಅಂತರ್ಜಾತಿ ವಿಷಯದಲ್ಲಿ ಸಂಘರ್ಷಗಳಾಗಿ ಪತಿ, ಪತ್ನಿ ದೂರವಾಗಿರುವ ಅದೆಷ್ಟೋ ಉದಾಹರಣೆಗಳಿವೆ. ಕುಡುಕ ಗಂಡನ ಕಿರುಕುಳ, ಅತ್ತೆ, ಮಾವಂದಿರ ದೌರ್ಜನ್ಯಕ್ಕೆ ನಲುಗಿ ಠಾಣೆ ಮೆಟ್ಟಿಲು ಹತ್ತಿದ ಪ್ರಕರಣಗಳು ಕೂಡ ಬೆಳಕಿಗೆ ಬಂದಿವೆ. ಒಟ್ಟಾರೆ ಕಿರುಕುಳದಿಂದ ಬೇಸತ್ತ ಮಹಿಳೆಯರು ಸ್ವಾಧಾರ ಕೇಂದ್ರದಲ್ಲಿ ಜೀವನ ನಡೆಸುತ್ತಿರುವುದನ್ನು ಕಾಣಬಹುದಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಹೇಳಿದ್ದೇನು?
ಜಿಲ್ಲೆಯಾದ್ಯಂತ ಕಳೆದ ಒಂದು ವರ್ಷದಿಂದ 98 ಪ್ರಕರಣಗಳ ಬಗ್ಗೆ ಮಾಹಿತಿ ಬಂದಿದ್ದು, ಇದರಲ್ಲಿ 92 ವಿವಾಹ ತಡೆದು, 6 ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮನ್ಸೂರ್ ಅಹಮದ್ ಮಾಹಿತಿ ನೀಡಿದ್ದಾರೆ.
ದಿಟ್ಟ ನಿರ್ಧಾರ ತೆಗೆದುಕೊಂಡ ಉಪ್ಪಾರ ಸಮುದಾಯ
ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೆ ಆ ಕುಟುಂಬದಿಂದ ಸಂಪೂರ್ಣ ಸಮುದಾಯವೇ ದೂರಾಗಬೇಕು. ಶಾಲೆಯಿಂದ ಹೊರಗುಳಿಯುತ್ತಿರುವ ಮಕ್ಕಳ ಶಿಕ್ಷಣಕ್ಕಾಗಿ ಚಾಮರಾಜನಗರದ ಉಪ್ಪಾರ ಸಮುದಾಯ ಈ ರೀತಿ ದಿಟ್ಟ ನಿಲುವೊಂದನ್ನು ಇತ್ತೀಚೆಗೆ ತೆಗೆದುಕೊಂಡಿದೆ.
ತಮ್ಮ ಸಮಾಜದ ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಿತರಾಗಬೇಕು, ಉನ್ನತ ವ್ಯಾಸಂಗ ಮಾಡಬೇಕೆಂಬ ನಿಟ್ಟಿನಲ್ಲಿ ಚಾಮರಾಜನಗರದ ಉಪ್ಪಾರ ಸಮುದಾಯವು ದಿಟ್ಟ ನಿಲುವೊಂದನ್ನು ತೆಗೆದುಕೊಂಡಿದ್ದು, ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿಸಲು ಸಮುದಾಯದ ಮುಖಂಡರು ಮುಂದಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಪ್ರವರ್ಗ-1 ರ ಅಡಿಯಲ್ಲಿ 158 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಇವರಲ್ಲಿ ಉಪ್ಪಾರ ಸಮುದಾಯದವರೇ ಹೆಚ್ಚಾಗಿದ್ದರು. ಹೀಗಾಗಿ ಕಾನೂನು ಸೇವಾ ಪ್ರಾಧಿಕಾರ ಹಾಗೂ ಶಿಕ್ಷಣ ಇಲಾಖೆಯು ಉಪ್ಪಾರ ಸಮಯದಾಯದ ಮುಖಂಡರ ಸಭೆ ನಡೆಸಿ, ಮಕ್ಕಳನ್ನು ಶಾಲೆಗೆ ಕಳುಹಿಸಲು ಜಾಗೃತಿ ಮೂಡಿಸುವಂತೆ ಸಭೆಯಲ್ಲಿ ಮನವಿ ಮಾಡಿದ್ದರು.












Click it and Unblock the Notifications