ರಾಮನವಮಿ ದಿನ ಬಿಹಾರದ ಮಸೀದಿಯ ಮೇಲೆ ಕೇಸರಿ ಧ್ವಜ ಹಾರಿಸಿದ ಗುಂಪು: ಎಫ್‌ಐಆರ್ ದಾಖಲು
ಪಾಟ್ನಾ, ಏಪ್ರಿಲ್ 12: ರಾಮ ನವಮಿ ಸಂದರ್ಭದಲ್ಲಿ ಬಿಹಾರದ ಮುಜಾಫರ್‌ಪುರದಲ್ಲಿ ವ್ಯಕ್ತಿಯೊಬ್ಬರು ಮಸೀದಿಯ ಗೋಡೆಯನ್ನು ಹತ್ತಿ ಅದರ ಗೇಟ್‌ನ ಮೇಲೆ ಕೇಸರಿ ಧ್ವಜವನ್ನು ಹಾಕಿರುವ ಬಗ್ಗೆ ವರದಿಯಾಗಿದೆ.
ದ್ವಿಚಕ್ರವಾಹನ, ಮಿನುಗುವ ಕತ್ತಿಗಳು ಮತ್ತು ಹಾಕಿ ಸ್ಟಿಕ್‌ಗಳನ್ನು ಹಿಡಿದು ಸವಾರಿ ಮಾಡುವ ಹಲವು ಮಂದಿ ಯುವಕರು ವ್ಯಕ್ತಿಯೊಬ್ಬರು ಮಸೀದಿಯ ಗೋಡೆಯನ್ನು ಹತ್ತಿ ಅದರ ಗೇಟ್‌ನ ಮೇಲೆ ಕೇಸರಿ ಧ್ವಜವನ್ನು ಹಾಕುವುದನ್ನು ಹುರಿದುಂಬಿಸಿದ್ದಾರೆ.
Saffron Flag Planted On Bihar Mosque On Ram Navami, Many Seen Cheering pic.twitter.com/dNYEWT9vpx
— Shoaib Siddiqui (@ShoaibS25199050) April 12, 2022
ಘಟನೆಯ ವೀಡಿಯೋ ಸದ್ಯ ವೈರಲ್ ಆಗಿದೆ. ಪುರುಷರು ಸಂತೋಷದಿಂದ ಘೋಷಣೆ ಕೂಗುವುದು. ಗೋಡೆಯ ಮೇಲೆ ಹತ್ತಿರುವ ಯುವಕನನ್ನು ಹುರಿದುಂಬಿಸುವುದು ಈ ಕಂಡು ಬಂದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ರಾಮ ನವಮಿಯನ್ನು ಆಚರಿಸುವ ಸಂದರ್ಭದಲ್ಲಿ ಯುವಕರು ಮೊಹಮ್ಮದ್‌ಪುರ ಗ್ರಾಮದ ದಕ್ ಬಾಂಗ್ಲಾ ಮಸೀದಿಯ ಮುಂದೆ ಮೆರವಣಿಗೆ ನಡೆಸಿದರು. ಘಟನೆಯಲ್ಲಿ ಎಫ್‌ಐಆರ್ ದಾಖಲಿಸಿರುವುದನ್ನು ಎಸ್‌ಎಸ್‌ಪಿ ಮುಜಾಫರ್‌ಪುರ್ ಜಯಂತ್ ಕಾಂತ್ ಖಚಿತಪಡಿಸಿದ್ದಾರೆ. ಆದರೆ ಈವರೆಗೆ ಯಾರದೇ ಬಂಧನ ನಡೆದಿಲ್ಲ. ಈ ಘಟನೆಯ ನಂತರ ಯಾವುದೇ ಕೋಮು ದಳ್ಳುರಿ ನಡೆದಿಲ್ಲ ಎಂದು ವರದಿಗಳು ಹೇಳುತ್ತವೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ಹೇಗಿದೆ?
ಈ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಾಗೇಂದ್ರ ಗುಪ್ತಾ ಎಂಬವರು, "ರಾಮನ ಬಗ್ಗೆ ಈ ಕಿಡಿಗೇಡಿಗಳಿಗೆ ಕಿಂಚಿತ್ತೂ ಕಲ್ಪನೆಯಿದ್ದರೆ ಅದನ್ನು ಮಾಡುತ್ತಿರಲಿಲ್ಲ. ಈ ಘಟನೆಗಳು ಇನ್ನು ಕಡಿಮೆಯಾಗಿಲ್ಲ. ಈ ಗೂಂಡಾಗಳನ್ನು ಶಿಕ್ಷಿಸದಿದ್ದರೆ ಭಾರತದ ಜಾತ್ಯತೀತತೆಯ ಅಂತ್ಯ ಸಮೀಪಿಸಲಿದೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
"ನಾವು ಭಾರತದಲ್ಲಿ ಮುಸ್ಲಿಮರಾಗಿರುವುದನ್ನು ಅಪರಾಧವೆಂದು ಏಕೆ ಘೋಷಿಸಬಾರದು? ಅಲ್ಲಿಗೆ ಎಲ್ಲಾವೂ ಮುಗಿಯುತ್ತದೆ ಅಲ್ಲವೇ?. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಿ. ಅಷ್ಟು ಕ್ರೂರ, ನೀಚ ಮಟ್ಟಕ್ಕೆ ನಾವು ಇಳಿದಿದ್ದೇವೆ," ಎಂದು ಯುವರಾಜ್ ಸಿಂಗ್ ಎಂಬವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಬಿಜೆಪಿಗರಿಗೆ ನಾಚಿಕೆ ಆಗುವುದಿಲ್ಲವೇ, ನೀವು ಈ ದೇಶವನ್ನು ನಾಶ ಮಾಡುತ್ತಿದ್ದೀರಿ," ಎಂದು ಅನಿಲ್ ಆಚಾರ್ಯ ಎಂಬವರು ಹೇಳಿದರೆ, "ಈವರೆಗೂ ಯಾರದೇ ಬಂಧನವಾಗಿಲ್ಲ. ಕಾನೂನು ಹಾಗೂ ಸುವ್ಯವಸ್ಥೆ ಸಂಪೂರ್ಣವಾಗಿ ಸೋತಿದೆ ಎಂಬುವುದಕ್ಕೆ ಇದುವೇ ಸಾಕ್ಷಿಯಾಗಿದೆ," ಎಂದು ಮೊಹಮ್ಮದ್ ಖುರೇಷಿ ಎಂಬವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications