Raichur: ರಾಯಚೂರಿನಲ್ಲಿ ತಣ್ಣಗಾಗದ ಬಂಡಾಯದ ಬೆಂಕಿ: ಬಿವಿ ನಾಯಕ್, ತಿಪ್ಪರಾಜು ಜೊತೆ ಬಿಜೆಪಿ ಸಂಧಾನ ವಿಫಲ!
ರಾಯಚೂರು ಮಾರ್ಚ್ 29: ಲೋಕಸಭೆ ಚುನಾವಣೆಗೆ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿ ಪಕ್ಷದಲ್ಲಿ ಬಂಡಾಯದ ಪರ್ವ ಶುರುವಾಗಿದೆ. ರಾಯಚೂರಿನಲ್ಲೂ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ.
ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ರಾಜಾ ಅಮರೇಶ್ವರ ನಾಯಕ್ ಅವರಿಗೆ ಟಿಕೆಟ್ ಘೋಷಿಸಿದೆ. ಆದರೆ ಈ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಪಡೆಯುವ ಭರವಸೆಯಲ್ಲಿದ್ದ ತಿಪ್ಪರಾಜು ಅವರಿಗೆ ಬಿಜೆಪಿ ಮಣೆ ಹಾಕಲಿಲ್ಲ. ಇದರಿಂದಾಗಿ ಅವರು ಅಸಮಾಧಾನಗೊಂಡಿದ್ದಾರೆ.

ಇನ್ನೊಂದೆಡೆ ಟಿಕೆಟ್ ಆಕಾಂಕ್ಷಿ ಬಿವಿ ನಾಯಕ್ ಕೂಡ ಬೇಸರಗೊಂಡಿದ್ದಾರೆ. ಹೀಗೆ ರಾಯಚೂರು ಲೋಕಸಭಾ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಆಕಾಂಕ್ಷಿಗಳ ಬಂಡಾಯ ಜೋರಾಗಿದೆ. ಅಸಮಾಧಾನಿತ ತಿಪ್ಪರಾಜು ಹವಾಲ್ದಾರ್ ಹಾಗೂ ಬಿವಿ ನಾಯಕ್ ಮನವೊಲಿಸಲು ಬಿಜೆಪಿ ನಾಯಕರು ಮುಂದಾಗಿದ್ದರು. ಆದರೆ ಬಿಜೆಪಿ ಪ್ರಯತ್ನ ವಿಫಲವಾಗಿದೆ.
ಹೌದು... ಇಂದು ತಿಪ್ಪರಾಜು ಹವಾಲ್ದಾರ್ ಮನೆಗೆ ಭೇಟಿ ನೀಡಿದ ಚುನಾವಣಾ ಪ್ರಭಾರಿ ಶಾಸಕ ದೊಡ್ಡನಗೌಡ ಪಾಟೀಲ್ ಮತ್ತು ಚಂದ್ರಶೇಖರ ಪಾಟೀಲ್ ಹಲಗೇರಿ ಅವರೊಂದಿಗೆ ಚರ್ಚೆ ನಡೆಸಿದರು. ಆದರೆ ಬಿಜೆಪಿ ನಾಯಕರ ಪ್ರಯತ್ನ ಫಲ ನೀಡಿದಂತೆ ಕಾಣಿಸುತ್ತಿಲ್ಲ. ಹೀಗಾಗಿ ಈ ಬಗ್ಗೆ ಹೈಕಮಾಂಡ್ ಜೊತೆಗೆ ಚರ್ಚೆ ನಡೆಸುವುದಾಗಿ ದೊಡ್ಡನಗೌಡ ಅವರು ಹೇಳಿದ್ದಾರೆ.

ಇತ್ತ ರಾಯಚೂರು ಲೋಕಸಭಾ ಚುನಾವಣೆ ಬಿ ವಿ ನಾಯಕ್ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಅವರ ಬೆಂಬಲಿಗರು ಆತ್ಮಹತ್ಯೆಗೆ ಯತ್ನಿಸಿರುವುದು ನಡೆದಿದೆ. ಬಿವಿ ನಾಯಕ್ ಅವರ ಬೆಂಬಲಿಗರು ಹಾಗೂ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿ ಪ್ರತಿಭಟನೆ ಕೂಡ ಮಾಡಿದ್ದರು.
ಇದರ ಬೆನ್ನಲೆ ಬಿ ವಿ ನಾಯಕ್ ಅಸಮಾಧಾನ ನಿವಾರಣೆಗೆ ಬಳ್ಳಾರಿ ವಿಭಾಗೀಯ ಕಾರ್ಯದರ್ಶಿ ಚಂದ್ರಶೇಖರದ ಅಲಿಗೇರಿ, ರಾಯಚೂರು ಲೋಕಸಭಾ ಕ್ಷೇತ್ರದ ಪ್ರಭಾರಿ ಕುಷ್ಟಗಿ ಶಾಸಕ ದೊಡ್ಡನಗೌಡ, ಮಾನ್ವಿ ಪಟ್ಟಣದಲ್ಲಿನ ಬಿ ವಿ ನಾಯಕ್ ನಿವಾಸದಲ್ಲಿ ಮಾತುಕತೆ ನಡೆಸಿದ್ದಾರೆ. ಆದರೆ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಟಿಕೆಟ್ ಕೈ ತಪ್ಪಿರುವ ಅಭ್ಯರ್ಥಿಗಳ ಕೋಪ ತಣಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ.
ಪ್ರಸ್ತುತ ಲೋಕಸಭಾ ಕ್ಷೇತ್ರದ ಪ್ರಭಾರಿಗಳು ಬಿ ವಿ ನಾಯಕ್ ಮತ್ತು ಕಾರ್ಯಕರ್ತರ ಅಭಿಪ್ರಾಯ ಪಡೆದಿದ್ದು, ಪ್ರಸ್ತುತ ಇಲ್ಲಿನ ಪರಿಸ್ಥಿತಿಯನ್ನು ಮುಖಂಡರ ಗಮನಕ್ಕೆ ತರಲಾಗುವುದು ಎಂದು ಶಾಸಕ ದೊಡ್ಡನಗೌಡ ಅವರು ಹೇಳಿದರು.
ತಿಪ್ಪರಾಜು ಹವಾಲ್ದಾರ್ ಮನೆಗೆ ಭೇಟಿ ನೀಡಿ ಬಳಿಕ ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೊಡ್ಡನಗೌಡ ಅವರು, 'ಟಿಕೆಟ್ ಆಕಾಂಕ್ಷಿಗಳು ಬೇಸರಗೊಂಡಿದ್ದು ನಿಜ. ಆದರೆ ಅವರು ಬಂಡಾಯವೆದ್ದಿಲ್ಲ. ಅವರ ಮಾತುಗಳನ್ನು ನಾವು ಆಲಿಸಿದ್ದೇವೆ. ಇದನ್ನು ಬಿಜೆಪಿ ನಾಯಕರ ಮುಂದೆ ಪ್ರಸ್ತಾಪಿಸುತ್ತೇವೆ' ಎಂದಿದ್ದಾರೆ.
ಬಿಜೆಪಿಯಲ್ಲಿ ಬಂಡಾಯ ಕಾಂಗ್ರೆಸ್‌ಗೆ ಲಾಭ:-
ರಾಯಚೂರು ಲೋಕಸಭಾ ಟಿಕೆಟ್ ಅನ್ನು ಕುಮಾರ್ ನಾಯಕ್ ಅವರಿಗೆ ಕಾಂಗ್ರೆಸ್ ಈಗಾಗಲೇ ಘೋಷಿಸಿದೆ. ಈ ಬಾರಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕುಮಾರ್ ನಾಯಕ್ ನಡುವೆ ಸ್ಪರ್ಧೆ ನಡೆಯಲಿದೆ. ಆದರೆ ಬಿಜೆಪಿ ಆಂತರಿಕ ವಲಯದಲ್ಲಿ ಬಂಡಾಯದ ಬಿಸಿ ಹೆಚ್ಚಾಗಿದ್ದು ಶಾಸಕ ತಿಪ್ಪರಾಜು ಹವಾಲ್ದಾರ್ ಹಾಗೂ ಟಿಕೆಟ್ ಆಕಾಂಕ್ಷಿ ಬಿವಿ ನಾಯಕ್ ಅವರ ಮುನಿಸು ಶಮನಗೊಳಿಸದೇ ಇದ್ದಲ್ಲಿ ಇವರ ಮತಗಳ ಲಾಭ ಕಾಂಗ್ರೆಸ್ ಪಡೆಯುವ ಸಾಧ್ಯತೆ ಇದೆ. ಒಂದು ವೇಳೆ ಅಸಮಾಧಾನದ ಹೊಗೆ ಬೆಂಕಿ ಹೆಚ್ಚಾದರೆ ಇದರ ಲಾಭ ಕಾಂಗ್ರೆಸ್ ಪಡೆಯುವುದರಲ್ಲಿ ಅನುಮಾನವೇ ಇಲ್ಲ.












Click it and Unblock the Notifications